Cafe Coffee Day
Cafe Coffee Day

ಕೆಫೆ ಕಾಫಿ ಡೇ ವಿರುದ್ಧ ದಿವಾಳಿತನ ಅರ್ಜಿ ಸ್ವೀಕಾರ: ಎನ್‌ಸಿಎಲ್‌ಟಿ ಆದೇಶ ಪ್ರಶ್ನಿಸಿ ಮಾಳವಿಕಾ ಹೆಗ್ಡೆ ಮೇಲ್ಮನವಿ

ದಿವಾಳಿತನದ ಅರ್ಜಿಯ ಸ್ವೀಕಾರದ ಅಂಶ ಮತ್ತು ಎನ್‌ಸಿಎಲ್‌ಟಿ ಆದೇಶ ತಡೆ ಹಿಡಿಯಬೇಕೆ ಎಂಬುದರ ಕುರಿತು ಎನ್‌ಸಿಎಲ್‌ಎಟಿ ಚೆನ್ನೈ ಪೀಠ ಶುಕ್ರವಾರ ಆದೇಶ ಕಾಯ್ದಿರಿಸಿದೆ.

ಕರ್ನಾಟಕ ಮೂಲದ ಜಾಗತಿಕ ಕಾಫೀ ಉದ್ಯಮ ಕೆಫೆ ಕಾಫಿ ಡೇ (ಸಿಸಿಡಿ) ವಿರುದ್ಧ ದಿವಾಳಿತನ ಅರ್ಜಿ ಸ್ವೀಕರಿಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಇತ್ತೀಚಿನ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ (ಎನ್‌ಸಿಎಲ್‌ಎಟಿ) ಮೇಲ್ಮನವಿ ಸಲ್ಲಿಸಲಾಗಿದೆ.

ಸಿಸಿಡಿಯ ಮಾತೃಸಂಸ್ಥೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ನ ಮಾಜಿ ನಿರ್ದೇಶಕಿ  ಹಾಗೂ ಕಂಪೆನಿಯ ಪ್ರವರ್ತಕರಾಗಿದ್ದ ಉದ್ಯಮಿ ದಿವಂಗತ ವಿ ಜಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಮತ್ತು ತಾಂತ್ರಿಕ ಸದಸ್ಯರಾದ ಶ್ರೀಶ ಮೇರ್ಲಾ ಅವರನ್ನೊಳಗೊಂಡ ಎನ್‌ಸಿಎಲ್‌ಎಟಿ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

Also Read
ಕೆಫೆ ಕಾಫಿ ಡೇ ವಿರುದ್ಧ ಇಂಡಸ್ಇಂಡ್ ಬ್ಯಾಂಕ್ ಸಲ್ಲಿಸಿದ್ದ ದಿವಾಳಿತನದ ಅರ್ಜಿ ಸ್ವೀಕರಿಸಿದ ಎನ್‌ಸಿಎಲ್‌ಟಿ

ವಾದ ಆಲಿಸಿದ ಎನ್‌ಸಿಎಲ್‌ಎಟಿ ಚೆನ್ನೈ ಪೀಠ ದಿವಾಳಿತನದ ಅರ್ಜಿಗೆ ಅನುಮತಿಸಿರುವ ಬಗ್ಗೆ ಮತ್ತು ಎನ್‌ಸಿಎಲ್‌ಟಿ ಆದೇಶ ತಡೆ ಹಿಡಿಯಬೇಕೆ ಎಂಬುದರ ಕುರಿತು ಆದೇಶ ಕಾಯ್ದಿರಿಸಿತು.

ಕಾಫಿ ಡೇ ಗ್ಲೋಬಲ್‌ ವಿರುದ್ಧ ಇಂಡಸ್‌ಇಂಡ್‌ ಬ್ಯಾಂಕ್‌ ಸಲ್ಲಿಸಿದ್ದ ದಿವಾಳಿತನದ ಅರ್ಜಿಯನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಸ್ವೀಕರಿಸಿರುವುದಾಗಿ ಜುಲೈ 20ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು. ಶೈಲೇಂದ್ರ ಅಜ್ಮೀರಾ ಅವರನ್ನು ಮಧ್ಯಂತರ ಪರಿಹಾರ ವೃತ್ತಿಪರರನ್ನಾಗಿ ನ್ಯಾಯಾಲಯ ನೇಮಿಸಿತ್ತು.

ಕಾಫಿ ಡೇ ₹ 94 ಕೋಟಿಗೂ ಅಧಿಕ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದೆ ಎಂದು ಇಂಡಸ್‌ಇಂಡ್ ಬ್ಯಾಂಕ್ ಆರೋಪಿಸಿತ್ತು. ಬ್ಯಾಂಕ್‌ನ ಅರ್ಜಿ ಆಧರಿಸಿ ಎನ್‌ಸಿಎಲ್‌ಟಿ ದಿವಾಳಿತನದ ಅರ್ಜಿ ಸ್ವೀಕರಿಸಿತ್ತು.

ಮಾಳವಿಕಾ ಅವರ ಪರವಾಗಿ ಎನ್‌ಸಿಎಲ್‌ಎಟಿಗೆ ಪಿ ಎಚ್‌ ಅರವಿಂದ್‌ ಪಾಂಡಿಯನ್‌ ಮೇಲ್ಮನವಿ ಸಲ್ಲಿಸಿದ್ದಾರೆ.  ಅವರ ತಂಡದಲ್ಲಿ ವಕೀಲರಾದ ಪವನ್‌ ಝಾಬಖ್‌, ಅಭಿಷೇಕ್‌ ರಾಮನ್‌ ಹಾಗೂ ಜೆರಿನ್‌ ಆಶೆರ್‌ ಸೋಜನ್‌ ಇದ್ದಾರೆ.

Related Stories

No stories found.
Kannada Bar & Bench
kannada.barandbench.com