ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರ್ವೆಗಾಗಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಎಲ್ಲಾ ಅರ್ಜಿಗಳನ್ನು ಮೋಜಣಿ ವ್ಯವಸ್ಥೆಯಲ್ಲಿ ದಾಖಲಿಸಬೇಕು. ಹೀಗಾದಲ್ಲಿ ಅವುಗಳ ಮೇಲೆ ನಿಗಾ ಇಡಲು ಸುಲಭವಾಗಲಿದೆ ಎಂದು ಸರ್ವೆ ಇಲಾಖೆಯು ಸುತ್ತೋಲೆ ಹೊರಡಿಸಿದೆ ಎಂದು ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಅನುಪಾಲನಾ ವರದಿ ಸಲ್ಲಿಸಿದ್ದಾರೆ.
ಪಾರದರ್ಶಕತೆ ಮತ್ತು ಸದೃಢತೆ ಜಾರಿಗೆ ತರುವ ನಿಟ್ಟಿನಲ್ಲಿ ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಮಾಹಿತಿ ತಂತ್ರಜ್ಞಾನ ಪ್ರೇರಿತ ಪೋಡಿ ಅರ್ಜಿಗಳನ್ನು ವ್ಯವಸ್ಥಿತವಾಗಿ ಸ್ವೀಕರಿಸಿ ವಿಲೇವಾರಿ ಮಾಡುವಂತೆ ಜುಲೈ 6ರಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಈ ಸಂಬಂಧ ಆದೇಶ ಅನುಪಾಲನೆಗಾಗಿ ಅರ್ಜಿಯನ್ನು ಪುನಾ ಪಟ್ಟಿ ಮಾಡುವಂತೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶಿಸಿತ್ತು. ಇದರ ಭಾಗವಾಗಿ ಅಕ್ಟೋಬರ್ 21ರಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಅನುಪಾಲನಾ ಅಫಿಡವಿಟ್ ಸಲ್ಲಿಸಿದೆ.
ಸರ್ವೆ ಪೋಡಿಗೆ ಸಂಬಂಧಿಸಿದ ಸ್ವೀಕರಿಸಲಾಗಿರುವ ಮತ್ತು ಮುಂದೆ ಸ್ವೀಕರಿಸುವ ಎಲ್ಲಾ ಅರ್ಜಿಗಳನ್ನೂ ಮೋಜಣಿ ವ್ಯವಸ್ಥೆಗೆ ಅಳವಡಿಸಬೇಕು. ಮೋಜಣಿ ವ್ಯವಸ್ಥೆಯಲ್ಲಿ ಅರ್ಜಿಯನ್ನು ದಾಖಲಿಸದೇ ಸರ್ವೆ ಸಂಬಂಧಿತ ಕೆಲಸಗಳನ್ನು ಮಾಡುವ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರವಾಗಿ ಶಿಸ್ತುಕ್ರಮವನ್ನು ಸಂಬಂಧಿತ ಶಿಸ್ತುಪಾಲನಾ ಸಮಿತಿ ಕೈಗೊಳ್ಳಲಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಸರ್ವೆ ಇಲಾಖೆಯು ಪುನರ್ ಸರ್ವೆ ಆರಂಭಿಸಿದ್ದು, ಸ್ವಾಮಿತ್ವ ಮತ್ತು ಯುಪಿಒಆರ್ ಪ್ರಾಜೆಕ್ಟ್ ಆರಂಭಿಸಿದೆ. ಈ ಮೂಲಕ ಆಸ್ತಿಯ ಹಕ್ಕನ್ನು ಪ್ರಕ್ರಿಯೆಯ ಮೂಲಕ ಅಂತಿಮಗೊಳಿಸಲಾಗುತ್ತದೆ. ದಾಖಲೆಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯಲ್ಲಿ ಸರ್ವೆ ಇಲಾಖೆಯು ಜನರಿಗೆ ಹಲವು ರೀತಿಯ ಆನ್‌ಲೈನ್ ಸೇವೆಗಳನ್ನು ಕಲ್ಪಿಸಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಪೋಡಿ ವಿಚಾರಗಳಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಎಲ್ಲಾ ಕಂದಾಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿರುವುದನ್ನೂ ಪೀಠವು ದಾಖಲೆಯಲ್ಲಿ ಉಲ್ಲೇಖಿಸಿದೆ.
ಸಾರ್ವಜನಿಕರಿಂದ ಪೋಡಿ ಅಳತೆಗಾಗಿ ಸ್ವೀಕೃತವಾದ ಎಲ್ಲಾ ರೀತಿಯ ಅರ್ಜಿಗಳನ್ನು ಮೋಜಣಿ ತಂತ್ರಾಂಶದ ಮೂಲಕ ನಿರ್ವಹಿಸುವ ಕುರಿತು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಹೊರಡಿಸಿರುವ ಸುತ್ತೋಲೆಗೆ ವ್ಯಾಪಕ ಪ್ರಚಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದ್ದು, ನವೆಂಬರ್ 18ಕ್ಕೆ ಮನವಿ ಪಟ್ಟಿ ಮಾಡುವಂತೆ ಆದೇಶಿಸಿದೆ.