ಗೋ ಹತ್ಯೆ ನಿಷೇಧ ಕಾಯಿದೆ: ನವೆಂಬರ್‌ 15ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದ ಕರ್ನಾಟಕ ಹೈಕೋರ್ಟ್‌

ಆಗಸ್ಟ್‌ 26ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸುವುದಕ್ಕಾಗಿ ಸೆ.8 ರಂದು ಅರ್ಜಿಗಳನ್ನು ಪಟ್ಟಿ ಮಾಡಿತ್ತು. ಅದರ ಪ್ರಕಾರ ಅರ್ಜಿಗಳ ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕಿದೆ ಎಂದ ಎಜಿ ನಾವದಗಿ.
Cow and Karnataka HC
Cow and Karnataka HC

ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020’ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್‌ 15ಕ್ಕೆ ನಿಗದಿಪಡಿಸಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರಿಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಆಗಸ್ಟ್‌ 26ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸುವುದಕ್ಕಾಗಿ ಇಂದು (ಸೆಪ್ಟೆಂಬರ್‌ 8) ಅರ್ಜಿಗಳನ್ನು ಪಟ್ಟಿ ಮಾಡಿತ್ತು. ಅದರ ಪ್ರಕಾರ ಅರ್ಜಿಗಳ ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕಿದೆ” ಎಂದು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದರು.

ಮಧ್ಯಂತರ ಅರ್ಜಿದಾರರೊಬ್ಬರ ಪರ ವಕೀಲರು, “ಸರ್ಕಾರ ಜಾರಿಗೆ ತಂದಿರುವ ಕಾಯಿದೆ ಪರವಾಗಿ ಅರ್ಜಿ ಸಲ್ಲಿಸಲಾಗಿದ್ದು, ತಮ್ಮ ಮಧ್ಯಂತರ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸಬೇಕು” ಎಂದು ಕೋರಿದರು.

ಪ್ರಕರಣ ಸಂಬಂಧಿಸಿದ ಎಲ್ಲ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಈ ಹಿಂದೆಯೇ ತಿಳಿಸಿದೆ ಎಂದು ನಾವದಗಿ ಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಪೀಠವು ನವೆಂಬರ್‌ 15ಕ್ಕೆ ವಿಚಾರಣೆ ನಿಗದಿಪಡಿಸಿತಲ್ಲದೆ ಎಲ್ಲರ ವಾದವನ್ನೂ ಆಲಿಸುವುದಾಗಿ ತಿಳಿಸಿತು.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಗೋ ಹತ್ಯೆ ನಿಷೇಧ ಕಾಯಿದೆಯನ್ನು ಬಲವಾಗಿ ಸಮರ್ಥಿಸಿದ್ದರು. “ಕರ್ನಾಟಕ ಆರ್ಥಿಕತೆ ಕೃಷಿ ಪ್ರಧಾನವಾಗಿದ್ದು, ಇದಕ್ಕೆ ಗೋವಿನ ಸಂತತಿ ಅತ್ಯಗತ್ಯ. ರಾಜ್ಯದ ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ಕ್ಷೇತ್ರದಿಂದ 1.26 ಲಕ್ಷ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಜಾನುವಾರುಗಳಿಂದ 52,688 ಕೋಟಿ ರೂಪಾಯಿ ಜಿಡಿಪಿಗೆ ಕೊಡುಗೆ ಇದೆ. ರಾಜ್ಯದಲ್ಲಿ ಶೇ.80ರಷ್ಟು ರೈತರು ಎರಡು ಹೆಕ್ಟೇರ್‌ಗೂ ಕಡಿಮೆ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್‌ ಬದಲಿಗೆ ಜಾನುವಾರುಗಳನ್ನೇ ಅವಲಂಬಿಸಿದ್ದಾರೆ” ಎಂದು ಆಕ್ಷೇಪಣೆಯನ್ನು ಉಲ್ಲೇಖಿಸಿ ಹೇಳಿದರು.

“ಎತ್ತು ಮತ್ತು ಕೋಣಗಳನ್ನು ಹೈನುಗಾರಿಕೆಗೆ ಮಾತ್ರವಲ್ಲ, ಕೃಷಿ ಚಟುವಟಿಕೆ ಮತ್ತು ಸಂತಾನೋತ್ಪತ್ತಿಗೆ ಬಳಸಲಾಗುತ್ತದೆ. ಸೆಗಣಿಯಿಂದ ಬಯೋಗ್ಯಾಸ್‌ ಉತ್ಪತ್ತಿ ಮಾಡಲಾಗುತ್ತದೆ. ಒಂದು ಎತ್ತು ದಿನಕ್ಕೆ ಸರಾಸರಿ 15 ರಿಂದ 20 ಕೆ.ಜಿ ಸೆಗಣಿ ಮತ್ತು 10 ರಿಂದ 12 ಲೀಟರ್‌ ಗಂಜಲ ನೀಡುತ್ತದೆ. ಒಂದು ಕೆ.ಜಿ ಸೆಗಣಿಯಿಂದ 40 ಲೀಟರ್‌ ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ. ಸೆಗಣಿ ಮತ್ತು ಗಂಜಲವನ್ನು ಸಾವಯವ ಗೊಬ್ಬರವಾಗಿ ಬಳಸಬಹುದು. ಜಾನುವಾರು 19ನೇ ಗಣತಿ ಪ್ರಕಾರ ಜಾನುವಾರಗಳ ಸಂಖ್ಯೆ 95,16,484ರಷ್ಟಿತ್ತು. ಜಾನುವಾರು 20ನೇ ಗಣತಿ ಪ್ರಕಾರ 84,69,004ಕ್ಕೆ ಇಳಿಕೆಯಾಗಿದೆ. ಈ ಎಲ್ಲಾ ಕಾರಣ ಗಮನಿಸಿ ಜಾನುವಾರುಗಳ ಸಂತತಿಯನ್ನು ಸಂರಕ್ಷಣೆ ಮಾಡುವುದು ಅಗತ್ಯ ಎಂಬುದನ್ನು ಗಣನೆಗೆ ತೆಗೆದುಕೊಂಡು ಕಾಯಿದೆ ರೂಪಿಸಲಾಗಿದೆ” ಎಂದು ರಾಜ್ಯ ಸರ್ಕಾರ ಆಕ್ಷೇಪಣೆಯಲ್ಲಿ ವಿವರಿಸಿದೆ.

