[ಆರ್ಯನ್‌ ಖಾನ್‌ ಜಾಮೀನು ವಿಚಾರಣೆ] ಅಕ್ರಮ ಮಾದಕವಸ್ತು ಸಾಗಣೆಯ ಎನ್‌ಸಿಬಿ ಆರೋಪ ಅಸಂಬದ್ಧ: ಖಾನ್‌ ಪರ ವಾದ

ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲದಲ್ಲಿರುವ ಕೆಲವರ ಜೊತೆ ಆರ್ಯನ್‌ ಖಾನ್‌ ಸಂಪರ್ಕದಲ್ಲಿದ್ದಾರೆ ಎಂದು ತೋರಿಸಲು ಸಾಕಷ್ಟು ದಾಖಲೆಗಳಿವೆ ಎಂದ ಎನ್‌ಸಿಬಿ.
Aryan Khan
Aryan Khan

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್ ವಿರುದ್ಧ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಹೊರಿಸಿರುವ ಮಾದಕವಸ್ತು ಅಕ್ರಮ ಸಾಗಣೆ ಆರೋಪವು ಅಸಂಬದ್ಧ ಎಂದು ಆರ್ಯನ್‌ ಖಾನ್‌ ಪರ ವಕಾಲತ್ತು ನಡೆಸಿರುವ ಹಿರಿಯ ವಕೀಲ ಅಮಿತ್ ದೇಸಾಯಿ ಅವರು ಮುಂಬೈ ಸೆಷನ್ಸ್‌ ನ್ಯಾಯಾಲಯದ ಮುಂದೆ ಬುಧವಾರ ವಾದಿಸಿದ್ದಾರೆ.

ಆರ್ಯನ್‌ ಖಾನ್‌ ಅವರು ವಿಲಾಸಿ ಹಡಗಿನಲ್ಲಿ ಇರಲಿಲ್ಲ. ಅವರಿಂದ ನಿಷೇಧವಾಗಿರುವ ಯಾವುದೇ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ದೇಸಾಯಿ ಹೇಳಿದರು. “ಎನ್‌ಸಿಬಿ ಪ್ರತಿಕ್ರಿಯೆಯ ತುಂಬಾ ನಾವು (ಆರ್ಯನ್‌ ಖಾನ್) ಅಕ್ರಮ ಮಾದಕ ವಸ್ತು ಸಾಗಣೆ ಮಾಡುತ್ತಿದ್ದೇವೆ ಎಂದು ಹೇಳಲಾಗಿದೆ. 'ಕಾನೂನುಬಾಹಿರ ಮಾದಕ ವಸ್ತು ಸಾಗಣೆ' ಎಂಬುದು ಕಾನೂನಾತ್ಮಕ ಪದ, ಅದು ಸಾಮಾನ್ಯವಾಗಿ ಬಳಸುವಂತಹ ಪದವಲ್ಲ. ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಬಗ್ಗೆ ತಿಳಿದುಕೊಂಡಿರುವ ಎನ್‌ಸಿಬಿಗೆ ಕಾನೂನುಬಾಹಿರ ಮಾದಕ ವಸ್ತು ಸಾಗಣೆ ಎಂದರೇನು ಎಂಬುದು ಗೊತ್ತಿದೆ. ಈ ಹುಡುಗನ (ಆರ್ಯನ್‌) ವಿರುದ್ಧ ಕಾನೂನುಬಾಹಿರ ಮಾದಕ ವಸ್ತುಗಳ ಕಳ್ಳಸಾಗಣೆ ಆರೋಪ ಮಾಡಲಾಗಿದೆ. ಇದು ತೀರ ಅಸಂಬದ್ಧ. ಆತನಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ. ಎನ್‌ಸಿಬಿಯವರು ಧಮೇಚಾ ಮತ್ತು ಗೋಮಿಟ್‌ ಇತರರಿಂದ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಈತನಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ. ಆತ ವಿಲಾಸಿ ಹಡಗಿನಲ್ಲೂ ಇರಲಿಲ್ಲ. ಆದರೂ ಅವರು ಕಾನೂನುಬಾಹಿರ ಮಾದಕ ವಸ್ತು ಕಳ್ಳ ಸಾಗಣೆ ಎನ್ನುತ್ತಿದ್ದಾರೆ” ಎಂದು ದೇಸಾಯಿ ಹೇಳಿದರು.

