ಜಮ್ಮು ಕಾಶ್ಮೀರದ ಸಂವಿಧಾನವನ್ನು ಭಾರತದ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಮತ್ತು ಭಾರತೀಯ ಸಂವಿಧಾನವು ಬದ್ಧವಾಗಿರುವ ಏಕೈಕ ದಾಖಲೆ ಎಂದರೆ ಅದು ಭಾರತೀಯ ಸಂವಿಧಾನ ಮಾತ್ರವೇ ಆಗಿದೆ ಎಂದು ಬುಧವಾರ 370ನೇ ವಿಧಿ ರದ್ದತಿ ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತಿಳಿಸಿದೆ [ಸಂವಿಧಾನದ 370 ನೇ ವಿಧಿ ಕುರಿತ ಪ್ರಕರಣದಲ್ಲಿ].
ವಿಧಿ 356ರ ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುವಾಗ ಸುಗ್ರೀವಾಜ್ಞೆ ಮೂಲಕ 370ನೇ ವಿಧಿ ರದ್ದುಗೊಳಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಪ್ರಶ್ನೆಗಳನ್ನು ಮುಂದಿಟ್ಟಿದೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಅರ್ಜಿದಾರ-ವಕೀಲ ಮುಝಾಫರ್ ಇಕ್ಬಾಲ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರ ವಾದಗಳಿಗೆ ಪ್ರತಿಕ್ರಿಯೆಯಾಗಿ ಪೀಠ ಪ್ರಶ್ನೆಗಳನ್ನು ಕೇಳಿತು.
ವರ್ಚುವಲ್ ವಿಧಾನದಲ್ಲಿ ವಿಚಾರಣೆಯಲ್ಲಿ ಹಾಜರಿದ್ದ ಸುಬ್ರಮಣಿಯಂ ಅವರು ಜಮ್ಮು ಕಾಶ್ಮೀರದ ಹಿಂದಿನ ರಾಜ್ಯ ಶಾಸಕಾಂಗ ಸಭೆಯನ್ನು ಅಮಾನತುಗೊಳಿಸಿ ರಾಷ್ಟ್ರಪತಿಗಳು ಘೋಷಣೆ ಹೊರಡಿಸುವಾಗ, ವಿಧಿ 370ನ್ನು ರದ್ದುಗೊಳಿಸಲು ಅವಕಾಶ ಮಾಡಿಕೊಡುವ ವಿಧಿ 370 (3) ಅನ್ನು ಚಲಾಯಿಸಲು ಅಂತರ್ಗತ ನಿರ್ಬಂಧಗಳಿವೆ ಎಂದು ತಿಳಿಸಿದರು. "ವಿಧಿ 370 ಷರತ್ತುಬದ್ಧ ಶಾಸನವಲ್ಲ, ಇದು ಸಂವಿಧಾನಾತ್ಮಕ ಕಾಯಿದೆಯಾಗಿದ್ದು, ಸಾಂವಿಧಾನಿಕ ನಿಬಂಧನೆಗಳು ಅನ್ವಯಿಸುತ್ತವೆ," ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಭಾರತೀಯ ಸಂವಿಧಾನವು ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಬಗ್ಗೆ ಮಾತನಾಡಿದರೂ ಅದು ಜಮ್ಮು ಕಾಶ್ಮೀರದ ಸಂವಿಧಾನವನ್ನು ಪ್ರಸ್ತಾಪಿಸುವುದೇ ಇಲ್ಲ ಎಂಬುದನ್ನು ನಾವು ಗಮನಿಸಬೇಕು. ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡಿಕೊಳ್ಳಲು ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಯಾರೂ ಯೋಚಿಸಲೇ ಇಲ್ಲ. ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಒಕ್ಕೂಟ ಅಧಿಕಾರ ಅಥವಾ ಭಾರತೀಯ ಸಂವಿಧಾನವನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದಂತೆ ನಿರ್ಬಂಧಗಳಿವೆ. ಆದರೆ ಭಾರತೀಯ ಸಂವಿಧಾನದಲ್ಲಿ ಅಂತಹ ಯಾವುದೇ ಕಟ್ಟುಪಾಡುಗಳಿಲ್ಲ. ಒಂದು ವೇಳೆ 356ನೇ ವಿಧಿ ಜಾರಿಯಲ್ಲಿದೆ ಎಂದರೆ, ಆಗ ಯಾವುದೇ ಸುಗ್ರೀವಾಜ್ಞೆ ಹೊರಡಿಸಬೇಕಾದ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವಾಗುವುದಿಲ್ಲವೇ? ಭಾರತೀಯ ಸಂವಿಧಾನವು ಬದ್ಧವಾಗಿರಬೇಕಾದ ಏಕೈಕ ದಾಖಲೆ ಎಂದರೆ ಅದು ಭಾರತೀಯ ಸಂವಿಧಾನ ಮಾತ್ರವೇ ಆಗಿದೆ." ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣಿಯಂ ಅವರು ಇಂತಹ ಸಮರ್ಥನೆ ಸರಿಯಲ್ಲ. ಏಕೆಂದರೆ ಭಾರತದ ಸಂವಿಧಾನದ ಅನೇಕ ವಿಧಿಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ನಾಲ್ಕನೇ ದಿನದ ವಿಚಾರಣೆ ನಡೆಸಿದ್ದು ಇಂದು ಕೂಡ ವಿಚಾರಣೆ ಮುಂದುವರೆಯಲಿದೆ.