ತನ್ನ ಏಕಮಾತ್ರ ಪುತ್ರ 9 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿಯನ್ನು ಕೇರಳ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.
ಮಹಿಳೆಯೊಬ್ಬಳು ತನ್ನ ಕುಡಿಯನ್ನು ಕೊಲ್ಲುತ್ತಾಳೆ ಎಂದಾಗ ಕಣ್ಣಿಗೆ ಕಾಣುವುದಕ್ಕಿಂತಲೂ ಹೆಚ್ಚಿನದೇನೋ ಇರಬಹುದು. ಆದರೆ ತನಿಖಾಧಿಕಾರಿಗಳಿಗೆ ಅದನ್ನು ಗ್ರಹಿಸುವ ಸೂಕ್ಷ್ಮತೆಯ ಕೊರತೆಯಿದೆ ಎಂದು ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಕ್ಷೀಣಗೊಳ್ಳುತ್ತಿರುವ ಮತ್ತು ಪ್ರತೀಕಾರದಿಂದ ಕೂಡಿದ ತನ್ನ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ತಾಯಿ ಈ ಭೀಕರ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ. ಆದರೆ ಇದೊಂದೇ ಕಾರಣಕ್ಕಾಗಿ ಆಕೆಯ ಮೇಲೆ ತನ್ನ ಸ್ವಂತ ಮಗನನ್ನೇ ಕೊಂದ ಆರೋಪ ಮಾಡುವುದು ನ್ಯಾಯ ಸಮ್ಮತವಾಗದು ಎಂದು ಪೀಠ ಹೇಳಿದೆ.
ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿಯನ್ನು ತನ್ನ ಮಗುವನ್ನು ಕೊಂದ ಅಪರಾಧಿ ಎಂದು ವಿಚಾರಣಾ ನ್ಯಾಯಾಲಯ ನಿರ್ಣಯಿಸುವಲ್ಲಿ ತಾಯಿ ತನ್ನ ಸಾವಿಗೆ ಸಂಬಂಧಿಸಿದ ಹೇಳಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿರುವುದಕ್ಕೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸಾಯುವ ಕುರಿತಾದ ಘೋಷಣೆ ತಪ್ಪೊಪ್ಪಿಗೆಯಾಗಿ ಪರಿವರ್ತೆನಗೊಂಡಾಗ ನ್ಯಾಯಾಂಗ ಅಧಿಕಾರಿಗಳು ಕ್ಷಣ ತಡೆದು ಸಿಆರ್‌ಪಿಸಿ ಸೆಕ್ಷನ್ 164ರ ಉಪ-ವಿಭಾಗ 2ರಿಂದ 4ರ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಕಾರ್ಯವಿಧಾನವನ್ನು ಪಾಲಿಸಬೇಕು ಎಂದು ಅದು ಸಲಹೆ ನೀಡಿತು.
ತನ್ನ ಮಗನಿಗೆ ನಿದ್ರೆ ಮಾತ್ರೆ ನೀಡಿ ಆತ ನಿದ್ರಿಸಿದಾಗ ಆತನ ಮಣಿಕಟ್ಟಿನ ನಾಡಿಯನ್ನು ಬ್ಲೇಡ್‌ನಿಂದ ಸೀಳಿ ಟವೆಲ್‌ನಿಂದ ಉಸಿರುಗಟ್ಟಿಸಿದ್ದ ಆರೋಪಿ ನಂತರ ಆತ್ಮಹತ್ಯೆಯ ಉದ್ದೇಶದಿಂದ ವಿಷ ಸೇವಿಸಿ ತನ್ನ ಕೈಯನ್ನು ಬ್ಲೇಡ್‌ನಿಂದ ಸೀಳಿಕೊಂಡಿದ್ದಳು ಎನ್ನಲಾಗಿತ್ತು.