“ಆರ್ಯನ್‌ ಬಂಧನ ಮೊಮೊದಲ್ಲಿ ವಿವಿಧ ಸೆಕ್ಷನ್‌ಗಳ ಅಡಿ ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆರ್ಯನ್‌ ಅವರನ್ನು ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ಗಳಾದ 27, 20(ಬಿ), 28, 29, 8(ಸಿ) ಅಡಿ ಬಂಧಿಸಲಾಗಿದೆ. ಎನ್‌ಸಿಬಿ ಪ್ರತಿಕ್ರಿಯೆಯಲ್ಲಿ ಕಾನೂನುಬಾಹಿರ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಆರ್ಯನ್‌ ಅವರನ್ನು ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 27ಎ ಅಡಿ ಬಂಧಿಸಲಾಗಿಲ್ಲ” ಎಂದು ದೇಸಾಯಿ ಅವರು ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್‌ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಿದರು. ವಾದ ಸರಣಿಯು ಅಪೂರ್ಣವಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದುವರಿಯಲಿದೆ.

ಇದಕ್ಕೂ ಮುನ್ನ, ದೇಸಾಯಿ ಅವರು “ನಿರ್ದಿಷ್ಟ ಪ್ರಮಾಣದಷ್ಟು ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ರಿಮ್ಯಾಂಡ್‌ ಆದೇಶದಲ್ಲಿ ಹೇಳಲಾಗಿದೆ. ಖಾನ್‌ ವಿಚಾರಕ್ಕೆ ಬರುವುದಾದರೆ ಅವರಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ. ಅರ್ಬಾಜ್‌ ಮರ್ಚೆಂಟ್‌ ಅವರಿಂದ ಕೇವಲ 6 ಗ್ರಾಂ ಚಾರಸ್‌ ವಶಪಡಿಸಿಕೊಳ್ಳಲಾಗಿದೆ. ಧಮೇಚಾ ಅವರಿಂದ ಎಷ್ಟು ವಶಪಡಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಗೊತ್ತಿಲ್ಲ” ಎಂದರು.

“13 ಗ್ರಾಂ ಕೊಕೇನ್‌ ಆಗಲಿ, ಮಾದಕ ಮಾತ್ರೆಗಳು, ಮೆಫೆಡ್ರೋನ್‌ ಯಾವುದನ್ನೂ ಖಾನ್‌ ಅವರಿಂದ ವಶಪಡಿಸಿಕೊಳ್ಳಲಾಗಿಲ್ಲ. ಆರ್ಯನ್‌ ಬಳಿ ಹಣವಿರಲಿಲ್ಲ. ಮಾದಕ ವಸ್ತುಗಳನ್ನು ಸೇವನೆ ಅಥವಾ ಮಾರಾಟ ಮಾಡುವ ಯೋಜನೆ ಅವರಿಗೆ ಇರಲಿಲ್ಲ… ಮುಂಬೈನಲ್ಲಿ ಹಲವು ಪ್ರಕರಣಗಳು ವರದಿಯಾಗಿರುವುದರಿಂದ ಹಲವರನ್ನು ಬಂಧಿಸುವ ಮೂಲಕ ಎನ್‌ಸಿಬಿ ಒಳ್ಳೆಯ ಕೆಲಸ ಮಾಡಿದೆ. ಆದರೆ, ಯಾವುದಕ್ಕೂ ಸಂಬಂಧವಿಲ್ಲದವರನ್ನು ಕರೆತಂದು ಕಸ್ಟಡಿಯಲ್ಲಿ ಅವರು ಇಡಲಾಗದು” ಎಂದು ದೇಸಾಯಿ ಹೇಳಿದ್ದಾರೆ.

“ಎನ್‌ಸಿಬಿಯು ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳ ಸಾಗಣೆಯ ಆರೋಪ ಮಾಡಿದೆ. ಇದರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ... ಈ ಪ್ರಕರಣವನ್ನು ಅವರು ಪಿತೂರಿ ವಿಭಾಗದಲ್ಲಿ ಬಳಕೆ ಮಾಡುತ್ತಿದ್ದಾರೆ… ಪ್ರತಿಕ್ರಿಯೆಯಲ್ಲಿ ಎನ್‌ಸಿಬಿಯು ಹಲವು ಆರೋಪಿಗಳನ್ನು ಉಲ್ಲೇಖಿಸಿದೆ. ಆದರೆ, ಇನ್ನೂ ಹಲವು ಆರೋಪಿಗಳಿದ್ದಾರೆ. ಯಾರನ್ನು ಅವರು ಉಲ್ಲೇಖಿಸುತ್ತಿದ್ದಾರೆ?” ಎಂದು ದೇಸಾಯಿ ಪ್ರಶ್ನಿಸಿದ್ದಾರೆ.

