[ಆಡಳಿತಾಧಿಕಾರಿ ನೇಮಕ] ಮುರುಘಾ ಶರಣರು ನೀಡಿರುವ ಜಿಪಿಎಗೆ ಕಾನೂನಿನ ಮಾನ್ಯತೆ ಇಲ್ಲ: ಹಿರಿಯ ವಕೀಲ ಗುರುಮಠ ವಾದ

ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಎರಡೂ ಜಿಪಿಎಗಳಲ್ಲಿ ಎಲ್ಲಿಯೂ ಶರಣರು ಯಾರಿಗೂ ಹಸ್ತಾಂತರಿಸಿಲ್ಲ. ಆದ್ದರಿಂದ, ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ನೀಡಲಾಗಿದೆ ಎಂದು ವಾದ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ನೀಡಿರುವ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಲೋಪದಿಂದ ಕೂಡಿದ್ದು, ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ಆಡಳಿತಾಧಿಕಾರಿ ಪಿ ಎಸ್‌ ವಸ್ತ್ರದ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ವಾದಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕ ಸದಸ್ಯ ಪೀಠವು ನಡೆಸಿತು.

ಆಡಳಿತಾಧಿಕಾರಿ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಅವರು, ಶರಣರು ತಮ್ಮ ಉತ್ತರಾಧಿಕಾರಿ ಪತ್ರದಲ್ಲಿ ಬರೆದಿರುವಂತೆ ವಿದ್ಯಾಪೀಠ ಮಠದ ಅವಿಭಾಜ್ಯ ಅಂಗ. ಮಠದ ವಿಸ್ತೃತ ಭಾಗವೇ ವಿದ್ಯಾಪೀಠ ಮತ್ತು ಟ್ರಸ್ಟ್‌. ಇವರೆಡನ್ನೂ ಹೊರಗಿಟ್ಟು ನೋಡಲು ಬರುವುದಿಲ್ಲ. ವಿದ್ಯಾಪೀಠ ಮತ್ತು ಟ್ರಸ್ಟ್‌ನಲ್ಲಿ ಶರಣರು ಏಕೈಕ ಟ್ರಸ್ಟಿ. ವಿದ್ಯಾಪೀಠದಲ್ಲಿ ಅವರ ಅನುಮತಿ ಇಲ್ಲದೇ ಯಾರೂ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಹೀಗಾಗಿ ಮಠ, ವಿದ್ಯಾಪೀಠ ಮತ್ತು ಟ್ರಸ್ಟ್‌ಗಳಿಗೆ ತೀರ್ಮಾನ ಕೈಗೊಳ್ಳುವ ಏಕೈಕ ವ್ಯಕ್ತಿ ಶರಣರೇ ಆಗಿದ್ದಾರೆ. ಈ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಎರಡೂ ಜಿಪಿಎಗಳಲ್ಲಿ ಎಲ್ಲಿಯೂ ಅವರು ಯಾರಿಗೂ ಹಸ್ತಾಂತರಿಸಿಲ್ಲ. ಆದ್ದರಿಂದ, ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ನೀಡಲಾಗಿದೆ ಎಂದು ಸಮರ್ಥಿಸಿದರು.

ಶರಣರು ಬೇರೊಬ್ಬರಿಗೆ ಜಿಪಿಎ ನೀಡಿರುವುದು ವಿದ್ಯಾಪೀಠ ಮತ್ತು ಟ್ರಸ್ಟ್‌ ನಡೆಸಲು ಅಲ್ಲ. ಕೇವಲ ಚೆಕ್‌ಗಳಿಗೆ ಸಹಿ ಮಾಡಲು ಮಾತ್ರ. ಶರಣರು ಜಿಪಿಎ ಕೊಟ್ಟಿರುವುದು ಜೈಲಿಗೆ ಹೋದ ನಂತರ. ಕರ್ನಾಟಕ ಕೈದಿಗಳ ಕಾಯಿದೆ–1974ರ ಕಲಂ 166ರ ಅನುಸಾರ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯು ಇಂತಹ ಜಿಪಿಎ ನೀಡುವ ಮುನ್ನ ಜೈಲು ಮೇಲ್ವಿಚಾರಕರ ಪೂರ್ವಾನುಮತಿ ಪಡೆದಿರಬೇಕು. ಹೀಗಾಗಿ, ಶರಣರ ಜಿಪಿಎ ಲೋಪದಿಂದ ಕೂಡಿದ್ದು ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ವಿವರಿಸಿದರು.

Also Read
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಮಠಕ್ಕೆ ಅನುದಾನ ನೀಡುವಾಗ ಸರ್ಕಾರ ಷರತ್ತು ವಿಧಿಸಿತ್ತೇ? ಹೈಕೋರ್ಟ್‌ ಪ್ರಶ್ನೆ

ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯವು ಶರಣರನ್ನು; ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ–1988ರ ಸೆಕ್ಷನ್‌ 8 (2)ರ ಅನ್ವಯ ದೋಷಾರೋಪಕ್ಕೆ ಒಳಗಾಗಿರುವ ಮಠಾಧಿಪತಿ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ ಎಂದು ಅವರ ಅಧಿಕಾರವನ್ನು ನಿರ್ಬಂಧಿಸಿರುವ ಕಾರಣ ಮಠದ ಆಡಳಿತ ವ್ಯವಸ್ಥೆಯಲ್ಲಿ ನಿರ್ವಾತ ಉಂಟಾಗಿದೆ ಎಂದರು.

ಶರಣರು ನೋಂದಾಯಿತ ವಿದ್ಯಾಪೀಠ ಮತ್ತು ಟ್ರಸ್ಟ್‌ ಡೀಡ್‌ ಅನ್ನು ಸ್ಥಾಪಿಸಿದ್ದಾರೆ. ಹೀಗಾಗಿ, ಮಠದ ಆಡಳಿತದಲ್ಲಿ ಸರ್ಕಾರದ ಮಧ್ಯಪ್ರವೇಶ ಇಲ್ಲ ಎಂಬ ಅವರ ನಡೆಗೆ ಅವಕಾಶ ನೀಡಿದರೆ ಸರ್ಕಾರದ ಆದೇಶವನ್ನು ಅನೂರ್ಜಿತಗೊಳಿಸಿದಂತಾಗುತ್ತದೆ ಎಂದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com