[ಆರ್‌ಡಿಪಿಆರ್‌ ಎಇಇಗಳ ನೇಮಕ] ಸಿಐಡಿ ತನಿಖೆಯಲ್ಲಿ ಎಷ್ಟು ಪ್ರಕರಣಗಳಲ್ಲಿ ಸತ್ಯ ಹೊರಬಂದಿದೆ ವರದಿ ಸಲ್ಲಿಸಿ: ಹೈಕೋರ್ಟ್‌

ನೇಮಕಾತಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ವಿಜಯಕುಮಾರ್‌ ಕೊಚನೂರೆ ನೇತೃತ್ವದ ಆರ್‌ ಗಿರೀಶ್‌, ಎಂ ಬಿ ದಿಗ್ಗಣ್ಣವರ್‌, ಗೀತಾ ಬಿ ವಿ ಮತ್ತು ಎಸ್‌ ಎ ಮುಸ್ತಾಫಾ ಹುಸೇನ್‌ ಅವರ ಐವರ ಸಮಿತಿಯು ಅತ್ಯುತ್ತಮ ಕೆಲಸ ಮಾಡಿದೆ ಎಂದ ನ್ಯಾಯಾಲಯ.
Karnataka HC and KPSC
Karnataka HC and KPSC
Published on

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ (ಆರ್‌ಡಿಪಿಆರ್‌) ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ (ಎಇಇ) ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಆಕ್ಷೇಪಿಸಿರುವ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸಿಐಡಿ ನಡೆಸಿರುವ ತನಿಖೆಯಲ್ಲಿ ಎಷ್ಟು ಪ್ರಕರಣಗಳಲ್ಲಿ ಸತ್ಯ ಹೊರಬಂದಿದೆ ಎಂಬ ಮಾಹಿತಿಯನ್ನು ಒದಗಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಆರ್‌ಡಿಪಿಆರ್‌ ಎಇಇ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಹುದ್ದಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಮಾಡಿರುವ ನಿರ್ಧಾರ ಸರಿಯೋ? ತಪ್ಪೋ? ಎಂಬುದರ ಕುರಿತು ಸಾಂಪ್ರದಾಯಿಕ ನ್ಯಾಯಾಂಗ ಪರಿಶೀಲನೆ ನಡೆಸಬಹುದಾಗಿದೆ. ಓಎಂಆರ್‌ ಶೀಟುಗಳನ್ನು ತಿರುಚಲಾಗಿದೆ. ಇದನ್ನು ಎಲ್ಲಿ ನಡೆಸಲಾಗಿದೆ? ಇದು ಕೆಪಿಎಸ್‌ಸಿ ಒಳಗೆ ನಡೆದಿದೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಆಯೋಗವು 1.2.2024ರಂದು ನಿರ್ಣಯ ಕಳುಹಿಸಿದ್ದರೂ ನೇಮಕಾತಿ ಆದೇಶ ನೀಡಬೇಕಿತ್ತೇ ಅಥವಾ ನೀಡಬಾರದಿತ್ತೇ? ಅಲ್ಲದೇ, ನೇಮಕಾತಿ ಆದೇಶವು ಬಾಕಿ ಇರುವ ತನಿಖೆಗೆ ಒಳಪಟ್ಟಿರುತ್ತದೆಯೇ ಎಂಬ ವಿಚಾರವನ್ನು ನ್ಯಾಯಾಲಯ ನಿರ್ಧರಿಸಬೇಕು. ಆಯೋಗದ ನಿರ್ಣಯದ ಪ್ರಕಾರ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದೆ. 10 ಮಂದಿ ಅರ್ಜಿದಾರರನ್ನು ನೇಮಕಾತಿ ಪರಿಗಣಿಸಬಾರದು ಎಂದು ಆಯೋಗದ ನಿರ್ಣಯದಲ್ಲಿ ಹೇಳಲಾಗಿತ್ತು. ಅದಾಗ್ಯೂ, ಅವರಿಗೆ ನೇಮಕಾತಿ ಪತ್ರ ಏಕೆ ನೀಡಲಾಗಿದೆ ಎಂಬುದಕ್ಕೆ ಸಮರ್ಥನೆ ನೀಡಲಾಗುವುದು” ಎಂದರು.

