ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖ್ ಅವರನ್ನು ನ. 6 ರವರೆಗೆ ಇ ಡಿ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಸುದೀರ್ಘ 12 ಗಂಟೆಗಳ ವಿಚಾರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು ಮಂಗಳವಾರ ಬೆಳಗಿನ ಜಾವ ಜಾರಿ ನಿರ್ದೇಶನಾಲಯ ಬಂಧಿಸಿತ್ತು.
Anil Deshmukh and ED
Anil Deshmukh and ED
Published on

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರನ್ನು ಮುಂಬೈ ನ್ಯಾಯಾಲಯ ನ. 6 ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಒಪ್ಪಿಸಿದೆ.

ಸುದೀರ್ಘ 12 ಗಂಟೆಗಳ ವಿಚಾರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು ಮಂಗಳವಾರ ಬೆಳಗಿನ ಜಾವ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಜೆಜೆ ಆಸ್ಪತ್ರೆಯಿಂದ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮಧ್ಯಾಹ್ನ 12 ಗಂಟೆಯ ವೇಳೆಗೆ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ ಬಿ ಜಾಧವ್ ಅವರ ಮುಂದೆ ಹಾಜರುಪಡಿಸಲಾಯಿತು. ಕಕ್ಷಿದಾರರ ವಾದ ಆಲಿಸಿದ ನ್ಯಾಯಾಧೀಶರು ದೇಶ್‌ಮುಖ್ ಅವರನ್ನು ಇ ಡಿ ವಶಕ್ಕೆ ಒಪ್ಪಿಸಿದರು.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ದೇಶಮುಖ್‌ ಮತ್ತು ಅವರ ಸಹಚರರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಆ ಬಳಿಕ ಇ ಡಿ ತನಿಖೆ ಆರಂಭಿಸಿತ್ತು.

ಸೇವೆಯಿಂದ ವಜಾಗೊಂಡಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ನಗರದ ವಿವಿಧ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿಂದ ₹ 4.7 ಕೋಟಿಗಳಷ್ಟು ಹಣ ವಸೂಲಿ ಮಾಡಿಕೊಡುವಂತೆ ಸೂಚಿಸುವ ಮೂಲಕ ದೇಶಮುಖ್‌ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡರು ಎಂಬುದು ಇ ಡಿ ವಾದವಾಗಿತ್ತು. ಸುಲಿಗೆ ಮಾಡಿದ ಹಣವನ್ನು ದೇಶ್‌ಮುಖ್ ಅವರು ತಮ್ಮ ಕುಟುಂಬ ಸದಸ್ಯರ ಒಡೆತನದಲ್ಲಿರುವ ನಾಗಪುರ ಮೂಲದ ಟ್ರಸ್ಟ್‌ಗೆ ವರ್ಗಾಯಿಸಿದ್ದಾರೆ ಎಂದು ಹೇಳಲಾಗಿತ್ತು.

ದೇಶ್‌ಮುಖ್‌ ಅವರಿಗೆ ಇ ಡಿ ಐದು ಸಮನ್ಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಅವರು ಸಮನ್ಸ್‌ಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಇದೇ ವೇಳೆ ಅವರು ತಮ್ಮ ವಿರುದ್ಧ ಸಮನ್ಸ್‌ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಅಲ್ಲದೆ ನಿರೀಕ್ಷಣಾ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಗಳನ್ನು ಸಂಪರ್ಕಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿತ್ತು.

Also Read
ವಿಚಾರಣೆಯ ದಾಖಲೆ ಸೋರಿಕೆ: ಅನಿಲ್ ದೇಶಮುಖ್ ಪರ ವಕೀಲರೊಬ್ಬರನ್ನು ಬಂಧಿಸಿದ ಸಿಬಿಐ

ದೇಶ್‌ಮುಖ್ ಅವರು ಸೋಮವಾರ ಇ ಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸುಮಾರು 12 ಗಂಟೆಗಳ ವಿಚಾರಣೆಯ ನಂತರ, ಮಂಗಳವಾರ ಬೆಳಗಿನ ಜಾವ ಅವರನ್ನು ಬಂಧಿಸಲಾಯಿತು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮತ್ತು ಇ ಡಿ ಪರ ವಕೀಲ ಶ್ರೀರಾಮ್ ಶಿರ್ಸಾಟ್‌ ಅವರು ದೇಶಮುಖ್ ಅವರನ್ನು 14 ದಿನಗಳ ಕಾಲ ಇ ಡಿ ವಶಕ್ಕೆ ಒಪ್ಪಿಸಬೇಕೆಂದು ಕೋರಿದರು. ದೇಶಮುಖ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಚೌಧರಿ, ವಕೀಲ ಅನಿಕೇತ್ ನಿಕಮ್ ಅವರು ಬಂಧನವನ್ನು ವಿರೋಧಿಸಿದರು. ಹೈಕೋರ್ಟ್‌ನಲ್ಲಿ ಇತ್ತೀಚಿನವರೆಗೆ ವಿಚಾರಣೆ ನಡೆಯುತ್ತಿದ್ದ ವೇಳೆಯೂ ಸಹ ದೇಶಮುಖ್‌ ಅವರನ್ನು ಕೇವಲ ಶಂಕಿತ ಎಂದು ಪರಿಗಣಿಸಲಾಗಿತ್ತು, ಕೇವಲ ಎರಡು ದಿನದಲ್ಲಿ ಯಾವ ಬಗೆಯ ಸಾಕ್ಷ್ಯಗಳು ಅವರ ಬಂಧನಕ್ಕೆ ಕಾರಣವಾಗಿವೆ ಎಂದು ಪ್ರಶ್ನಿಸಿದರು.

ಇ ಡಿ ತನಿಖೆ ಮಾತ್ರವಲ್ಲದೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯಿದೆಯ ನಿಬಂಧನೆಗಳಡಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಯ ಬಗ್ಗೆಯೂ ಅವರು ನ್ಯಾಯಾಲಯದ ಗಮನಸೆಳೆದರು. ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಬಾಕಿ ಇರುವುದರಿಂದ, ಇ ಡಿಯ ಈಗಿನ ಮನವಿಯನ್ನು ತಿರಸ್ಕರಿಸಬೇಕು ಎಂದು ಅವರು ವಿನಂತಿಸಿದರು.

ದೇಶಮುಖ್‌ ಅವರ ವೈದ್ಯಕೀಯ ಪರಿಸ್ಥಿತಿಯನ್ನು ವಿವರಿಸುತ್ತಾ ತಮ್ಮ ಕಕ್ಷೀದಾರರಿಗೆ ಹೃದಯ ಕಾಯಿಲೆ ಇದ್ದು, ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದರು. ವಕೀಲರ ವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ದೇಶಮುಖ್‌ ಅವರನ್ನು ಶನಿವಾರದವರೆಗೆ ಇ ಡಿ ವಶಕ್ಕೆ ಒಪ್ಪಿಸಿತು.

Kannada Bar & Bench
kannada.barandbench.com