

ನಾಲ್ಕು ವರ್ಷಗಳ ಹಿಂದೆ ಅಂದರೆ 2022ರಲ್ಲಿ ನಡೆದಿದ್ದ ಅಂಕಿತಾ ಭಂಡಾರಿ ಹತ್ಯೆ ವಿಚಾರವಾಗಿ ತಮ್ಮ ಮಾನಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಹಲವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.
ಕೊಲೆ ಪ್ರಕರಣದಿಂದ ತನ್ನ ಹೆಸರನ್ನು ಕೈಬಿಡಬೇಕು ಮತ್ತು ಆರೋಪಿತರು ₹2 ಕೋಟಿ ಪರಿಹಾರ ನೀಡಬೇಕು ಎಂದು ಅವರು ಕೋರಿದ್ದಾರೆ. ಪ್ರಕರಣದ ವಿಚಾರಣೆ ನಾಳೆ (ಬುಧವಾರ) ನಡೆಯುವ ಸಾಧ್ಯತೆ ಇದೆ.
ಸೆಪ್ಟೆಂಬರ್ 2022 ರಲ್ಲಿ ಉತ್ತರಾಖಂಡದಲ್ಲಿ 19 ವರ್ಷದ ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕೊಲೆಗೀಡಾಗಿದ್ದರು. ಬಿಜೆಪಿ ಮಾಜಿ ನಾಯಕರೊಬ್ಬರ ಪುತ್ರ ಪುಲ್ಕಿಟ್ ಆರ್ಯ ನಡೆಸುತ್ತಿದ್ದ ರೆಸಾರ್ಟ್‌ನಲ್ಲಿ ಅತಿಥಿಗಳಿಗೆ ಲೈಂಗಿಕ ಸೇವೆ ಒದಗಿಸುವಂತೆ ಅಂಕಿತಾ ಮೇಲೆ ಒತ್ತಡ ಹೇರಲಾಗಿತ್ತು ಎನ್ನಲಾಗಿತ್ತು. ಇದನ್ನು ವಿರೋಧಿಸಿದ್ದ ಆಕೆಯ ಶವ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಪುಲ್ಕಿಟ್ ಆರ್ಯ ಇನ್ನಿಬ್ಬರನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಘಟನೆಯ ಬಳಿಕ ಹೊಸದೊಂದು ವಿವಾದ ಎದ್ದಿತ್ತು. ಅಂಕಿತಾಗೆ ಲೈಂಗಿಕ ಸುಖದ ಬೇಡಿಕೆ ಇಟ್ಟಿದ್ದು ಒಬ್ಬ ಹಿರಿಯ ನಾಯಕ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ರಾಥೋರ್ ಅವರ ಪತ್ನಿ ಉರ್ಮಿಲಾ ಸನಾವರ್ ದೂರಿದ್ದರು. ಅವರು ಬಿಡುಗಡೆ ಮಾಡಿದ್ದಾರೆ ಎನ್ನಲಾದ ಆಡಿಯೊ ತುಣುಕಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಹಾಗೂ ಪಕ್ಷದ ಮತ್ತೊಬ್ಬ ಹಿರಿಯ ನಾಯಕನ ಹೆಸರು ಹರಿದಾಡಿತ್ತು.
ಆದರೆ ಬಳಿಕ ಸುರೇಶ್ ರಾಥೋರ್ ಅವರು ಇದು ಕೃತಕ ಬುದ್ಧಿಮತ್ತೆ ಬಳಸಿದ ಆಡಿಯೊ ಆಗಿದ್ದು ಪಕ್ಷದ ಮಾನಹಾನಿಗೆ ಉರ್ಮಿಲಾ ಸನಾವರ್ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದರು. ದುಷ್ಯಂತ್ ಗೌತಮ್ ಕೂಡ ಆರೋಪ ನಿರಾಕರಿಸಿದ್ದರು.
ಅಲ್ಲದೆ ನ್ಯಾಯಲಯದಲ್ಲಿ ಮೊಕದ್ದಮೆಯನ್ನೂ ಹೂಡಿದ ಅವರು ಇದು ತಮ್ಮ ಮಾನಹಾನಿ ಮಾಡಲು ಬಳಸಲಾಗಿರುವ ಸುಳ್ಳು ಸುದ್ದಿಯಾಗಿದೆ. ಡಿಸೆಂಬರ್ 24, 2025ರಿಂದ ಅವಹೇಳನಕಾರಿ ವಿಡಿಯೋಗಳು ಮತ್ತು ಪೋಸ್ಟ್‌ಗಳು ವೈರಲ್ ಆಗಿವೆ. ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಉರ್ಮಿಲಾ ಸನಾವರ್ ಮತ್ತು ಸುರೇಶ್ ರಾಥೋರ್ ವಿರುದ್ಧ ಉತ್ತರಾಖಂಡ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ತನಿಖೆಯಲ್ಲಿ ತನ್ನ ವಿರುದ್ಧ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ದುಷ್ಯಂತ್ ಗೌತಮ್ ಹೇಳಿದ್ದಾರೆ.