“ನೇಮಕಾತಿಯು ವಿಳಂಬವಾಗಬಾರದು. ಒಂದೊಮ್ಮೆ, ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಅವರನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ. 150ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದುದರಿಂದ ನೇಮಕ ಮಾಡಲಾಗಿದೆ. ಎಇಇಗಳಿಗೆ ತರಬೇತಿ ನೀಡಲಾಗಿದೆ. ಆದರೆ, ವೇತನ ಪಾವತಿಸಲಾಗಿಲ್ಲ” ಎಂದು ಸಮರ್ಥಿಸಿದರು.

“ಕೆಪಿಎಸ್‌ಸಿ ಅಂದಿನ ಕಾರ್ಯದರ್ಶಿ ಲತಾ ಕುಮಾರಿ ಅವರು ಆಯೋಗದ ಅಜೆಂಡಾದ ಪ್ರಕಾರ ಅಕ್ರಮದ ಕುರಿತು ಪ್ರಕರಣ ದಾಖಲಿಸಬೇಕಿತ್ತು. ಆನಂತರ ಲತಾ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು. 7.2.2024ರಂದು ಲತಾ ಕುಮಾರಿ ಅವರು ರಜೆಯಲ್ಲಿ ತೆರಳಿದ್ದರು. 4.3.2024ರಂದು ಆಕೆಯನ್ನು ವರ್ಗಾವಣೆ ಮಾಡಲಾಗಿದೆ. ಈಗ ಅವರಿಗೆ ನೋಟಿಸ್‌ ಜಾರಿ ಮಾಡಿ, ಉತ್ತರ ಪಡೆಯಲಾಗುವುದು. ಅದನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಇಡೀ ಪ್ರಕರಣ ನಡೆದಿರುವುದು ಕೆಪಿಎಸ್‌ಸಿಯಲ್ಲಿ. ಅದಕ್ಕಾಗಿ ಅದನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಆದ್ದರಿಂದ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ” ಎಂದು ವಾದಿಸಿದರು.

ಕೆಪಿಎಸ್‌ಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಎಸ್‌ ರಾಜಗೋಪಾಲ ಅವರು “ಪ್ರಕರಣವನ್ನು ಸಿಬಿಐಗೆ ನೀಡುವ ಕುರಿತಾದ ನ್ಯಾಯಾಲಯದ ಪ್ರಸ್ತಾಪದ ಕುರಿತು ಆಯೋಗವು ತನ್ನ ಆಕ್ಷೇಪಣೆಯಲ್ಲಿ ಎಲ್ಲಿಯೂ ಹೇಳಿಲ್ಲ. ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೆ ಕೊಡುವುದಕ್ಕೆ ನಿರ್ಧರಿಸಿರುವುದಕ್ಕೆ ಆಯೋಗವು ಸಹಮತ ವ್ಯಕ್ತಪಡಿಸಿದೆ. ಅದಾಗ್ಯೂ, ಪ್ರಕರಣವನ್ನು ಸಿಬಿಐಗೆ ನೀಡುವ ಸಾಂವಿಧಾನಿಕ ಅಧಿಕಾರ ನ್ಯಾಯಾಲಯಕ್ಕಿದೆ” ಎಂದು ಪೀಠ ಹಾಕಿದ ನಿರ್ದಿಷ್ಟ ಪ್ರಶ್ನಿಗೆ ಉತ್ತರಿಸಿದರು.

