ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಸಮನ್ಸ್‌ಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಇ ಡಿ ಸಲ್ಲಿಸಿದ್ದ ಕ್ರಿಮಿನಲ್ ದೂರುಗಳ ಊರ್ಜಿತತ್ವವನ್ನು ಪ್ರಶ್ನಿಸಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇ ಡಿ ದೂರುಗಳನು ಪರಿಗಣನೆಗೆ ತೆಗೆದುಕೊಳ್ಳುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಸಹ ಕೇಜ್ರಿವಾಲ್ ಅವರ ಮನವಿ ಪ್ರಶ್ನಿಸಿದೆ. ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಇ ಡಿಗೆ ಸೂಚಿಸಿದ್ದಾರೆ. ಡಿಸೆಂಬರ್ 19ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಅಲ್ಲದೆ ಈ ಹಂತದಲ್ಲಿ ವಿಚಾರಣೆಗೆ ತಡೆ ನೀಡುವಂತೆ ಕೇಜ್ರಿವಾಲ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಇ ಡಿಯ ಅಧಿಕಾರಿಯೊಬ್ಬರು ಸಮನ್ಸ್ ಹೊರಡಿಸಿದ್ದಾರೆ. ಆದರೆ ಐಪಿಸಿ ಸೆಕ್ಷನ್ 174ರ ಅಡಿಯಲ್ಲಿ ಬೇರೆ ವ್ಯಕ್ತಿ ದೂರು ದಾಖಲಿಸಿದ್ದಾರೆ ಎಂದು ಹಿರಿಯ ವಕೀಲೆ ರೆಬೆಕಾ ಎಂ ಜಾನ್ ಅವರು ಕೇಜ್ರಿವಾಲ್ ಅವರ ಪರವಾಗಿ ವಾದಿಸಿದರು.
ಕಾನೂನಿನ ಪ್ರಕಾರ, ಪಿಎಂಎಲ್‌ಎ ಸಮನ್ಸ್ ನೀಡಿದ ಅಧಿಕಾರಿಯೇ ದೂರು ಸಲ್ಲಿಸುವ ಸಾರ್ವಜನಿಕ ಸೇವಕನೂ ಆಗಿರಬೇಕು ಎಂದು ಅವರು ಹೇಳಿದರು.
ಆದರೆ ಇ ಡಿ ಪರ ವಾದ ಮಂಡಿಸಿದ ವಕೀಲ ಜೊಹೆಬ್ ಹೊಸೈನ್ ಅವರು ಮನವಿಯ ಊರ್ಜಿತತ್ವವನ್ನು ಪ್ರಶ್ನಿಸಿದರು.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ಸಮನ್ಸ್‌ಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ವಿರುದ್ಧ ಇ ಡಿ ಕೆಲ ತಿಂಗಳುಗಳ ಹಿಂದೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.