ವೈದ್ಯರ ಮೇಲೆ ಹಲ್ಲೆ ಪ್ರಕರಣ: ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ವಿಚಾರಣೆಯ ಪ್ರಕ್ರಿಯೆಗಳಲ್ಲಿ ಶ್ರದ್ಧೆಯ ಕೊರತೆ ಇದೆ ಎಂಬುದು ಹಿಂದಿನ ಹಲವು ಆದೇಶಗಳಿಂದ ತಿಳಿದು ಬಂದಿದೆ. ಹೀಗಾಗಿ, ಅರ್ಜಿ ವಜಾಗೊಳಿಸಲಾಗಿದೆ ಎಂದಿರುವ ನ್ಯಾಯಾಲಯ.
BJP MP Anantkumar Hegde and Karnataka HC
BJP MP Anantkumar Hegde and Karnataka HC
Published on

ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಅನಂತಕುಮಾರ್‌ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾ ಮಾಡಿದೆ. ಹೀಗಾಗಿ, ಪ್ರಕರಣದ ವಿಚಾರಣೆಗೆ ತಡೆ ನೀಡಿದ್ದ ಮಧ್ಯಂತರ ಆದೇಶವು ತೆರವಾಗಿದ್ದು ವಿಚಾರಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯೂ ಮಾರ್ಕೆಟ್‌ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಅನಂತಕುಮಾರ್‌ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದದ್ಯ ಪೀಠವು ವಜಾಗೊಳಿಸಿತು.

Justice S Sunil Dutt Yadav
Justice S Sunil Dutt Yadav

“ಪ್ರಕರಣದ ತನಿಖೆಗೆ ತಡೆ ನೀಡಿ 20.9.2017ರಂದು ಮಧ್ಯಂತರ ಆದೇಶ ಮಾಡಲಾಗಿದ್ದು, ಆನಂತರ ಅದನ್ನು ಹಲವು ಬಾರಿ ವಿಸ್ತರಿಸಲಾಗಿದೆ. 29.8.2024ರಂದು ನ್ಯಾ. ಎಂ ನಾಗಪ್ರಸನ್ನ ಅವರ ಪೀಠವು ಅರ್ಜಿದಾರರಿಗೆ ಕೊನೆಯ ಬಾರಿ ಅವಕಾಶ ನೀಡಿ ಆದೇಶಿಸಿತ್ತು. ಆನಂತರವೂ ಹಲವು ಬಾರಿ ಮಧ್ಯಂತರ ಆದೇಶ ವಿಸ್ತರಿಸಲಾಗಿದೆ. 6.3.2025, 7.4.2025ರಂದು ಇದು ಪುನರಾವರ್ತನೆಯಾಗಿದೆ. ಜುಲೈ 30ರ ವಿಚಾರಣೆಯಂದೂ ಯಾರೂ ಹೆಗಡೆ ಪರವಾಗಿ ಹಾಜರಾಗಿಲ್ಲ. ವಿಚಾರಣೆಯ ಪ್ರಕ್ರಿಯೆಗಳಲ್ಲಿ ಶ್ರದ್ಧೆಯ ಕೊರತೆ ಇದೆ ಎಂಬುದು ಹಿಂದಿನ ಹಲವು ಆದೇಶಗಳಿಂದ ತಿಳಿದು ಬಂದಿದೆ. ಹೀಗಾಗಿ, ಅರ್ಜಿ ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಇದಕ್ಕೂ ಮುನ್ನ, ಪೀಠವು ಮೌಖಿಕವಾಗಿ “ಯಾರೂ ಹಾಜರಾಗದಿದ್ದರೆ ನಾನು ಈ ಅರ್ಜಿಯನ್ನು ವಜಾಗೊಳಿಸುತ್ತೇನೆ” ಎಂದಿತು.

ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ನಮಗೆ ಅರ್ಜಿಯ ಪ್ರತಿ ನೀಡಲು ನಿರ್ದಿಷ್ಟವಾಗಿ ಸೂಚಿಸಿದ್ದರೂ ನೀಡಲಾಗಿಲ್ಲ” ಎಂದರು.

