
ಆನ್‌ಲೈನ್ ವಸ್ತುವಿಷಯವನ್ನು ನಿಯಂತ್ರಿಸುವ ಪ್ರಸ್ತಾವಿತ ಕಾರ್ಯವಿಧಾನವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿರಬೇಕು ಎಂದು ಒತ್ತಿ ಹೇಳಿದ್ದರೂ, ವಾಕ್ ಸ್ವಾತಂತ್ರ್ಯದ ವಿಚಾರಕ್ಕೆ ಬಂದಾಗ ಪುಕ್ಕಟೆ ಸಲಹೆ ನೀಡುವವರು ಬಹಳಷ್ಟು ಜನರಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಚಟಾಕಿ ಹಾರಿಸಿತು.
ತಮ್ಮ ಆನ್‌ಲೈನ್ ನಡೆಗಳಿಂದಾಗಿ ಕಾನೂನು ಸಂಕಷ್ಟಕ್ಕೆ ಸಿಲುಕಿರುವ ಹಾಸ್ಯ ಕಲಾವಿದರು ಮತ್ತು ಪಾಡ್‌ಕಾಸ್ಟರ್‌ಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆನ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಸಂವಿಧಾನದ 19(2) ನೇ ವಿಧಿಯಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ "ಸಮಂಜಸವಾದ ನಿರ್ಬಂಧ" ವಿಧಿಸುವುದಕ್ಕಾಗಿ ನಿಯಂತ್ರಕ ಕ್ರಮಗಳನ್ನು ರೂಪಿಸುವಂತೆ ಈ ಹಿಂದೆ ನ್ಯಾಯಾಲಯ ಹೇಳಿತ್ತು.
ಪ್ರಸ್ತಾವಿತ ಮಾರ್ಗಸೂಚಿಗಳನ್ನು ಚರ್ಚಿಸುವ ಅವಶ್ಯಕತೆಯಿದೆ ಎಂದು ಇಂದು, ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ವಾದಿಸಿದರು. ನ್ಯಾಯಮೂರ್ತಿ ಕಾಂತ್ ಅವರು ಇದಕ್ಕೆ ಸಮ್ಮತಿಸಿ, ಎಲ್ಲಾ ಭಾಗೀದಾರರು ಈ ವಿಚಾರವಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದರು.
“ಮಾರುಕಟ್ಟೆಯಲ್ಲಿ ಅನೇಕ ಪುಕ್ಕಟ್ಟೆ ಸಲಹೆಗಾರರಿದ್ದಾರೆ. ಅವರನ್ನು ನಿರ್ಲಕ್ಷಿಸಿ… ಮಾರ್ಗಸೂಚಿಗಳು ಸ್ವಾತಂತ್ರ್ಯವನ್ನು ಮತ್ತು ಕರ್ತವ್ಯಗಳನ್ನು ಸಮತೋಲನಗೊಳಿಸುವ ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿರಬೇಕು ಅಂತಹ ಮಾರ್ಗಸೂಚಿಗಳ ಕುರಿತು ನಾವು ಮುಕ್ತ ಚರ್ಚೆಯನ್ನು ನಡೆಸುತ್ತೇವೆ. ಎಲ್ಲಾ ಪಾಲುದಾರರು ಸಹ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿ” ಎಂದು ನ್ಯಾಯಾಲಯ ನುಡಿಯಿತು.
ಸಂವಿಧಾನದ 19ನೇ ವಿಧಿ (ವಾಕ್ ಸ್ವಾತಂತ್ರ್ಯ) ಮತ್ತು 21ನೇ ವಿಧಿ (ಜೀವಿಸುವ ಹಕ್ಕು) ನಡುವೆ ಸ್ಪರ್ಧೆ ಏರ್ಪಟ್ಟರೆ ಆಗ 21ನೇ ವಿಧಿ ಎಂಬುದು 19ನೇ ವಿಧಿಗಿಂತಲೂ ಮಿಗಿಲಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಸಂಚಿಕೆಯಲ್ಲಿ ಅಶ್ಲೀಲ ಹೇಳಿಕೆ ನೀಡಿದ್ದಕ್ಕಾಗಿ ಯೂಟ್ಯೂಬರ್ ಮತ್ತು ಪಾಡ್‌ಕಾಸ್ಟರ್ ರಣವೀರ್ ಅಲಹಾಬಾದಿಯಾ (ಬೀರ್‌ಬೈಸೆಪ್ಸ್ ಎಂದೂ ಜನಪ್ರಿಯ) ಅರ್ಜಿ ಸಲ್ಲಿಸಿದ್ದರು.
