ಅನುಕಂಪ ಆಧಾರಿತ ನೇಮಕಾತಿ ಮಾಡುವದರ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಇರುವ ಅನಿಶ್ಚಿತತೆ ಮತ್ತೆ ಅದರ ವಿಳಂಬ ಧೋರಣೆ ಬಗ್ಗೆ ಸುಪ್ರೀಂ ಕೋರ್ಟ್ ಕಳೆದವಾರ ಕಳವಳ ವ್ಯಕ್ತಪಡಿಸಿದೆ.
ಇಂತಹ ಸ್ಥಿತಿಯಿಂದಾಗಿ ಕೆಲಸದ ನಿರೀಕ್ಷೆಯಲ್ಲಿ ತೊಳಲುತ್ತಿರುವ ಹಲವು ಸರ್ಕಾರಿ ನೌಕರರ ಕುಟುಂಬಗಳಿಗೆ ಅನ್ಯಾಯ ಉಂಟುಮಾಡಬಹುದು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ಹೇಳಿತು.
ಮೃತ ಸರ್ಕಾರಿ ನೌಕರರ ನೂರಾರು ಅವಲಂಬಿತರಿಗೆ ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳುವ ಅರ್ಜಿಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ವ್ಯವಹರಿಸಿದ ರೀತಿ ಬಗ್ಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
“ಅನುಕಂಪ ಆಧಾರಿತ ನೇಮಕಾತಿ ಬಗ್ಗೆ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ವ್ಯಾಪ್ತಿ, ವಿಸ್ತರಣೆ ಹಾಗೂ ಫಲಾನುಭವಿಗಳ ಸುತ್ತಲೂ ಹೆಚ್ಚಿನ ಅನಿಶ್ಚಿತತೆಗಳಿದ್ದು ಅನುಕಂಪಾಧಾರಿತ ನೇಮಕಾತಿಗಾಗಿನ ಅರ್ಜಿಗಳನ್ನು ಸಕಾರಾತ್ಮಕವಾಗಿ ನಿರ್ಧರಿಸಲು ಸಂಬಂಧಪಟ್ಟ ಅಧಿಕಾರಿಗಳು ಅಸಮರ್ಥರಾಗಿದ್ದರೆ ಅಥವಾ ಅವರಿಗೆ ಆ ಬಗ್ಗೆ ಇಚ್ಛೆ ಇಲ್ಲ” ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ “ಅನುಕಂಪಾಧಾರಿತ ನೇಮಕಾತಿ ಅರ್ಜಿಗಳನ್ನ ನಿರ್ಧರಿಸಲು ಸರ್ಕಾರಿ ಅಧಿಕಾರಿಗಳ ಕಡೆಯಿಂದ ಉಂಟಾಗುತ್ತಿರುವ ವಿಳಂಬ, ಅನುಕಂಪಾಧಾರಿತ ನೇಮಕಾತಿ ಯೋಜನೆಯ ಧ್ಯೇಯೋದ್ದೇಶಗಳನ್ನು ನಿರಾಶೆಗೊಳಿಸುವುದರಲ್ಲಿ ಸಂದೇಹವಿಲ್ಲ. ಅಂತಹ ಯೋಜನೆಗಳ ಒಟ್ಟಾರೆ ಆಶಯ ಈಡೇರಿಸುವುದಕ್ಕಾಗಿ ಸರ್ಕಾರಿ ಅಧಿಕಾರಿಗಳು ಅನುಕಂಪಾಧರಿತ ನೇಮಕಾತಿಯ ಅರ್ಜಿಗಳನ್ನು ನಿರ್ಧರಿಸುವಾಗ ಸ್ವಯಂಪ್ರೇರಿತರಾಗಿ ಮತ್ತು ತ್ವರಿತ ಮನೋಭಾವದಿಂದ ವರ್ತಿಸಬೇಕು” ಎಂದು ನ್ಯಾಯಾಲಯ ಬುದ್ಧಿಮಾತು ಹೇಳಿತು.
ಪಶ್ಚಿಮ ಬಂಗಾಳದ ಕೆಲ ಪುರಸಭೆಗಳಲ್ಲಿ ನಡೆಯಬೇಕಿದ್ದ ಅನುಕಂಪಾಧರಿತ ನೇಮಕಾತಿಯಲ್ಲಿ ಉಂಟಾಗಿರುವ ವಿಳಂಬ ಧೋರಣೆ ಪ್ರಶ್ನಿಸಿ ಕೆಲ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]