ರಿಮ್ಯಾಂಡ್‌ ವಿಸ್ತರಿಸಲಾಗಿಲ್ಲ ಹಾಗಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದು ಜಾಮೀನು ನೀಡಲು ಅತಿ ಮುಖ್ಯವಾಗುತ್ತದೆ. ಖಾನ್‌ಗೆ ಸಮನ್ಸ್‌ ನೀಡಿ, ತನಿಖೆ ನಡೆಸಲಾಗಿದೆ. ಹಾಗಾಗಿ ಅವರಿಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಕಾರಣಕ್ಕಾಗಿ ಪೊಲೀಸರ ವಶಕ್ಕೆ ನೀಡಲಾಗಿಲ್ಲ ಎಂದ ದೇಸಾಯಿ.

Also Read
ಡ್ರಗ್ಸ್ ಪ್ರಕರಣ: ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್ ಹಾಗೂ‌ ಮತ್ತಿತರರು ಅಕ್ಟೋಬರ್‌ 4ರವರೆಗೆ ಎನ್‌ಸಿಬಿ ವಶಕ್ಕೆ

ಎನ್‌ಸಿಬಿ ವಾದದ ಪ್ರಮುಖ ಅಂಶಗಳು:

  • ಪ್ರಕರಣದಲ್ಲಿ 20 ಆರೋಪಿಗಳಿದ್ದು, ಇವರ ಪೈಕಿ ಕೆಲವು ಮಾದಕ ವಸ್ತು ವ್ಯಾಪಾರಿಗಳಿದ್ದಾರೆ. ಖಾನ್‌ ಮತ್ತು ಮರ್ಚೆಂಟ್‌ ಈ ವ್ಯಾಪಾರಿಗಳ ಜೊತೆ ಮಾತನಾಡುತ್ತಿದ್ದುದಕ್ಕೆ ಸಾಕ್ಷ್ಯವಿದೆ ಎಂದು ವಾದಿಸಿದ ಎಎಸ್‌ಜಿ ಅನಿಲ್‌ ಸಿಂಗ್‌.

  • ಒಂದೇ ಕಾರಿನಲ್ಲಿ ಖಾನ್‌ ಮನೆಗೆ ಮರ್ಚೆಂಟ್‌ ತೆರಳಿದ್ದಾರೆ. ಬಂಧನವಾದಾಗ ಇಬ್ಬರೂ ಟರ್ಮಿನಲ್‌ ಬಳಿ ಇದ್ದರು. ಅರ್ಬಾಜ್‌ ಮರ್ಚೆಂಟ್‌ ಬಳಿ ಇದ್ದ ಮಾದಕ ವಸ್ತುವನ್ನು ತಾವು ಸೇವಿಸಿಲು ಇಟ್ಟುಕೊಂಡಿದ್ದರು. ಇದು ಇಬ್ಬರಿಗೂ ತಿಳಿದಿತ್ತು. ಮರ್ಚೆಂಟ್‌ ಮಾದಕ ವಸ್ತು ಸೇವಿಸಿದ್ದಾರೆ ಎಂಬುದು ಖಾನ್‌ಗೆ ತಿಳಿದಿತ್ತು ಎಂದ ಸಿಂಗ್‌.

  • ಕಾನೂನುಬಾಹಿರ ಮಾದಕ ವಸ್ತುಗಳ ಸಂಗ್ರಹದ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲದಲ್ಲಿರುವ ಕೆಲವರ ಜೊತೆ ಖಾನ್‌ ಸಂಪರ್ಕದಲ್ಲಿದ್ದಾರೆ ಎಂದು ತೋರಿಸಲು ದಾಖಲೆಗಳಿವೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಎನ್‌ಸಿಬಿ ಹೇಳಿದೆ.

  • ಆರ್ಯನ್‌ ಖಾನ್‌ ಪ್ರಭಾವಿಯಾಗಿದ್ದು, ಜಾಮೀನು ನೀಡಿದರೆ ಅವರು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಎನ್‌ಸಿಬಿಯು ಜಾಮೀನಿಗೆ ವಿರೋಧಿಸಿದೆ.

Related Stories

No stories found.
Kannada Bar & Bench
kannada.barandbench.com