

ಪ್ರತಿ ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯಗಳ (ಜೆಎನ್‌ವಿ) ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರೀಯ ಶಿಕ್ಷಣ ಯೋಜನೆಗೆ ಈ ರೀತಿ ವಿರೋಧ ವ್ಯಕ್ತಪಡಿಸುವುದು "ಒಕ್ಕೂಟ ವ್ಯವಸ್ಥೆಯಲ್ಲಿ ನೀಡಬೇಕಾದ ಸಹಕಾರಕ್ಕೆ ಸ್ಫೂರ್ತಿದಾಯಕವಲ್ಲ" ಎಂದು ನ್ಯಾಯಾಲಯ ಬುದ್ಧಿವಾದ ಹೇಳಿತು.
ನವೋದಯ ಶಾಲೆ ಸ್ಥಾಪನೆ ಮೂಲಕ ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ತಾನು ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ತಮಿಳುನಾಡು ಸರ್ಕಾರ ತಿಳಿಸಿತು. ಆಗ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಈ ವಿಚಾರವನ್ನು ರಾಜಕೀಯ ಇಲ್ಲವೇ ಭಾಷಾ ವಿವಾದವನ್ನಾಗಿ ಮಾಡುವ ಬದಲು ವಿದ್ಯಾರ್ಥಿಗಳ ಒಳಿತಿನತ್ತ ಗಮನಹರಿಸುವಂತೆ ತಿಳಿಹೇಳಿತು. ಜೊತೆಗೆ ಗ್ರಾಮೀಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣಾವಕಾಶ ನಿರಾಕರಿಸುವುದು ಸರಿಯಲ್ಲ ಎಂದಿತು.
ಪ್ರತಿ ಜಿಲ್ಲೆಯಲ್ಲೂ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಕೇಂದ್ರ ಸರ್ಕಾರ ರಾಜ್ಯದ ಮೇಲೆ ಯೋಜನೆಗಳನ್ನು ಹೇರುತ್ತಿದೆ ಎಂದು ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ ವಿಲ್ಸನ್ ಅವರು ಹೇಳಿದರು. ಆದರೆ ಈ ವಾದ ಒಪ್ಪದ ನ್ಯಾಯಮೂರ್ತಿ ನಾಗರತ್ನ ಅವರು ಒಕ್ಕೂಟದಲ್ಲಿ ರಾಜ್ಯಕ್ಕಿರುವ ಸಾಂವಿಧಾನಿಕ ಸ್ಥಾನವನ್ನು ನೆನಪಿಸಿದರು.ತಮಿಳುನಾಡು ಗಣರಾಜ್ಯದ ಭಾಗವಲ್ಲವೇ ಎಂದು ಪ್ರಶ್ನಿಸಿದರು.
ಅಲ್ಲದೆ ಈ ಯೋಜನೆ ರಾಜ್ಯಗಳು ಭಾಗವಹಿಸುವ ಅಥವಾ ಇಲ್ಲದಿರುವ ಆಯ್ಕೆ ನೀಡಿದೆ ಅಲ್ಲದೆ ತಮಿಳುನಾಡಿನಲ್ಲಿ ಈಗ ಅಸ್ತಿತ್ವದಲ್ಲಿರುವ ಶೈಕ್ಷಣಿಕ ಮಾನದಂಡಗಳು ನವೋದಯ ವಿದ್ಯಾಲಯಗಳಿಗಿಂತಲೂ ಮಿಗಿಲಾಗಿವೆ ಎಂಬ ವಿಲ್ಸನ್ ಅವರ ವಾದದಿಂದಲೂ ನ್ಯಾಯಾಲಯ ತೃಪ್ತವಾಗಲಿಲ್ಲ.
ಪ್ರಕರಣವನ್ನು ರಾಜಕೀಯಗೊಳಿಸುವುದರ ವಿರುದ್ಧ ವಿಚಾರಣೆಯ ಒಂದು ಹಂತದಲ್ಲಿ ಎಚ್ಚರಿಕೆ ನೀಡಿದ ನ್ಯಾಯಾಲಯ ದೇಶದೆಲ್ಲೆಡೆ 650 ನವೋದಯ ಶಾಲೆಗಳಿಗೆ ಅನುಮೋದನೆ ದೊರೆತಿದ್ದರೂ ತಮಿಳು ನಾಡು ಮಾತ್ರ ಈ ವಿಚಾರದಲ್ಲಿ ಸಹಕಾರ ನೀಡದ ಏಕೈಕ ರಾಜ್ಯವಾಗಿದೆ ಎಂದಿತು. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನವೋದಯ ವಿದ್ಯಾಲಯ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಆರು ವಾರಗಳೊಳಗೆ ಗುರುತಿಸುವಂತೆ ನಿರ್ದೇಶಿಸಿತು.
ಅಲ್ಲದೆ ತಾನು ನೀಡುತ್ತಿರುವ ಆದೇಶ ಸಂಪೂರ್ಣ ಯೋಜನೆ ಜಾರಿಗೆ ಸಂಬಂಧಿಸಿಲ್ಲ ಬದಲಿಗೆ ಕೇವಲ ಪ್ರಕ್ರಿಯೆ ಆರಂಭಿಸುವುದಕ್ಕೆ ಸೀಮಿತ ಎಂದು ಪೀಠ ಇದೇವೇಳೆ ಸ್ಪಷ್ಟಪಡಿಸಿತು.
ಕಡೆಗೆ ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಖಾಮುಖಿ ಸಂಘರ್ಷದಲ್ಲಿ ತೊಡಗದೆ ಸಂವಾದ ಮತ್ತು ಸಹಕಾರದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿತು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅದು ನುಡಿಯಿತು.