ಪ್ರಾಣಿಗಳಿಗೂ ಮನುಷ್ಯರಂತೆ ಸಂವೇದನೆ, ಭಾವನೆಗಳಿರುತ್ತವೆ: ಬಾಂಬೆ ಹೈಕೋರ್ಟ್

ಪ್ರಾಣಿಗಳಿಗೆ ಮಾತನಾಡಲು ಸಾಧ್ಯವಾಗದ ಕಾರಣ ಅವು ತಮ್ಮ ಹಕ್ಕುಗಳನ್ನು ಕೇಳಲು ಸಾಧ್ಯವಿಲ್ಲ ಹೀಗಾಗಿ ಪ್ರಾಣಿ ಹಿಂಸೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ವ್ಯವಹರಿಸಬೇಕು ಎಂದ ಪೀಠ.
Cattle transportation
Cattle transportationImage for representative purpose

ಪ್ರಾಣಿಗಳಿಗೂ ಮನುಷ್ಯರಂತೆ ಸಂವೇದನೆ, ಭಾವನೆಗಳಿರುತ್ತವೆ. ಅವುಗಳಿಗೆ ಮಾತನಾಡಲು ಸಾಧ್ಯವಾಗದ ಕಾರಣ ಅವು ತಮ್ಮ ಹಕ್ಕುಗಳನ್ನು ಕೇಳಲು ಸಾಧ್ಯವಿಲ್ಲ ಹೀಗಾಗಿ ಪ್ರಾಣಿ ಹಿಂಸೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ವ್ಯವಹರಿಸಬೇಕು ಎಂದು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಇತ್ತೀಚೆಗೆ ತಿಳಿಸಿದೆ [ಅನ್ಸಾರ್ ಅಹ್ಮದ್ ಖುರೇಷಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾ. ಜಿ ಎ ಸನಪ್ ಅವರಿದ್ದ ಏಕಸದಸ್ಯ ಪೀಠ “ಪ್ರಾಣಿಗಳಿಗೆ ಮನುಷ್ಯರಂತೆ ಭಾವನೆ, ಸಂವೇದನೆ ಹಾಗೂ ಇಂದ್ರಿಯಗಳಿವೆ. ಒಂದೇ ವ್ಯತ್ಯಾಸವೆಂದರೆ ಅವುಗಳಿಗೆ ಮಾತನಾಡಲು ಸಾಧ್ಯವಿಲ್ಲ. ಹೀಗಾಗಿ ಕಾನೂನಿನಡಿ ಅವುಗಳಿಗೆ ಹಕ್ಕು ಒದಗಿಸಲಾಗಿದ್ದರೂ ಆ  ಹಕ್ಕುಗಳನ್ನು ಅವು ಪ್ರತಿಪಾದಿಸಲು ಸಾಧ್ಯವಿಲ್ಲ. ಪ್ರಾಣಿಗಳ ಹಕ್ಕು, ಕಲ್ಯಾಣ ಹಾಗೂ ರಕ್ಷಣೆಯ ಬಗ್ಗೆ ಕಾನೂನಿನ ಪ್ರಕಾರ ಸಂಬಂಧಪಟ್ಟವರು ಕಾಳಜಿ ವಹಿಸಬೇಕು. ಯಾವುದೇ ರೂಪದಲ್ಲಿ ಪ್ರಾಣಿಗಳ ವಿರುದ್ಧದ ಕ್ರೌರ್ಯ ಪ್ರಕರಣಗಳನ್ನು ಪರಿಗಣಿಸುವಾಗ ಅಂತಹ ಪ್ರಕರಣದಲ್ಲಿ ಸೂಕ್ಷ್ಮವಾಗಿ ನಡೆದುಕೊಂಡು ತೀರ್ಪು ನೀಡಬೇಕು” ಎಂದಿತು.

ತಮಗೆ ಪ್ರಾಣಿಗಳ ಮಾರಾಟ ಮತ್ತು ಖರೀದಿಯ ಪರವಾನಗಿ ಇರುವುದರಿಂದ 39 ಗೋವುಗಳ ಪಾಲನೆಗೆ ಅವಕಾಶ ನೀಡುವಂತೆ ನಿರ್ದಿಷ್ಟ ವ್ಯಕ್ತಿಗಳು ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಾಣಿಗಳನ್ನು ಅಮಾನವೀಯ ರೀತಿಯಲ್ಲಿ ಅಕ್ರಮವಾಗಿ ಟ್ರಕ್‌ಗಳಲ್ಲಿ ಸಾಗಿಸುತ್ತಿದ್ದಾಗ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿಯಲ್ಲಿ ಆ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತಾವು ಅಪರಾಧ ಎಸಗಿಲ್ಲ ಪ್ರಾಣಿಗಳ ಮಾರಾಟ ಮತ್ತು ಖರೀದಿ ಪರವಾನಗಿ ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿದ್ದ ಅರ್ಜಿದಾರರು ಪ್ರಾಣಿಗಳ ಪಾಲನೆಗಾಗಿ ಅರ್ಜಿ ಸಲ್ಲಿಸಿದ್ದರು.  

ನಾಗಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು.  ಈ ಆದೇಶವನ್ನು ಸೆಷನ್ಸ್‌ ನ್ಯಾಯಾಲಯ ಎತ್ತಿಹಿಡಿದಿದ್ದರಿಂದ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ಅಂತಿಮ ತೀರ್ಪು ಹೊರಬರಲು ಸಾಕಷ್ಟು ಸಮಯ ಹಿಡಿಯುವುದರಿಂದ ತಾವು ಅವುಗಳ ಹಾಲು ಮಾರಿ ಹಣ ಗಳಿಸಲು ಸಹಾಯಕವಾಗುತ್ತದೆ ಎಂದು ಕೋರಿದ್ದರು.

Also Read
ಗೋ ಹತ್ಯೆ ನಿಷೇಧ ಕಾಯಿದೆ: ನವೆಂಬರ್‌ 15ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದ ಕರ್ನಾಟಕ ಹೈಕೋರ್ಟ್‌

ಆದರೆ ಪ್ರಾಣಿಗಳ ಸಾಗಾಟ ನಿಯಮಾವಳಿ 1978ನ್ನು ಉಲ್ಲಂಘಿಸಿ ವಾಹನಗಳ ಸಾಮರ್ಥ್ಯ ಮೀರಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಅವುಗಳಿಗೆ ಮೇವು, ನೀರಿನ ವ್ಯವಸ್ಥೆಯನ್ನೂ ಮಾಡಿರಲಿಲ್ಲ.  ಹಾಲು ಕೊಡುವ ಗೋವುಗಳನ್ನು ಕ್ರೂರ ಸ್ಥಿತಿಯಲ್ಲಿ ಸಾಗಿಸಲಾಗಿದ್ದು ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಲೀಕರನ್ನು ಆರೋಪಿಗಳನ್ನಾಗಿ ಮಾಡಿರಲಿಲ್ಲ ಎಂಬುದು ದಾಖಲೆಗಳ ಪರಿಶೀಲನೆಯಿಂದ ತಿಳಿದುಬರುತ್ತದೆ” ಎಂದು ನ್ಯಾಯಾಲಯ ನುಡಿಯಿತು.

ಪ್ರಾಣಿಗಳ ಮೇಲಿನ ಕ್ರೌರ್ಯದ ಆರೋಪಗಳನ್ನು ಒಳಗೊಂಡ ಪ್ರಕರಣಗಳಲ್ಲಿ, ಪ್ರಾಣಿಗಳ ಮಾಲೀಕರಿಗೆ ಪಾಲನೆಯನ್ನು ಹಸ್ತಾಂತರಿಸುವುದು ಸರಿಯಲ್ಲ ಎಂದಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಅವಲಂಬಿಸಿದ ನ್ಯಾಯಮೂರ್ತಿ ಸನಪ್ ಅರ್ಜಿದಾರರ ವಶಕ್ಕೆ ಗೋವುಗಳನ್ನು ಒಪ್ಪಿಸಲು ನಿರಾಕರಿಸಿದರು. ಅಲ್ಲಿಯವರೆಗೂ ಪ್ರಾಣಿಗಳನ್ನು ವಶಕ್ಕೆ ಪಡೆಯುವಂತೆ ನೋಂದಾಯಿತ ಗೋಶಾಲೆಯಾದ ಮಾ ಪ್ರತಿಷ್ಠಾನಕ್ಕೆ ನ್ಯಾಯಾಲಯ ಸೂಚಿಸಿತು.

ತಿಂಗಳಿಗೆ ಎರಡು ಬಾರಿ ಪಶುವೈದ್ಯಕೀಯ ಅಧಿಕಾರಿಯೊಂದಿಗೆ ಗೋಶಾಲೆಗೆ ಭೇಟಿ ನೀಡಬೇಕು ಎಂದು  ಪೊಲೀಸ್‌ ಠಾಣಾಧಿಕಾರಿಗೆ ಸೂಚಿಸಿದ ನ್ಯಾಯಾಲಯ ಅಂತಹ ಭೇಟಿಯ ವರದಿಯನ್ನು ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬೇಕು ಎಂದಿತು.

Related Stories

No stories found.
Kannada Bar & Bench
kannada.barandbench.com