ವೀರೇಂದ್ರ ಪಪ್ಪಿ ಪ್ರಕರಣ: ವಕೀಲ ಅನಿಲ್‌ ಗೌಡ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಇ ಡಿಗೆ ಹೈಕೋರ್ಟ್‌ ಆದೇಶ

“ನೀವು (ಇಡಿ) ಅನಿಲ್‌ ವಿರುದ್ಧ ಹಲವು ಆರೋಪ ಮಾಡಿದ್ದೀರಿ? ಅದನ್ನು ಸಾಬೀತುಪಡಿಸಲು ಪೂರಕ ದಾಖಲೆ ಬೇಕಲ್ಲವೇ? ಹೂಡಿಕೆ ಮಾಡಿದ್ದಾರೆ, ಪಾಲುದಾರಾಗಿದ್ದರೆ ಎಂಬ ಸಂಗತಿ ಸತ್ಯ ಎಂದು ಒಪ್ಪಲು ದಾಖಲೆ ಬೇಕಲ್ಲವೇ?” ಎಂದು ಪ್ರಶ್ನಿಸಿದ ಪೀಠ.
ವೀರೇಂದ್ರ ಪಪ್ಪಿ ಪ್ರಕರಣ: ವಕೀಲ ಅನಿಲ್‌ ಗೌಡ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಇ ಡಿಗೆ ಹೈಕೋರ್ಟ್‌ ಆದೇಶ
Published on

ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಬಂಧನ ಪ್ರಕರಣದಲ್ಲಿ ಕೆಲ ದಾಖಲೆ ಒದಗಿಸುವಂತೆ ಜಾರಿ ನಿರ್ದೇಶನಾಲಯ (ಇ ಡಿ) ನೀಡಿರುವ ಸಮನ್ಸ್‌ ಪ್ರಶ್ನಿಸಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಪುತ್ರ ಹಾಗೂ ವಕೀಲ ಅನಿಲ್ ಗೌಡ ಸಲ್ಲಿಸಿದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಸೋಮವಾರ (ಸೆಪ್ಟೆಂಬರ್‌̇ 8) ಆದೇಶ ಪ್ರಕಟಿಸುವುದಾಗಿ ಹೇಳಿದೆ. ಅಲ್ಲಿಯವರೆಗೆ ಅನಿಲ್‌ ಗೌಡ ವಿರುದ್ಧ ಆತುರ ಕ್ರಮಕೈಗೊಳ್ಳಬಾರದು ಎಂದು ಇ ಡಿ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ವಕೀಲ ಅನಿಲ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಮ್‌ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರ ಪರ ಹಿರಿಯ ವಕೀಲ ವಿಕಾಸ್‌ ಪಹ್ವಾ ಅವರು “ಅರ್ಜಿದಾರರು ವೃತ್ತಿಯಲ್ಲಿ ವಕೀಲರಾಗಿದ್ದು ಈ ನೆಲೆಯಲ್ಲಿ ಕೆ ಸಿ ವೀರೇಂದ್ರರಿಗೆ ಸಲಹೆ ನೀಡಿದ್ದಾರೆ ಅಷ್ಟೇ. ಇದನ್ನು ಪರಿಗಣಿಸದೆ ಅವರನ್ನು ಸುಖಾಸುಮ್ಮನೆ ಇ ಡಿ ವಿಚಾರಣೆಗೊಳಪಡಿಸಬಾರದು. ಇ ಡಿಯ ವ್ಯಾಪ್ತಿ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ಈ ಎಲ್ಲ ಅಂಶದ ಮೇರೆಗೆ ಇಡಿ ಜಾರಿಗೊಳಿಸಿರುವ ಸಮನ್ಸ್  ತಡೆ ನೀಡಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಇ ಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಅರವಿಂದ್ ಕಾಮತ್ ಅವರು “ವಕೀಲರಾಗಿರುವ ಕಾರಣಕ್ಕೆ ಅರ್ಜಿದಾರರಿಗೆ ಇ ಡಿ ಸಮನ್ಸ್ ಜಾರಿಗೊಳಿಸಿಲ್ಲ. ಬದಲಿಗೆ ಕೆ ಸಿ ವೀರೇಂದ್ರ ಅವರ ಕಂಪನಿ ಸೇರಿದಂತೆ ಹಲವು ವಾಣಿಜ್ಯ ಕಂಪನಿಗಳಲ್ಲಿ ಪಾಲುದಾರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರ ಮೇಲೆ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಗಂಭೀರ ಆರೋಪವಿದೆ. ಇದರ ಅನ್ವಯ ಸಮನ್ಸ್ ಜಾರಿಗೊಳಿಸಿಲಾಗಿದೆ. ಮುಂದುವರಿದು ಯಾವುದೇ ವ್ಯಕ್ತಿಯ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಾಗ ಸಮನ್ಸ್ ಜಾರಿಗೊಳಿಸುವುದು ಕಾನೂನುಬದ್ಧ ಪ್ರಕ್ರಿಯೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಒಪ್ಪುವಂತದ್ದಲ್ಲ. ಇಲ್ಲಿ ಅರ್ಜಿದಾರರು ತನಿಖಾಧಿಕಾರಿಗಳ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿ ಅರ್ಜಿ ವಜಾಗೊಳಿಸಬೇಕು” ಮನವಿ ಮಾಡಿದರು.

