ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿಯ ಎಲ್ಲಾ ಅಪರಾಧಗಳು ಜಾಮೀನು ರಹಿತವೇ ಎಂಬ ಪ್ರಶ್ನೆಯನ್ನು ವಿಸ್ತೃತ ಪೀಠವು ನಿರ್ಧರಿಸಬೇಕೆಂದು ಬಾಂಬೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಕೋರಿದೆ [ಕರಿಷ್ಮಾ ಪ್ರಕಾಶ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೀಪಿಕಾ ಪಡುಕೋಣೆ ಅವರ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠ ಈ ಪ್ರಶ್ನೆಯನ್ನು ಎತ್ತಿದೆ.
ಕರಿಷ್ಮಾ ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ಆದರೆ, ಕರಿಷ್ಮಾ ಪರ ಹಿರಿಯ ವಕೀಲ ಆಬಾದ್ ಪೊಂಡಾ ಮತ್ತು ಕೇಂದ್ರ ಸರ್ಕಾರದ ಪರ ವಕೀಲ ಶ್ರೀರಾಮ್ ಸಿರ್ಸಾಟ್ ಅವರು ವಾದ ಮಂಡಿಸಿದ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರಶ್ನೆಯನ್ನು ನಿರ್ಧರಿಸುವುದು ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು. ಪ್ರಶ್ನೆ ಹೀಗಿದೆ: ಎನ್‌ಡಿಪಿಎಸ್ ಕಾಯಿದೆ- 1985ರ ಅಡಿಯಲ್ಲಿ ಎಲ್ಲ ಪ್ರಕರಣಗಳೂ ಅವುಗಳಿಗೆ ಅನ್ವಯವಾಗುವ ಶಿಕ್ಷೆಯ ಹೊರತಾಗಿ, ಅದರಲ್ಲಿಯೂ ಕೆಲವೊಂದು ಪ್ರಕರಣಗಳಲ್ಲಿ ಶಿಕ್ಷೆಯಾಗಿ ಸೆರೆವಾಸ ಕಡ್ಡಾಯವಲ್ಲದಿದ್ದರೂ ಸಹ ಜಾಮೀನು ರಹಿತವೇ?
ಕಾಯಿದೆಯ ಎಲ್ಲಾ ತಿದ್ದುಪಡಿಗಳನ್ನು ವಿಶ್ಲೇಷಿಸಿದ ನ್ಯಾ. ಡಾಂಗ್ರೆ "ಒಂದು ವೇಳೆ ಎಲ್ಲ ಅಪರಾಧವನ್ನೂ ಜಾಮೀನು ರಹಿತವಾಗಿಸಲು ಶಾಸಕಾಂಗವು ಉದ್ದೇಶಿಸಿದ್ದರೆ ಅದನ್ನು ಸ್ಪಷ್ಟವಾಗಿ ಮಾಡಿರುತ್ತಿತ್ತು, ಉದಾಹರಣೆಗೆ ಎಲ್ಲ ಅಪರಾಧಗಳನ್ನು ಸಂಜ್ಞೇಯವೆಂದು ಮಾಡಲು ಉದ್ದೇಶಿಸಿದ್ದಾಗ ಅದನ್ನು ಸ್ಪಷ್ಟ ಶಬ್ದಗಳಲ್ಲಿ ಹಾಗೆ ಹೇಳಿದೆ," ಎಂದರು.
ಸಣ್ಣ ಪ್ರಮಾಣದ ಮಾದಕ ದ್ರವ್ಯ ಇಟ್ಟುಕೊಂಡಿರುವ ಆರೋಪಿಗಳ ವಿರುದ್ಧ ಸುಧಾರಣಾ ಮಾರ್ಗ ಅಳವಡಿಸಿಕೊಳ್ಳಬೇಕೆಂದು 155ನೇ ಕಾನೂನು ಆಯೋಗದ ವರದಿ ಕರೆ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು, ನ್ಯಾ. ಡಾಂಗ್ರೆ ಅವರು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಮುಂದೆ ಪ್ರಸ್ತಾಪಿಸುವುದು ಸೂಕ್ತವೆಂದು ತಿಳಿಸಿದರು.