ಮಠದಲ್ಲಿ ಸರಣಿ ಅಪರಾಧ ನಡೆದದ್ದರಿಂದ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅನ್ವಯ: ಸರ್ಕಾರದ ಸಮರ್ಥನೆ

ಪೀಠಾಧಿಪತಿಯನ್ನು ಕೇವಲ ಮಠದ ಜವಾಬ್ದಾರಿಯಿಂದ ಮಾತ್ರವೇ ದೂರವಿಡುವಂತೆ ನಿರ್ಬಂಧಕಾಜ್ಞೆ ನೀಡಿದರೆ ಅದು ಅನಾಹುತಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದ ಎಜಿ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಮಠದಲ್ಲಿ ಸರಣಿ ಅಪರಾಧಗಳು ನಡೆದಿರುವುದು ತನಿಖಾಧಿಕಾರಿಗಳಿಗೆ ಮೇಲ್ನೋಟಕ್ಕೆ ಕಂಡುಬಂದ ಕಾರಣಕ್ಕಾಗಿ ದೋಷಾರೋಪ ಪಟ್ಟಿಯಲ್ಲಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅನ್ವಯಿಸಲಾಗಿದೆ. ಹೀಗಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಎಚ್‌ ಎಂ ವಿಶ್ವನಾಥ್‌ ಮತ್ತು ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಧಾರ್ಮಿಕ ಸಂಸ್ಥೆಗಳಲ್ಲಿ ಸರಣಿಯೋಪಾದಿಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಾ ಇವೆ ಎಂದಾಗ ಮಾತ್ರವೇ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅನ್ವಯಿಸಬಹುದು ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಅಡ್ವೊಕೇಟ್‌ ಜನರಲ್‌ ನಾವದಗಿ ಅವರು ಬಲವಾಗಿ ಅಲ್ಲಗಳೆದರು.

ಈ ಕಾಯಿದೆಯನ್ನು ಮಠಕ್ಕೆ ಮಾತ್ರವೇ ನಿರ್ಬಂಧ ಮಾಡಬಹುದು. ಆದರೆ, ವಿದ್ಯಾಪೀಠಕ್ಕಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಏಕೆಂದರೆ, ಮಠ, ವಿದ್ಯಾಪೀಠ ಮತ್ತು ಟ್ರಸ್ಟ್ ಮೂರೂ ಅವಿಭಾಜ್ಯ ಅಂಗಗಳು. ವಿದ್ಯಾಪೀಠದ ಬೈಲಾ ಪ್ರಕಾರ, ಸಂಸ್ಥಾಪಕ ಅಧ್ಯಕ್ಷರು ಮತ್ತು ಅವರ ನಂತರ ಕಾಲಕಾಲಕ್ಕೆ ಬರುವ ಮಠದ ಸ್ವಾಮೀಜಿಯೇ ಅಧ್ಯಕ್ಷರಾಗಬೇಕು ಎಂಬ ನಿಯಮ ಇದೆ. ಹೀಗಾಗಿ, ಪೀಠಾಧಿಪತಿಯನ್ನು ಕೇವಲ ಮಠದ ಜವಾಬ್ದಾರಿಯಿಂದ ಮಾತ್ರವೇ ದೂರವಿಡುವಂತೆ ನಿರ್ಬಂಧಕಾಜ್ಞೆ ನೀಡಿದರೆ ಅದು ಅನಾಹುತಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

Also Read
ಮುರುಘಾ ಶ್ರೀ ಜಾಮೀನು ಪ್ರಕರಣ: ಸಂತ್ರಸ್ತ ಬಾಲಕಿಯರ ಪರ ವಕಾಲತ್ತಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್‌

ವಿಚಾರಣೆಯನ್ನು ಬಾಕಿ ಇರಿಸಿ ಎಂಬ ಶಬ್ದದ ಅರ್ಥವನ್ನು ನಿಘಂಟುಗಳ ಆಧಾರದಲ್ಲಿ ಹೇಳುವುದಾದರೆ ವಿಚಾರಣೆ ಆರಂಭವಾದ ನಂತರ ಎಂದಾಗುವುದಿಲ್ಲ. ಏಕೆಂದರೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ–1988ರ ಸೆಕ್ಷನ್‌ 8 (2)ರ ಅಡಿಯಲ್ಲಿ ಸಂಬಂಧಿಸಿದ ನ್ಯಾಯಾಲಯವು ದೋಷಾರೋಪ ಪಟ್ಟಿಯನ್ನು ಮಾತ್ರ ಪರಿಶೀಲಿಸಿ ಮಧ್ಯಂತರ ನಿರ್ಬಂಧಕ ಆಜ್ಞೆಯನ್ನು ನೀಡಬಹುದಾಗಿದೆ. ಹೀಗಾಗಿ, ವಿಚಾರಣೆ ಆರಂಭವಾಗುವ ತನಕ ಕಾಯಬೇಕಿಲ್ಲ. ಇದು ಈ ಸೆಕ್ಷನ್‌ನ ಉದ್ದೇಶ ಮತ್ತು ಸದಾಶಯ ಎಂದು ಪ್ರತಿಪಾದಿಸಿದರು.

Related Stories

No stories found.
Kannada Bar & Bench
kannada.barandbench.com