ಆಗ ಪೀಠವು “ಕೋರಂ ಇರದಿದ್ದರೂ ನೇಮಕಾತಿ ಶಿಫಾರಸ್ಸು ಮಾಡಲಾಗಿದೆ. ಆಯೋಗದ ಕಾರ್ಯದರ್ಶಿಯು ನೇಮಕ ಮಾಡದಂತೆ ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅದಾಗ್ಯೂ, ನೇಮಕಾತಿ ಆದೇಶ ನೀಡಲಾಗಿದೆ. ಇಲ್ಲಿ ಮುಖ್ಯ ಕಾರ್ಯದರ್ಶಿ ಭಾಗಿಯಾಗಿದ್ದಾರೆ. ಹೀಗಿರುವಾಗ ಯಾವುದೇ ಪೊಲೀಸ್‌ ಅಧಿಕಾರಿ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ತನಿಖೆ ಒಳಪಡಿಸಲಾಗುತ್ತದೆಯೇ?” ಎಂದು ಮೌಖಿಕವಾಗಿ ಕೇಳಿತು.

Also Read
[ಸಹಾಯಕ ಎಂಜಿನಿಯರ್‌ ನೇಮಕದಲ್ಲಿ ಅಕ್ರಮ] ಸೂಕ್ತ ಸಂದರ್ಭದಲ್ಲಿ ಪ್ರಕರಣ ಸಿಬಿಐ ತನಿಖೆಗೆ: ಹೈಕೋರ್ಟ್‌

ಅಲ್ಲದೇ, “ಕಳೆದ ಐದು ವರ್ಷಗಳಲ್ಲಿ ಎಷ್ಟು ಸಿಐಡಿ ತನಿಖೆ ನಡೆಸಲಾಗಿದೆ. ಎಷ್ಟರಲ್ಲಿ ಸತ್ಯ ಹೊರಬಂದಿದೆ. ಇದರಿಂದ ಸಕಾರಾತ್ಮಕ ಕ್ರಮವಾಗಿದೆ ಎಂಬುದರ ಕುರಿತು ಸರ್ಕಾರ ಮಾಹಿತಿ ಒದಗಿಸಬೇಕು” ಎಂದು ಹೇಳಿದೆ. ಸಿಬಿಐ ತನಿಖೆಗೆ ಪ್ರಕರಣವನ್ನು ನೀಡಬಾರದು ಎಂದು ಸರ್ಕಾರ ವಾದಿಸಿದ್ದಕ್ಕೆ ನ್ಯಾಯಾಲಯ ಮೇಲಿನಂತೆ ಹೇಳಿತು.

ಅಲ್ಲದೇ, ಪರೀಕ್ಷಾ ಅಕ್ರಮ ಸಂಬಂಧ ಆಯೋಗದ ಸೂಚನೆಯಂತೆ ವಿಸ್ತೃತವಾಗಿ ತನಿಖೆ ನಡೆಸಿರುವ ವಿಜಯಕುಮಾರ್‌ ಕೊಚನೂರೆ ನೇತೃತ್ವದ ಆರ್‌ ಗಿರೀಶ್‌, ಎಂ ಬಿ ದಿಗ್ಗಣ್ಣವರ್‌, ಗೀತಾ ಬಿ ವಿ ಮತ್ತು ಎಸ್‌ ಎ ಮುಸ್ತಾಫಾ ಹುಸೇನ್‌ ಅವರ ಐವರ ಸಮಿತಿಯು ಅತ್ಯುತ್ತಮ ಕೆಲಸ ಮಾಡಿದೆ. ಅವರ ಕೆಲಸ ಮೆಚ್ಚಲರ್ಹ. ಕೊಚನೂರೆ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ನೇಮಕಾತಿ ಪಟ್ಟಿ ಬಿಡುಗಡೆ ಮಾಡದಂತೆ ಕೋರಿದ್ದರು. ಅದಾಗ್ಯೂ, 16 ಮಂದಿಯ ನೇಮಕಾತಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳ ನಡತೆಯಲ್ಲಿ ಕೆಲ ಬದಲಾವಣೆಯಾಗಬೇಕಿದೆ ಎಂದು ಮೌಖಿಕವಾಗಿ ಪೀಠ ಹೇಳಿತು.

Kannada Bar & Bench
kannada.barandbench.com