ಅಲ್ಲದೇ, 'ರಾಜ್ಯದಲ್ಲಿ ಜಾನುವಾರು ಸಾಗಣೆ ಮಾಡುವವರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆʼ ಎಂದು ಎಂದು ಎಜಿ ನಾವದಗಿ ಈ ಹಿಂದೆ ತಿಳಿಸಿದ್ದರು.

ಮನವಿದಾರರ ವಾದ: ಕರ್ನಾಟಕದಲ್ಲಿ ಎಲ್ಲಾ ವಯಸ್ಸಿನ ಆಕಳು, ಕರು, ಗೂಳಿ, ಎತ್ತು ಹಾಗೂ ಹದಿಮೂರು ವರ್ಷಗಳ ಒಳಗಿನ ಕೋಣ ಅಥವಾ ಎಮ್ಮೆಗಳ ಹತ್ಯೆಯನ್ನು ನಿಷೇಧಿಸಲು ಸರ್ಕಾರವು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ರೂಪಿಸಿದೆ. ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ದೊರೆತಿದ್ದು, ವಿಧಾನ ಪರಿಷತ್‌ನಲ್ಲಿ ಅನುಮೋದನೆ ಸಿಕ್ಕಿರಲಿಲ್ಲ. ಹೀಗಾಗಿ, ಸುಗ್ರೀವಾಜ್ಞೆ ಮೂಲಕ ನಿಯಮ ಜಾರಿ ಮಾಡಲು ಸರ್ಕಾರವು ರಾಜ್ಯಪಾಲರ ಅನುಮತಿ ಕೋರಿತ್ತು.

ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದರಿಂದ ರಾಜ್ಯ ಸರ್ಕಾರವು ವಿಧೇಯಕವನ್ನು ಸುಗ್ರೀವಾಜ್ಞೆಯ ಮೂಲಕ ಕಾನೂನಾಗಿಸಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು “1964 ರಿಂದಲೂ ರಾಜ್ಯದಲ್ಲಿ ಜಾನುವಾರು ಸಂರಕ್ಷಣೆ ಮತ್ತು ಗೋಹತ್ಯೆ ತಡೆ ಕಾಯಿದೆ ಜಾರಿಯಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಜಾನುವಾರು ರಕ್ಷಣೆ ಹೆಸರಿನಲ್ಲಿ ಸುಗ್ರೀವಾಜ್ಞೆ ತರುವ ಅಗತ್ಯವಿರಲಿಲ್ಲ” ಎಂದು ವಾದಿಸಿದ್ದಾರೆ.

Also Read
ಗೋಹತ್ಯೆ ನಿಷೇಧ ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು?

“ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಸಂವಿಧಾನದ ಮೂಲ ತತ್ವ ಮತ್ತು ಆಶಯಗಳಿಗೆ ವಿರುದ್ಧವಾಗಿದೆ. ಮುಸ್ಲಿಮರು, ದಲಿತರು ಮತ್ತು ಇತರೆ ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಸಿಯುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ವಿಧಾನ ಪರಿಷತ್‌ನಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಗದಿದ್ದರೂ ಸುಗ್ರೀವಾಜ್ಞೆಯ ಮೂಲಕ ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಸಂವಿಧಾನದ ಆಶಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು” ಎಂದು ಅರ್ಜಿದಾರರು ಕೋರಿದ್ದಾರೆ.

“ಬಿಹಾರ ಮತ್ತು ಗುಜರಾತ್‌ ರಾಜ್ಯದಲ್ಲಿ ಜಾರಿಗೊಳಿಸಿರುವ ಕಾಯಿದೆಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ 15 ವರ್ಷ ಮೀರಿದ ರಾಸುಗಳು ವ್ಯವಸಾಯ ಅಥವಾ ಹೈನುಗಾರಿಕೆಗೆ ಉಪಯೋಗಕ್ಕೆ ಬರುವುದಿಲ್ಲ. ಅಂತಹ ಹಸು ಹಾಗೂ ಎತ್ತುಗಳನ್ನು ಕಸಾಯಿಖಾನೆಗೆ ರೈತರು ಮಾರಾಟ ಮಾಡಬಹುದು ಎಂದು ಹೇಳಿದೆ” ಎಂಬುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com