
ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಒದಗಿಸುವ ಸಂವಿಧಾನದ 21ನೇ ವಿಧಿ ಜೀವ ಉಳಿಸುವ ಪರಿಸರವನ್ನು ಸಂರಕ್ಷಿಸುವುದಕ್ಕಾಗಿಯೂ ಅನ್ವಯವಾಗುತ್ತದೆ ಎಂದು ಅರ್ಥೈಸಿಕೊಳ್ಳಬೇಕಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಸೂರ್ಯ ಕಾಂತ್ ಶನಿವಾರ ತಿಳಿಸಿದರು.
ಮಾನವ-ವನ್ಯಜೀವಿ ಸಂಘರ್ಷದ ಕುರಿತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಮತ್ತು ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೇಲ್ಸಾ) ತಿರುವನಂತಪುರದಲ್ಲಿ ಜಂಟಿಯಾಗಿ ಶನಿವಾರ ಆರಂಭಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ನ್ಯಾಯಿಕ ತತ್ವವನ್ನು ಅದರ ನಿಲುವಿನಲ್ಲಾಗಲೀ ಅಥವಾ ಅದರ ಅನ್ವಯದಲ್ಲಾಗಲೀ ಆಯ್ದು ಕಾರ್ಯ ನಿರ್ವಹಿಸಲು ಬಿಡಬಾರದು ಎಂದು ಅವರು ಒತ್ತಿ ಹೇಳಿದರು. ಇಂದು ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.
ಪರಿಸರ ನ್ಯಾಯ ಎಂದರೆ ಮಾನವ ಹಕ್ಕುಗಳನ್ನು ಪರಿಸರ ಸಂರಕ್ಷಣೆಯ ಅಗತ್ಯದೊಂದಿಗೆ ಸಮತೋಲನಗೊಳಿಸುವುದಾಗಿದೆ ಎಂದ ಅವರು “ ವನ್ಯಜೀವಿಗಳ ಬೆಳವಣಿಗೆಗೆ ಅಗತ್ಯವಾದ ಪರಿಸ್ಥಿತಿ ನಿರ್ಮಿಸುವಂತೆಯೇ ಮಾನವ ಸಮುದಾಯಗಳ ಸುರಕ್ಷತೆ, ಸ್ಥಿರತೆ ಹಾಗೂ ಒಳಿತನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ ಎಂಬುದು ಪರಿಸರ ಸಮಸ್ಯೆ ಮಾತ್ರವಲ್ಲದೆ ನ್ಯಾಯ ಮತ್ತು ಆಡಳಿತಾತ್ಮಕ ವಿಷಯವಾಗಿದೆ. ಅರಣ್ಯಗಳ ಅಂಚಿನಲ್ಲಿ ವಾಸಿಸುವ ದುರ್ಬಲ ಸಮುದಾಯಗಳನ್ನು ಕಾನೂನು ನೆರವು ತಲುಪಬೇಕು ಎಂದರು.
"ನಾವು ಪ್ರಗತಿ ಸಾಧಿಸಿದಂತೆ, ಮಾನವ-ವನ್ಯಜೀವಿ ಸಂಘರ್ಷದ ಬಲಿಪಶುಗಳಾಗಿ ಈಗಲೂ ಬಳಲುತ್ತಿರುವವರ ಮೇಲೆ ಕಾಳಜಿ ತೋರಬೇಕು. ಅನೇಕ ಸಂತ್ರಸ್ತರು ಸಮಾಜದಂಚಿನಲ್ಲಿರುವ ಸಮುದಾಯಗಳಿಗೆ ಸೇರಿದವರಾಗಿರುವುದರಿಂದ, ಅವರ ಕುಟುಂಬಗಳಿಗೆ ತಮಗೆ ಲಭ್ಯವಿರುವ ಕಾನೂನು ಹಕ್ಕು ಮತ್ತು ಅರ್ಹತೆಗಳ ಬಗ್ಗೆ ತಿಳಿದಿರುವುದಿಲ್ಲ" ಎಂದು ಅವರು ವಿವರಿಸಿದರು.
ರಾಷ್ಟ್ರದ ಅಭಿವೃದ್ಧಿ ಸಸ್ಯ ಪ್ರಾಣಿಗಳ ಅಮೂಲ್ಯತೆಯನ್ನು ಮುಕ್ಕಾಗಿಸದಂತೆ ನ್ಯಾಯಾಂಗ ಅದರಲ್ಲಿಯೂ ಸುಪ್ರೀಂ ಕೋರ್ಟ್ ಹಸಿರು ಪೀಠ ಪ್ರಮುಖ ಪಾತ್ರವಹಿಸಿದೆ ಎಂದು ಕೂಡ ಅವರು ಹೆಮ್ಮೆ ವ್ಯಕ್ತಪಡಿಸಿದರು.
ಮಾನವ–ವನ್ಯಜೀವಿ ಸಂಘರ್ಷದ ಬಾಧಿತರಿಗೆ ನ್ಯಾಯ ಒದಗಿಸುವ ಯೋಜನೆ- 2025, ಹಾಗೂ ಅಗೋಚರ, ದಮನಿತ ಹಾಗೂ ಬಾಧಿತರ ಸಾಮರ್ಥ್ಯ ವೃದ್ಧಿ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಬೆಂಬಲ ನೀಡುವ ಸ್ಪೃಹ ಯೋಜನೆಗಳಿಗೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು ಮಾನವ–ವನ್ಯಜೀವಿ ಸಂಘರ್ಷ ಕುರಿತ ಸಂಪುಟವನ್ನೂ ಇದೇ ವೇಳೆ ಬಿಡುಗಡೆ ಮಾಡಲಾಯಿತು.