ನಾಲ್ಕು ವರ್ಷಗಳ ಹಿಂದೆ ಅಂದರೆ 2019 ರಲ್ಲಿ ರದ್ದುಗೊಂಡ ಸಂವಿಧಾನದ 35ಎ ವಿಧಿಯು ಜಮ್ಮು ಕಾಶ್ಮೀರದ ನಿವಾಸಿಗಳಲ್ಲದವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿತ್ತು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿತು [ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ ].
ವಿಧಿ 35ಎ ಜಮ್ಮು ಮತ್ತು ಕಾಶ್ಮೀರದ ಜನರಿಗೆ ವಿಶೇಷ ಹಕ್ಕುಗಳನ್ನು ನೀಡಿದ್ದು, ಈ ಪ್ರಕ್ರಿಯೆ ವೇಳೆ ಭಾರತದ ಉಳಿದ ಭಾಗಗಳಲ್ಲಿ ನೆಲೆಸಿರುವ ವ್ಯಕ್ತಿಗಳ ಮೂರು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿತ್ತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ವಾದ ಮಂಡಿಸುತ್ತಿದ್ದ ವೇಳೆ ನ್ಯಾಯಾಲಯವು ಸರ್ಕಾರಿ ಉದ್ಯೋಗದಲ್ಲಿ ಸಮಾನತೆಯನ್ನು ಒದಗಿಸುವ 16 (1) ವಿಧಿ, ಸ್ಥಿರಾಸ್ತಿಯನ್ನು ಗಳಿಸುವ 19 (1) (ಎಫ್) ಹಾಗೂ 31ನೇ ವಿಧಿ ಹಾಗೂ ರಾಜ್ಯದಲ್ಲಿ ವಸಾಹತು ಕಲ್ಪಿಸಿಕೊಳ್ಳುವ 19 (1) (ಇ) ವಿಧಿಗಳನ್ನು 35ಎ ವಿಧಿ ಕಸಿದುಕೊಂಡಿತ್ತು. 16 (1) ಅಡಿಯಲ್ಲಿ ನೇರ ಹಕ್ಕು ಇದೆ… ಹೀಗೆ ಎಲ್ಲಾ ಮೂರು ಮೂಲಭೂತ ಹಕ್ಕುಗಳು ಮತ್ತು ನ್ಯಾಯಾಂಗ ಪರಿಶೀಲನೆ ಅಧಿಕಾರವನ್ನು 35ಎ ವಿಧಿಯು ಕಸಿದುಕೊಂಡಿತ್ತು ಎಂದು ನ್ಯಾಯಾಲಯ ನುಡಿಯಿತು.
2019ರಲ್ಲಿ ವಿಧಿ 370ರ ಜೊತೆಗೆ ರದ್ದುಗೊಳಿಸಲಾದ ವಿಧಿ 35ಎ, ಜಮ್ಮು ಕಾಶ್ಮೀರದ ಶಾಸಕಾಂಗವು ರಾಜ್ಯದ 'ಖಾಯಂ ನಿವಾಸಿಗಳನ್ನು' ವ್ಯಾಖ್ಯಾನಿಸಲು ಮತ್ತು ಅವರಿಗೆ ಸಾರ್ವಜನಿಕ ಉದ್ಯೋಗ, ಸ್ಥಿರಾಸ್ತಿ ಮತ್ತು ವಸಾಹತುಗಳ ವಿಷಯದಲ್ಲಿ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸಲು ಅಧಿಕಾರ ನೀಡಿತ್ತು.
ಸಂವಿಧಾನದಲ್ಲಿ 35ಎ ವಿಧಿಯನ್ನು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲೆಂದು ಮಾತ್ರ ರಚಿಸಲಾಗಿದೆ ಎಂದು ಎಸ್‌ಜಿ ಮೆಹ್ತಾ ವಾದಿಸಿದರು. 35ಎ ವಿಧಿಯನ್ನು ತೆಗೆದುಹಾಕವುದರೊಂದಿಗೆ ವಿಧಿ 370ರ ರದ್ದತಿಯೊಂದಿಗೆ ಈ ಪ್ರದೇಶದಲ್ಲಿ ಹೂಡಿಕೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಿದೆ ಎಂದರು.
2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ (ಜೆ & ಕೆ) ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಹನ್ನೊಂದನೇ ದಿನವಾದ ಸೋಮವಾರ ಈ ವಿಚಾರಗಳು ಚರ್ಚೆಗೊಳಗಾದವು.
ಅರ್ಜಿದಾರರ ಪರ ಹಾಜರಾಗಿದ್ದ ಜಮ್ಮು ಕಾಶ್ಮೀರ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಉಪನ್ಯಾಸಕ ಡಾ. ಜಹೂರ್ ಅಹ್ಮದ್ ಭಟ್ ಅವರನ್ನು ಅಮಾನತುಗೊಳಿಸಿರುವ ಹಿಂದಿನ ಕಾರಣವೇನು ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಕೇಳಿತು. ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಕೂಡ ಈ ಸಂದರ್ಭದಲ್ಲಿ ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ಇಂದು (ಮಂಗಳವಾರ) ಮುಂದುವರೆದಿದೆ.