ಈ ವೇಳೆ ಇ ಡಿ ಪರ ವಕೀಲರನ್ನು ಉದ್ದೇಶಿಸಿದ ಪೀಠವು “ನೀವು ಅರ್ಜಿದಾರರ ವಿರುದ್ಧ ನಾನಾ ರೀತಿಯಲ್ಲಿ ಆರೋಪ ಮಾಡಿದ್ದೀರಿ? ಅದನ್ನು ಸಾಬೀತುಪಡಿಸಲು ಪೂರಕ ದಾಖಲೆ ಬೇಕಲ್ಲವೇ? ದಾಖಲೆ ಎಲ್ಲಿ? ಹೂಡಿಕೆ ಮಾಡಿದ್ದಾರೆ, ಪಾಲುದಾರಾಗಿದ್ದರೆ ಎಂಬ ಸಂಗತಿ ಸತ್ಯ ಎಂದು ಒಪ್ಪಿಕೊಳ್ಳಲು ದಾಖಲೆ ಬೇಕಲ್ಲವೇ? ಆಕ್ಷೇಪಣೆಗೆ ಪೂರಕಾವಾಗಿರುವ ದಾಖಲೆ ಒದಗಿಸಿಲ್ಲ ಏಕೆ” ಎಂದು ಪ್ರಶ್ನಿಸಿತ್ತು. ಇದಕ್ಕೆ ಇ ಡಿ ಪರ ವಕೀಲರು ದಾಖಲೆ ಸಲ್ಲಿಸುವುದಾಗಿ ನುಡಿದರು.

Also Read
ಇ ಡಿ ಸಮನ್ಸ್‌ ಪ್ರಶ್ನಿಸಿ ಹೈಕೋರ್ಟ್‌ ಕದತಟ್ಟಿದ ವಕೀಲ ಅನಿಲ್‌ ಗೌಡ; ಸೆ.1ಕ್ಕೆ ವಿಚಾರಣೆ ಮುಂದೂಡಿಕೆ

ಅರ್ಜಿದಾರರ ಪರ ವಕೀಲರು ವಾದ ವಿಸ್ತರಿಸಿ “ಇ ಡಿ ಪರ ವಕೀಲರ ವಾದದಲ್ಲಿ ಹುರುಳಿಲ್ಲ. ಪೀಠ ಈ ವಾದವನ್ನು ಒಪ್ಪಿಕೊಂಡರೆ ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಅರ್ಜಿದಾರರ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘಿಸಿದಂತಾಗುತ್ತದೆ ಎಂದರು. ಮುಂದುವರಿದು ನಮ್ಮ ಕಕ್ಷಿದಾರರಿಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ ವಕೀಲನಾಗಿ ಅವರು ಶಾಸಕ ವೀರೇಂದ್ರ ಪಪ್ಪಿಗೆ ಸಲಹೆ ನೀಡಿದ್ದಾರಷ್ಟೇ ಈ ಹೇಳಿಕೆ ಬದ್ಧರಾಗಿರುವುದಾಗಿ ನುಡಿದರು.

ಸುದೀರ್ಘ ವಾದ -ಪ್ರತಿವಾದ ಆಲಿಸಿದ ಪೀಠವು ತೀರ್ಪು ಕಾಯ್ದಿರಿಸಿದ್ದು, ಸೋಮವಾರ ಪ್ರಕಟಿಸುವುದಾಗಿ ಹೇಳಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಿರಣ್‌ ಜವಳಿ ಹಾಜರಿದ್ದರು. ವಕೀಲ ಶಾಶ್ವತ್‌ ಪ್ರಕಾಶ್‌ ವಕಾಲತ್ತು ವಹಿಸಿದ್ದಾರೆ.

Kannada Bar & Bench
kannada.barandbench.com