ಪ್ರಕರಣದ ಹಿನ್ನೆಲೆ: 02-01-2017ರಂದು ಸಂಜೆ ಏಳು ಗಂಟೆ ವೇಳೆಗೆ ಅನಂತಕುಮಾರ್‌ ಹೆಗಡೆ ಸಹೋದರನಾದ ಎರಡನೇ ಆರೋಪಿ ಈಶ್ವರ ಎಸಳೆ ಅವರು ತಮ್ಮ ತಾಯಿ ಲಲಿತಾ ಹೆಗಡೆ ಅವರನ್ನು ಶಿರಸಿಯ ಟಿ ಎಸ್‌ ಎಸ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಲಲಿತಾ ಅವರನ್ನು ಸ್ಟ್ರೆಚರ್‌ನಲ್ಲಿ ಪರಿಶೀಲಿಸಿದ್ದ ವೈದ್ಯ ಮಧುಕೇಶ್ವರ ಹೆಗಡೆ ಅವರು ಎಡ ತೊಡೆಯ ಸಂಧಿನಲ್ಲಿ ಮೂಳೆ ಮುರಿತವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ತಿಳಿಸಿದ್ದರು. ಹೀಗಾಗಿ, ಈ ಕುರಿತು ಕೌಟುಂಬಿಕ ವೈದ್ಯರಲ್ಲಿ ವಿಚಾರಿಸಿ ಬರುವುದಾಗಿ ಈಶ್ವರ್‌ ತೆರಳಿದ್ದರು. ಆನಂತರ ಅರ್ಧ ಗಂಟೆಯಾದರೂ ಅವರು ಮರಳಿರಲಿಲ್ಲ.

ಈ ನಡುವೆ ವೈದ್ಯ ಮಧುಕೇಶ್ವರ ಹೆಗಡೆ ಅವರು ಮತ್ತೊಮ್ಮೆ ಪರಿಶೀಲಿಸಿ ಬಂದಿದ್ದರು. ಆನಂತರ ಲಲಿತಾ ಅವರನ್ನು ಮಂಗಳೂರಿಗೆ ಕರೆದೊಯ್ಯುವುದಾಗಿ ಈಶ್ವರ್‌ ಅವರು ತಿಳಿಸಿದ್ದು, ಕರ್ತವ್ಯನಿರತ ವೈದ್ಯರಿಗೆ ನೋವಿನ ಶಮನಕ್ಕೆ ಇಂಜೆಕ್ಷನ್‌ ನೀಡುವಂತೆ ಸೂಚಿಸಿ ಮಧುಕೇಶ್ವರ್‌ ಅವರು ಮನೆಗೆ ತೆರಳಿದ್ದರು.

Also Read
ಗಲಾಟೆ ಪ್ರಕರಣ: ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

ಈ ಮಧ್ಯೆ, ರಾತ್ರಿ ಸುಮಾರು 10 ಗಂಟೆಗೆ ಆಸ್ಪತ್ರೆಗೆ ಬಂದಿದ್ದ ಹೆಗಡೆ ಮತ್ತು ಅವರ ಸಹೋದರ ಈಶ್ವರ್‌ ಅವರು ಡಾ. ಮಧುಕೇಶ್ವರ್‌ ಅವರನ್ನು ಆಸ್ಪತ್ರೆಗೆ ಕರೆಯಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು. ಈಶ್ವರ್‌ ಎಂಬಾತನು ಆಸ್ಪತ್ರೆ ಸಿಬ್ಬಂದಿ ಬಾಲಚಂದ್ರ ಭಟ್ಟ, ರಾಹುಲ್‌ ಮಾಶಲೇಕರ್‌ ಅವರಿಗೆ ಥಳಿಸಿದ್ದನು. ಆದರೆ, ಈ ಸಂಬಂಧ ಮಾಹಿತಿ ನೀಡಿದ್ದ ಸಿಬ್ಬಂದಿಯು ದೂರು ನೀಡಲು ಮುಂದಾಗಿರಲಿಲ್ಲ. ಸದರಿ ಘಟನೆಯನು ಮಾಧ್ಯಮಗಳಲ್ಲಿ ವರದಿಯಾಗಿದ್ದು, 03-01-2017ರಂದು ಆಸ್ಪತ್ರೆಯ ಸಿಸಿಟಿವಿ ವಿಡಿಯೊ ತುಣುಕುಗಳನ್ನು ಪರಿಶೀಲಿಸಲಾಗಿತ್ತು. ಪೊಲೀಸ್‌ ಅಧಿಕಾರಿ ರಘು ಕನಾಡೆ ನೀಡಿದ ದೂರಿನ ಅನ್ವಯ ಶಿರಸಿ ನ್ಯೂ ಮಾರ್ಕೆಟ್‌ ಠಾಣೆಯಲ್ಲಿ 05/01/2017ರಂದು ಅನಂತಕುಮಾರ್‌ ಹೆಗಡೆ ಮತ್ತು ಈಶ್ವರ್‌ ಎಸಳೆ ವಿರುದ್ಧ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರ ಹಾಗೂ ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯಿದೆ ಸೆಕ್ಷನ್‌ 4 ಮತ್ತು ಐಪಿಸಿ ಸೆಕ್ಷನ್‌ಗಳಾದ 506, 341, 34, 323 ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪ್ರಕರಣ ರದ್ದುಪಡಿಸುವಂತೆ ಹೆಗಡೆ ಹೈಕೋರ್ಟ್‌ ಮೆಟ್ಟಿಲೇರಿದ್ದು, ಈಗ ಆ ಅರ್ಜಿ ವಜಾಗೊಂಡಿದೆ.

Kannada Bar & Bench
kannada.barandbench.com