[ಪರಸ್ಪರ ಸಮ್ಮತಿ ಮೂಲಕ ವಿಚ್ಛೇದನ] ಅರ್ಜಿ ವಜಾಗೊಳಿಸಲು ನ್ಯಾಯಾಲಯ 18 ತಿಂಗಳು ಕಾಯಬೇಕು ಎಂದ ಹೈಕೋರ್ಟ್‌

ಮಧ್ಯಸ್ಥಿಕೆ ಕೇಂದ್ರವು ವಿಚಾರಣಾಧೀನ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನ ಅರ್ಜಿ ಇತ್ಯರ್ಥಪಡಿಸಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.
Karnataka High Court
Karnataka High Court

ಹಿಂದೂ ವಿವಾಹ ಕಾಯಿದೆ ಅಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಕೂಡ ವಿಚಾರಣಾಧೀನ ನ್ಯಾಯಾಲಯ ಅರ್ಜಿಯನ್ನು ಏಕಾಏಕಿ ವಜಾಗೊಳಿಸದೆ ನಿಯಮದಂತೆ 18 ತಿಂಗಳು ಕಾಯಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ದಂಪತಿ ವಿಚ್ಚೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು ಮಾಡಿರುವ ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್‌ ಮತ್ತು ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠವು ದಂಪತಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ತೆರಳುವಂತೆ ನಿರ್ದೇಶಿಸಿದೆ.

ಮಧ್ಯಸ್ಥಿಕೆ ಕೇಂದ್ರವು ವಿಚಾರಣಾಧೀನ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನ ಅರ್ಜಿ ಇತ್ಯರ್ಥಪಡಿಸಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

ಪಕ್ಷಕಾರರ ಮನವಿ ಇಲ್ಲದೆ ವಿಚಾರಣಾಧೀನ ನ್ಯಾಯಾಲಯ ತನ್ನಷ್ಟಕ್ಕೆ ತಾನೇ ಅರ್ಜಿಯನ್ನು ವಜಾಗೊಳಿಸಬಾರದು ಎನ್ನುವುದನ್ನು ಸಹ ಪೀಠ ಹೇಳಿದೆ. “ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13ಬಿ ಅನ್ವಯ, ದಂಪತಿಗಳು ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಪ್ರತ್ಯೇಕವಾಗಿ ವಾಸವಿರಬೇಕು. ಪಕ್ಷಕಾರರು ಜೊತೆಯಲ್ಲಿ ವಾಸ ಮಾಡುವಂತಿಲ್ಲ ಮತ್ತು ಇಬ್ಬರೂ ಪರಸ್ಪರ ವಿವಾಹ ಸಂಬಂಧ ಮುರಿದುಕೊಳ್ಳಲು ಒಪ್ಪಿರಬೇಕು ಹಾಗೂ ಅರ್ಜಿ ಸಲ್ಲಿಸಿದ ಆರು ತಿಂಗಳವರೆಗೆ ಅವರು ಆ ಅರ್ಜಿಯನ್ನು ನ್ಯಾಯಾಲಯ ಮುಂದೆ ಮಂಡಿಸುವಂತಿಲ್ಲ” ಎಂದು ಆದೇಶಿಸಿದೆ.

ಆದರೆ, ಈ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಅರ್ಜಿಯನ್ನು ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಆದರೆ, ಅದಕ್ಕೂ ಮುನ್ನ ವಿಚಾರಣಾಧೀನ ನ್ಯಾಯಾಲಯವು ಸೆಕ್ಷನ್ 13 ಬಿ(2) ಅನ್ನು ಪಾಲನೆ ಮಾಡಿಲ್ಲ. ಈ ಮೂಲಕ ವಿಚಾರಣಾಧೀನ ನ್ಯಾಯಾಲಯ ತಪ್ಪೆಸಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ದಂಪತಿ 2020ರ ನವೆಂಬರ್‌ 27ರಂದು ಮದುವೆಯಾಗಿದ್ದರು ಮತ್ತು 2021ರ ಸೆಪ್ಟೆಂಬರ್‌ನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಇಬ್ಬರು ವಿವಾಹ ಬಂಧನ ಕಳೆದುಕೊಳ್ಳಲು ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13 ಬಿ ಅನ್ವಯ, ತಮ್ಮಿಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನ ಪಡೆದುಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದರು.

ದಂಪತಿ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನ ಪಡೆಯುವುದಾಗಿ ಹೇಳಿದ್ದರು. ಆದರೆ, ನ್ಯಾಯಾಲಯ ಮತ್ತೆ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ಎಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿತ್ತು. ಮಧ್ಯಸ್ಥಿಕೆದಾರರು ಇಬ್ಬರ ನಡುವೆ ಸಹಮತ ಮೂಡಿಸಿ ಮತ್ತೆ ಒಗ್ಗೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲಲ್ಲ. ಇಬ್ಬರೂ ಮಧ್ಯಸ್ಥಿಕೆಗೆ ಗೈರು ಹಾಜರಾಗಿದ್ದರು. ಮಧ್ಯಸ್ಥಿಕೆ ಕೇಂದ್ರ ವರದಿಯನ್ನು ಸಲ್ಲಿಸಿತ್ತು. ಅದನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯ, ದಂಪತಿಗೆ ಈ ಪ್ರಕರಣವನ್ನು ಮುನ್ನಡೆಸಲು ಆಸಕ್ತಿ ಇಲ್ಲ ಎಂದು ದಾಖಲಿಸಿ ಪ್ರಕರಣ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com