
ಹಿಂದಿ ಸೇರಿದಂತೆ ತ್ರಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ತಮಿಳುನಾಡು ಸರ್ಕಾರ ನಿರಾಕರಿಸಿದ್ದರಿಂದ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ 2024–25ರ ಹಣಕಾಸು ವರ್ಷಕ್ಕೆ ಸಮಗ್ರ ಶಿಕ್ಷಣ ಯೋಜನೆ (ಎಸ್‌ಎಸ್‌ಎಸ್) ಅಡಿಯಲ್ಲಿ ₹2,151 ಕೋಟಿ ನಿಧಿ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಮತ್ತು ಪಿಎಂ ಶ್ರೀ ಶಾಲಾ ಯೋಜನೆಗೆ ನಿಧಿ ವಿತರಣೆ ಜೋಡಿಸುವ ಮೂಲಕ ಬಲವಂತವಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ರಾಜ್ಯ ಸರ್ಕಾರ ದೂರಿದೆ.
ಇಂತಹ ಬಲವಂತದ ತಂತ್ರಗಳಿಗೆ ಕಾನೂನಾತ್ಮಕ ಸಮ್ಮತಿ ಇಲ್ಲ. ಇದು ದ್ವಿಭಾಷಾ ನೀತಿ ಅಳವಡಿಸಿಕೊಂಡಿರುವ ರಾಜ್ಯದ ಕಾನೂನಿಗೆ ಹೊಂದಿಕೆಯಾಗುವುದಿಲ್ಲ ಎಂದು ವಕೀಲ ಶಬರೀಶ್ ಸುಬ್ರಮಣಿಯನ್ ಅವರ ಮೂಲಕ ಸಲ್ಲಿಸಲಾದ ಮೊಕದ್ದಮೆಯಲ್ಲಿ ಹೇಳಲಾಗಿದೆ.
ಮೊಕದ್ದಮೆಯ ಮೂಲಕ ಕೋರಲಾಗಿರುವ ಒಟ್ಟು ಮೊತ್ತ ₹2291.3 ಕೋಟಿಗಳಾಗಿದ್ದು, ಅಸಲು ಮೊತ್ತದ ಜೊತೆಗೆ ಬಡ್ಡಿಯನ್ನೂ ಒಳಗೊಂಡಿದೆ.
ಎನ್ಇಪಿ ಯೋಜನೆಯಡಿ ಕೇಂದ್ರ ಸರ್ಕಾರ ತನಗೆ ದೊರೆಯಬೇಕಿದ್ದ ಕಡ್ಡಾಯ ಪಾಲನ್ನು ತಡೆ ಹಿಡಿದಿರುವುದರಿಂದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ- 2009ರ ಜಾರಿಗೆ ಮತ್ತು ತಮಿಳುನಾಡಿನಲ್ಲಿ 43.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 2.21 ಲಕ್ಷ ಶಿಕ್ಷಕರು ಮತ್ತು 32,701 ಶಾಲಾ ಸಿಬ್ಬಂದಿಯ ಸಾಂವಿಧಾನಿಕ ಹಕ್ಕುಗಳ ಅನುಷ್ಠಾನಕ್ಕೆ ಧಕ್ಕೆ ಒದಗಿದೆ ಎಂದು ತಮಿಳುನಾಡು ವಾದಿಸಿದೆ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2010 ರ ಅಡಿಯಲ್ಲಿ ಅಗತ್ಯವಿರುವ ನಿಧಿಯ 60% ರಷ್ಟು ಶಾಸನಬದ್ಧ ಪಾಲನ್ನು ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ವಿತರಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅದು ಕೋರಿದೆ.