ʼಹಾವು ಏಣಿ ಆಟʼದ ವಾದಕ್ಕೆ ಸಾಕ್ಷಿಯಾದ ಕೇಜ್ರಿವಾಲ್ ಜಾಮೀನು ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಅಡ್ಡಿಪಡಿಸುತ್ತಾರೆ ಎಂದು ಸಿಬಿಐ ವಾದಿಸಿತು.
Arvind Kejriwal, Supreme Court and CBI
Arvind Kejriwal, Supreme Court and CBI
Published on

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೂಡಿರುವ ಮೊಕದ್ದಮೆಯಲ್ಲಿ ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅಧಿನಾಯಕ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ [ಅರವಿಂದ್  ಕೇಜ್ರಿವಾಲ್ ಮತ್ತು ಸಿಬಿಐ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸುವ ಮುನ್ನ ಕೇಜ್ರಿವಾಲ್ ಮತ್ತು ಸಿಬಿಐ ಪರ ವಕೀಲರ ವಾದವನ್ನು ಸುದೀರ್ಘವಾಗಿ ಆಲಿಸಿತು.

Also Read
'ಸಾಮಾನ್ಯರ ಜಾಮೀನು ಅರ್ಜಿ ವಿಚಾರಣೆಗೆ ಇಷ್ಟು ಕಾಲಾವಕಾಶ ದೊರೆಯುತ್ತದೆಯೇ?' ಕೇಜ್ರಿವಾಲ್ ವಾದದ ವೇಳೆ ಸುಪ್ರೀಂ ಕಳವಳ

ಜಾಮೀನು ಪ್ರಕರಣವನ್ನು ವಿಚಾರಣಾ ನ್ಯಾಯಲಯವೇ ಮೊದಲು ಆಲಿಸಬೇಕೆ ಎಂಬ ಕುರಿತು ಕೇಜ್ರಿವಾಲ್‌ ಮತ್ತು ಸಿಬಿಐ ಜಂಗಿಕುಸ್ತಿಗೆ ಇಳಿದವು.

ವಿಚಾರಣಾ ನ್ಯಾಯಾಲಯಕ್ಕೆ ತೆರಳುವ ಸಾಮಾನ್ಯ ಪರಿಪಾಠಕ್ಕೆ ವ್ಯತಿರಿಕ್ತವಾಗಿ ಕೇಜ್ರಿವಾಲ್‌ ಅವರು ನೇರವಾಗಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ವಿಚಾರಣಾ ನ್ಯಾಯಾಲಯವೇ ಪ್ರಕರಣವನ್ನು ಮೊದಲು ಆಲಿಸಬೇಕು. ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಹೈಕೋರ್ಟ್‌ ಅರ್ಹತೆಯ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕು. ಆದರೆ ಕೇಜ್ರಿವಾಲ್‌ ಮುಖ್ಯಮಂತ್ರಿಯಾಗಿರುವುದಷ್ಟೇ ಈ ಪ್ರಕರಣದ ಏಕೈಕ ಅಸಾಧಾರಣ ಸನ್ನಿವೇಶವಾಗಿದೆ ಎಂದು ಆಕ್ಷೇಪಿಸಿದರು.

ಇತ್ತ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ , ಪ್ರಸ್ತುತ ಜಾಮೀನು ಪ್ರಕರಣದ ವಿಚಾರಗಳನ್ನು ಈಗಾಗಲೇ ವಿಚಾರಣಾ ನ್ಯಾಯಾಲಯದೆದುರು ವಿವರವಾಗಿ ವಾದಿಸಿರುವಾಗ ಕೇಜ್ರಿವಾಲ್ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳಿ ಕಳುಹಿಸುವುದು ಸರಿಯಲ್ಲ  ಎಂದರು.

ಮನೀಶ್‌ ಸಿಸೋಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಪ್ರಸ್ತಾಪಿಸಿದ ಅವರು ಕೇಜ್ರಿವಾಲ್‌ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳುವಂತೆ ಮಾಡುವುದು ಹಾವು ಏಣಿ ಆಟಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದರು.

Also Read
ಅಬಕಾರಿ ನೀತಿ ಪ್ರಕರಣ: ಸಿಬಿಐ ಬಂಧನ ರದ್ದುಗೊಳಿಸಿ, ಜಾಮೀನು ನೀಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್

ಆದರೆ ಸಿಸೋಡಿಯಾ ಒಮ್ಮೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಿದರು ಎಂದ ರಾಜು ಅವರು ವಿಚಾರಣೆಗೆ ಶ್ರೇಣಿ ವ್ಯವಸ್ಥೆ ಇದೆ ಎಂದರು. ಆದರೆ ಸಿಬಿಐ ಮೊದಲಿಂದ ಏಣಿ ಹತ್ತುವಂತೆ ಮಾಡುತ್ತಿದೆ ಎಂದು ಸಿಂಘ್ವಿ ಆಕ್ಷೇಪಿಸಿದರು. 

ಕೇಜ್ರಿವಾಲ್ ಜಾಮೀನಿಗಾಗಿ ತ್ರಿವಳಿ ಪರೀಕ್ಷೆ ಎದುರಿಸಿದ್ದು ಮತ್ತೆ ವಿಚಾರಣಾ ನ್ಯಾಯಾಲಯದ ಅಂಗಳಕ್ಕೆ ಪ್ರಕರಣ ಮರಳಿದರೆ ಶೀಘ್ರದಲ್ಲೇ ವಿಚಾರಣೆ ಮುಕ್ತಾಯಗೊಳ್ಳುವ ಸಾಧ್ಯತೆ ಇರುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

 ದಿನವಿಡೀ ನಡೆದ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.

Kannada Bar & Bench
kannada.barandbench.com