ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಟೀಕಿಸಿದ್ದಕ್ಕಾಗಿ ಪತ್ರಕರ್ತ ಮತ್ತು ನಿರೂಪಕ ಅರ್ನಾಬ್ ಗೋಸ್ವಾಮಿ ವಿರುದ್ಧ ಸೆಪ್ಟೆಂಬರ್ 16 ರಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಲಾದ ಹಕ್ಕುಚ್ಯುತಿ ನಿರ್ಣಯ ಪ್ರಶ್ನಿಸಿ ಅರ್ನಾಬ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಅಡ್ವೊಕೇಟ್ ಆನ್ ರೆಕಾರ್ಡ್ ನಿರ್ನಿಮೇಶ್ ದುಬೆ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಬುಧವಾರ ಮಧ್ಯಾಹ್ನದ ನಂತರ ವಿಚಾರಣೆಗೆ ತೆಗೆದುಕೊಳ್ಳಲಿದೆ.
ಶಿವಸೇನಾ ಮಹಾರಾಷ್ಟ್ರದ ಎರಡೂ ಸದನಗಳಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದು ಈ ಸಂಬಂಧ 60 ಪುಟಗಳ ಹಕ್ಕುಚ್ಯುತಿ ನೊಟೀಸ್ ನೀಡಿದೆ.
ಸಂಬಂಧಪಟ್ಟ ಸದನದ ಅಥವಾ ಸದನದ ಸದಸ್ಯರ ಅಥವಾ ಸಮಿತಿಯ ಹಕ್ಕು, ಅಧಿಕಾರ ಮತ್ತು ವಿನಾಯಿತಿಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಉಲ್ಲಂಘಿಸಿದರೆ ಅಥವಾ ನಿರ್ಲಕ್ಷಿಸಿದರೆ ಹಕ್ಕುಚ್ಯುತಿಯನ್ನು ಮಂಡಿಸಬಹುದಾಗಿದೆ. ಹಕ್ಕು ಚ್ಯುತಿ ಅಥವಾ ನಿಂದನೆಗೆ ಸಂಬಂಧಿಸಿದಂತೆ ಶಿಕ್ಷೆಯನ್ನು ಸದನ ವಿಧಿಸುತ್ತದೆ.
ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ನೀಡಿದ ನೋಟಿಸ್ ಗೆ ತಮ್ಮ ರಿಪಬ್ಲಿಕ್ ಟಿವಿಯಲ್ಲಿ ಹೇಳಿಕೆ ನೀಡಿರುವ ಗೋಸ್ವಾಮಿ ಅವರು ತಾವು ಉದ್ಧವ್ ಠಾಕ್ರೆ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವುದನ್ನು ಮುಂದುವರೆಸುವುದಾಗಿ ಮತ್ತು ನೊಟೀಸ್ ನೀಡಿರುವದನ್ನು ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.