ಅಲಹಾಬಾದಿಯಾ ಅವರ ಅರ್ಜಿಯ ಜೊತೆಗೆ, ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿಗೆ ಹೆಚ್ಚಿನ ವೆಚ್ಚದ ಚಿಕಿತ್ಸೆಯ ಬಗ್ಗೆ ರೈನಾ ಅಸಂವೇದನಾಶೀಲ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕ್ಯೂರ್ ಎಸ್‌ಎಂಎ ಇಂಡಿಯಾ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯನ್ನು ಸಹ ಪಟ್ಟಿ ಮಾಡಲಾಗಿದೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಂಗವಿಕಲ ವ್ಯಕ್ತಿಗಳ ಬದುಕುವ ಹಕ್ಕು ಮತ್ತು ಘನತೆಯನ್ನು ಉಲ್ಲಂಘಿಸುವ ಇಂತಹ ಆನ್‌ಲೈನ್ ವಸ್ತುವಿಷಯವನ್ನು ಪ್ರಸಾರ ಮಾಡಲು ನಿಯಮಗಳನ್ನು ರೂಪಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ರೈನಾ, ವಿಪುಲ್ ಗೋಯಲ್, ಬಲ್‌ರಾಜ್ ಪರಮ್‌ಜೀತ್ ಸಿಂಗ್ ಘಾಯ್, ಸೋನಾಲಿ ಥಾಕರ್ ಅಲಿಯಾಸ್ ಸೋನಾಲಿ ಆದಿತ್ಯ ದೇಸಾಯಿ ಮತ್ತು ನಿಶಾಂತ್ ಜಗದೀಶ್ ತನ್ವಾರ್ ಅವರು ಮುಂದಿನ ವಿಚಾರಣೆಯ ದಿನಾಂಕದಂದು ಹಾಜರಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು .
ಇಂದು, ರೈನಾ ಮತ್ತಿತರರು ನ್ಯಾಯಾಧೀಶರ ಮುಂದೆ ಹಾಜರಿದ್ದರು. ಅವರ ಪರ ವಕೀಲರು ಕ್ಯೂರ್ ಎಸ್‌ಎಂಎ ಇಂಡಿಯಾ ಫೌಂಡೇಶನ್ ಪ್ರಕರಣಕ್ಕೆ ಪ್ರತಿ ಅಫಿಡವಿಟ್ ಸಲ್ಲಿಸಲು ಸಮಯಾವಕಾಶ ಕೋರಿದರು.
ಮನವಿ ಪುರಸ್ಕರಿಸಿದ ನ್ಯಾಯಾಲಯ " ಇನ್ನು ಮುಂದೆ ಯಾವುದೇ ಸಮಯ ನೀಡಲಾಗುವುದಿಲ್ಲ. ಒಂದು ವಾರದ ನಂತರವಷ್ಟೇ ಪ್ರತ್ಯುತ್ತರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ನಂತರ ಪ್ರಕರಣ ಪಟ್ಟಿ ಮಾಡಿ " ಎಂದು ಆದೇಶಿಸಿತು.
ಆದರೆ ಮುಂದಿನ ವಿಚಾರಣೆಯ ದಿನದಂದು ರೈನಾ, ಗೋಯಲ್, ಘಾಯ್ ಮತ್ತು ತನ್ವರ್ ಹಾಜರಿರಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಥಕ್ಕರ್ ಅವರಿಗೆ ಆನ್‌ಲೈನ್ ಮೂಲಕ ಹಾಜರಾಗಲು ಅವಕಾಶ ನೀಡಲಾಗಿದೆ. ಗೈರುಹಾಜರಾದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಕೂಡ ಅದು ಎಚ್ಚರಿಕೆ ನೀಡಿದೆ.
ಪ್ರಕರಣದಲ್ಲಿ ಆರೋಪಿಸಲಾದ ಅವರ ಆನ್‌ಲೈನ್ ನಡೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು ಎಂದು ಅದು ಹೇಳಿದೆ.
ಅಶ್ಲೀಲ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ, ಮಹಾರಾಷ್ಟ್ರ, ಅಸ್ಸಾಂ ಮತ್ತು ರಾಜಸ್ಥಾನದಲ್ಲಿ ಅಲಾಹಾಬಾದಿಯಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅವರನ್ನು ಬಂಧಿಸದಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಕಾರ್ಯಕ್ರಮಗಳನ್ನು ನೀಡದಂತೆ ನಿರ್ಬಂಧಿಸಿತ್ತು. ಕೆಲ ವಾರಗಳ ಬಳಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಅವಕಾಶ ನೀಡಿತ್ತು. ಸಭ್ಯತೆಯ ಎಲ್ಲೆ ಮೀರದಂತೆ ತಾಕೀತು ಮಾಡಿತ್ತು.