ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರ (ಪಿಎನ್‌ಡಿಟಿ) ಕಾಯಿದೆಯಡಿ ಗರ್ಭಿಣಿಯರಿಗೆ ಸೋನೋಗ್ರಫಿ ಮತ್ತಿತರ ಪ್ರಸವಪೂರ್ವ ಪರೀಕ್ಷೆಗಳನ್ನು ಮಾಡಲು ಆಯುಷ್ ವೈದ್ಯರು ಅರ್ಹರಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. [ತಮಿಳುನಾಡು ಆಯುಷ್ ಸೊನೊಲೊಜಿಸ್ಟ್ ಸಂಘ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅಲೋಪತಿ ಪದ್ಧತಿ ಅಥವಾ ಇನ್ನಾವುದೇ ವೈದ್ಯಕೀಯ ಪದ್ದತಿ ಅಭ್ಯಾಸ ಮಾಡುವ ಯಾವುದೇ ವೈದ್ಯರು ಕೇಂದ್ರ ಪಿಎನ್‌ಡಿಟಿ ಕಾಯಿದೆಯ ಅರ್ಥದಲ್ಲಿ ಅರ್ಹ ವೈದ್ಯರಾಗಿದ್ದರೆ ಮಾತ್ರ ಅಂತಹ ಪರೀಕ್ಷೆಗಳನ್ನು ಮಾಡಬಹುದು ಎಂದು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಹೋಮಿಯೋಪತಿ, ಯುನಾನಿ, ಆಯುರ್ವೇದ ಮತ್ತಿತರ ಪರ್ಯಾಯ ಪದ್ದತಿಗಳನ್ನು ಅಭ್ಯಾಸ ಮಾಡುವ ವೈದ್ಯಕೀಯ ವೃತ್ತಿಪರರನ್ನು ಒಳಗೊಂಡ ತಮಿಳುನಾಡು ಆಯುಷ್ ಸೊನೊಲೊಜಿಸ್ಟ್ ಸಂಘ ಸಲ್ಲಿಸಿದ್ದ ಮೂರು ರಿಟ್ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತು.
ತಾವು ಅಧ್ಯಯನ ಮಾಡಿದ ವೈದ್ಯಕೀಯ ಪದ್ದತಿಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ಸಂಸ್ಥೆಗಳಿಂದ ಅಧಿಕೃತ ಪದವಿ ಪಡೆದಿರುವುದಾಗಿ ಅರ್ಜಿದಾರರು ಹೇಳಿಕೊಂಡಿದ್ದರು. ಹೋಮಿಯೋಪತಿ, ಆಯುರ್ವೇದ ಮತ್ತು ಇತರ ಪರ್ಯಾಯ ಔಷಧ ಕೋರ್ಸ್‌ಗಳಿಗೆ ರೋಗನಿರ್ಣಯದ ಕಾರ್ಯವಿಧಾನಗಳು ತಮ್ಮ ನಿಗದಿತ ಪಠ್ಯಕ್ರಮದ ಭಾಗವಾಗಿದ್ದವು ಎಂದು ಅವರು ವಾದಿಸಿದ್ದರು.
ಇದಲ್ಲದೆ ತಾವು ಅಲ್ಟ್ರಾಸೋನೋಗ್ರಾಮ್ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕೂಡ ಪೂರ್ಣಗೊಳಿಸಿದ್ದು ಅಲ್ಟ್ರಾಸೋನೋಗ್ರಾಮ್ ಪರೀಕ್ಷೆ ನಡೆಸಲು ತಾವು ಸಂಪೂರ್ಣ ಅರ್ಹರು ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಹೀಗೆ ಮಾಡುವುದನ್ನು ಪಿಎನ್‌ಡಿಟಿ ಕಾಯಿದೆ ನಿಷೇಧಿಸಿದೆ.
ಪ್ರಕರಣದ ಪ್ರತಿವಾದಿಯಾದ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ಅರ್ಜಿದಾರರ ಸಂಘದ ನಿಲುವನ್ನು ಬೆಂಬಲಿಸಿ ರೋಗ ನಿರ್ಣಯ ಪರೀಕ್ಷೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದಿತು. ಆದರೆ ತಮಿಳುನಾಡು ಸರ್ಕಾರ ಪಿಎನ್‌ಡಿಟಿ ಕಾಯಿದೆಯಡಿ ವೈದ್ಯರು ಅರ್ಹತೆ ಪಡೆದಿರಬೇಕು ಏಕೆಂದರೆ ಅದು ಕೇಂದ್ರ ಕಾಯಿದೆಯಾಗಿದೆ ಎಂದಿತು.
ಸರ್ಕಾರದ ವಾದ ಪುರಸ್ಕರಿಸಿದ ನ್ಯಾಯಾಲಯ ಕೇವಲ ರೋಗನಿರ್ಣಯ ವಿಧಾನ ಅಥವಾ ಅಲ್ಟ್ರಾ ಸೋನೋಗ್ರಾಮ್/ಅಲ್ಟ್ರಾಸೌಂಡ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮ ಇದೆ ಎಂದ ಮಾತ್ರಕ್ಕೆ ಪಿಎನ್‌ಡಿಟಿ ಕಾಯಿದೆಯಡಿ ಮಾನ್ಯತೆ ಪಡೆಯಲಾಗಿದೆ ಎಂದು ಪರಿಗಣಿಸಲಾಗದು ಎಂದು ಹೇಳಿತು.