ಒಳಾಂಗಣ ವಿನ್ಯಾಸಕಾರ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡುವ ಹಿಂದಿನ ಕಾರಣವನ್ನು ವಿವರಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠವು ನಾಗರಿಕರಿಗೆ ಕಿರುಕುಳ ನೀಡಲು ಕ್ರಿಮಿನಲ್ ಕಾನೂನುಗಳನ್ನು ನಿರ್ದಿಷ್ಟವಾಗಿ ಬಳಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ (ಅರ್ನಾಬ್ ಮನೋರಂಜನ್ ಗೋಸ್ವಾಮಿ ವರ್ಸಸ್ ಮಹಾರಾಷ್ಟ್ರ ಸರ್ಕಾರ).
ಐಪಿಸಿ ಸೆಕ್ಷನ್ 306ರ ಅರ್ಥವ್ಯಾಪ್ತಿಯಡಿ ಗಮನಿಸುವುದಾದರೆ ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗದು ಎಂದಿರುವ ನ್ಯಾಯಾಲಯವು ಮುಂದುವರೆದು ಹೀಗೆ ಹೇಳಿತು:
ಪ್ರಕರಣವೊಂದನ್ನು ಸಂವಿಧಾನದ 226ನೇ ವಿಧಿ ಮತ್ತು ಸಿಆರ್‌ಪಿಸಿಯ ಸೆಕ್ಷನ್ 482ರ ಅಡಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯೊಂದನ್ನು ವಿಚಾರಣೆ ಮಾಡುವಾಗ ಗಮನದಲ್ಲಿರಿಸಿಕೊಳ್ಳಬೇಕಾದ ಪ್ರಾಥಮಿಕ ಅಂಶಗಳನ್ನು ಅನ್ವಯಿಸುವಲ್ಲಿಯೂ ಸಹ ಹೈಕೋರ್ಟ್ ಸೋತಿದೆ ಎಂದು ಪೀಠವು ಹೇಳಿತು.
ಅರ್ಜಿದಾರರು ಭಾರತದ ನಿವಾಸಿಗಳಾಗಿದ್ದು, ತನಿಖೆ ಅಥವಾ ವಿಚಾರಣೆಯ ಸಂದರ್ಭದಲ್ಲಿ ಅವರು ಪಲಾಯನಗೈಯುವಂತಹ ಅಪಾಯ ಕಂಡುಬರುವುದಿಲ್ಲ. ಸಾಕ್ಷ್ಯ ಹಾಗೂ ಸಾಕ್ಷಿಗಳನ್ನು ತಿರುಚುವ ಭೀತಿಯೂ ಎದುರಾಗಿಲ್ಲ. ಈ ಅಂಶಗಳನ್ನು ಪರಿಗಣಿಸಿ ಅರ್ಜಿದಾರರನ್ನು ಬಿಡುಗಡೆ ಮಾಡುವ ಆದೇಶವನ್ನು ಕೈಗೊಳ್ಳಲಾಯಿತು ಎಂದು ಪೀಠವು ವಿವರಿಸಿತು.
“ಅರ್ನಾಬ್ ಗೋಸ್ವಾಮಿ ಅವರು 2020ರ ಏಪ್ರಿಲ್‌ನಿಂದ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಲುವು ಕೈಗೊಂಡಿರುವುದಕ್ಕೆ ನನ್ನನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದ್ದಾರೆ. ಅರ್ಜಿದಾರರು ಎತ್ತಿರುವ ಈ ನಿರ್ದಿಷ್ಟ ಅಂಶದ ಬಗ್ಗೆ ಹೈಕೋರ್ಟ್ ಪರಿಗಣಿಸದೇ ಇರಲು ಸಾಧ್ಯವಿರಲಿಲ್ಲ. ಈ ದೇಶದ ಹೈಕೋರ್ಟ್‌ಗಳು ಮತ್ತು ಕೆಳಹಂತದ ನ್ಯಾಯಾಲಯಗಳು ಕ್ರಿಮಿನಲ್ ಕಾನೂನಿನ ದುರ್ಬಳಕೆಯ ಬಗ್ಗೆ ಸ್ಪಂದನಶೀಲವಾಗಿರಬೇಕು" ಎಂದು ಪೀಠವು ಹೇಳಿತು.
ಮುಂದುವರೆದು, ಇಲ್ಲಿ ಹೈಕೋರ್ಟ್ ಸಾಂವಿಧಾನಿಕ ಮೌಲ್ಯ ಮತ್ತು ಮೂಲಭೂತ ಹಕ್ಕುಗಳ ಸಂರಕ್ಷಣೆಯಿಂದ ವಿಮುಖವಾಗಿದೆ. ನಾಗರಿಕರಿಗೆ ನಿರ್ದಿಷ್ಟ ಕಿರುಕುಳ ನೀಡಲು ಕ್ರಿಮಿನಲ್ ಕಾನೂನನ್ನು ಬಳಕೆ ಮಾಡಬಾರದು ಎಂದಿತು.
“ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ತಮ್ಮ ಬಾಗಿಲು ಮುಚ್ಚಬಾರದು. ವೈಯಕ್ತಿಕ ಸ್ವಾತಂತ್ರ್ಯ ನಿರಾಕರಿಸಿದ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ತೆರೆದಿರಬೇಕು. ಅಂಥ ನಿರಾಕರಣೆಯೂ ಒಂದು ದಿನಕ್ಕಾದರೂ ವಿಸ್ತರಣೆಯಾಗಬಾರದು” ಎಂದು ಪೀಠವು ಖಚಿತವಾಗಿ ನುಡಿಯಿತು.
ಮೇಲ್ಮನವಿ ವಿಲೇವಾರಿಯ ಸಂದರ್ಭದಲ್ಲಿ ಪೀಠವು, "ನಾಗರಿಕರೊಬ್ಬರು ಈ ನ್ಯಾಯಾಲಯದ ಕದ ತಟ್ಟಿದ ಸಂದರ್ಭದಲ್ಲಿ ನಮ್ಮೊಳಗಿನ ಭಾವನೆಗಳಿಗೆ ನಾವು ಅಭಿವ್ಯಕ್ತಿಯನ್ನು ಕೊಟ್ಟೆವು. ಇಂತಹ ಎಷ್ಟೋ ದನಿಗಳನ್ನು (ಅರ್ಜಿದಾರರ ರೀತಿಯಲ್ಲಿಯೇ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಿರುವವರು) ಆಲಿಸದೆ ಹೋಗಬಾರದು ಎನ್ನುವ ಪಾಲಿಸಬೇಕಾದ ತತ್ವವನ್ನು ಪುನರುಚ್ಚರಿಸುವ ಸಲುವಾಗಿ ನಾವು ಇದನ್ನು ಮಾಡಿದೆವು," ಎಂದಿತು.
ಹೈಕೋರ್ಟ್‌ನಲ್ಲಿನ ಪ್ರಕರಣದ ವಿಲೇವಾರಿಯಾಗುವವರೆಗೆ ಹಾಗೂ ಹೈಕೋರ್ಟಿನ ಆದೇಶದ ನಾಲ್ಕು ವಾರಗಳವರೆಗೆ ಮಧ್ಯಂತರ ಜಾಮೀನು ಆದೇಶ ಅಸ್ತಿತ್ವದಲ್ಲಿರಲಿದೆ. ನವೆಂಬರ್ 7ರಂದು ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್ ನಿಲುವು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ವೇಳೆ ಹೇಳಿತ್ತು.