ಮಗು ಅದಲು ಬದಲಾದ ಪ್ರಕರಣ: ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಿದ ಮಂಗಳೂರು ನ್ಯಾಯಾಲಯ

ನ್ಯಾಯಾಲಯದ ಆದೇಶದಂತೆ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ಪರೀಕ್ಷೆ ನಡೆಯಲಿದೆ.
ಮಗು ಅದಲು ಬದಲಾದ ಪ್ರಕರಣ: ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಿದ ಮಂಗಳೂರು ನ್ಯಾಯಾಲಯ
Govt. Lady Goschen Hospital, Mangaluru

ಮಂಗಳೂರಿನ ಸರ್ಕಾರಿ ಲೇಡಿ ಗೋಶನ್‌ ಆಸ್ಪತ್ರೆಯಲ್ಲಿ ಮಗು ಬದಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಹೆತ್ತವರಿಗೆ ನೀಡಲಾದ ಮಗು ಹಾಗೂ ತಂದೆ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಲು ನಗರದ ನ್ಯಾಯಾಲಯ ಅನುಮತಿ ನೀಡಿದೆ.

ತಮಗೆ ಜನಿಸಿದ್ದು ಹೆಣ್ಣು ಮಗು ಆದರೆ ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಕೊಟ್ಟಿದ್ದು ಗಂಡು ಮಗು ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಫಾ ಎಂಬುವವರು ನಗರದ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Also Read
ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿನ ದುರಂತಕ್ಕೆ ಜಿಲ್ಲಾಡಳಿತ, ಆಸ್ಪತ್ರೆ ಅಧಿಕಾರಿಗಳು ಹೊಣೆ ಎಂದ ತನಿಖಾ ಸಮಿತಿ

ನ್ಯಾಯಾಲಯದ ಆದೇಶದಂತೆ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ಪರೀಕ್ಷೆ ನಡೆಯಲಿದೆ. ಬಳಿಕ ಅದರ ಮಾದರಿಯನ್ನು ಹೈದರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಮೂರು ತಿಂಗಳ ಒಳಗೆ ಇದರ ವರದಿ ಬರಲಿದ್ದು ಇದನ್ನು ಆಧರಿಸಿ ಮುಂದಿನ ತನಿಖೆ ನಡೆಯಲಿದೆ ಎಂದರು ಬಂದರು ಠಾಣೆ ಪೊಲೀಸರು ತಿಳಿಸಿದ್ದಾರೆ.

ಕುಂದಾಪುರದ ಮಹಿಳೆಯೊಬ್ಬರು ಸೆ.27ರಂದು ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದರು. ಮಹಿಳೆಗೆ ಸಿಸೇರಿಯನ್‌ ವಿಧಾನದಲ್ಲಿ ಹೆರಿಗೆ ಮಾಡಿಸಲಾಗಿತ್ತು. ದಾಖಲೆಗಳಲ್ಲಿ ಹೆಣ್ಣು ಮಗು ಎಂದು ನಮೂದಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಕಾರಣ 18 ದಿನಗಳ ಕಾಲ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅ.14ರಂದು ಪೋಷಕರು ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್‌ ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಅಲ್ಲಿ ದಾಖಲಾದಾಗ ಗಂಡು ಮಗು ಕೊಟ್ಟಿರುವುದು ಪೋಷಕರ ಗಮನಕ್ಕೆ ಬಂದಿದೆ. ನಂತರ ಪೋಷಕರು ಮರಳಿ ಮಗುವನ್ನು ಲೇಡಿಗೋಶನ್‌ ಆಸ್ಪತ್ರೆಗೆ ಕರೆತಂದು, ವೈದ್ಯಾಧಿಕಾರಿ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಅವರು, ಈ ಮಗು ನಿಮ್ಮದೇ, ದಾಖಲೆಯಲ್ಲಿ ನಮೂದಿಸುವ ವೇಳೆ ತಪ್ಪಾಗಿದೆ ಎಂದು ಹೇಳಿದ್ದರು. ಆದರೆ ಇದರಿಂದ ಅನುಮಾನಗೊಂಡ ಮಗುವಿನ ತಂದೆ ಮುಸ್ತಫಾ ಸೂಕ್ತ ತನಿಖೆ ನಡೆಸುವಂತೆ ಕೋರಿ ಬಂದರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಮಧ್ಯೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟನೆ ನೀಡಿ ಮಗು ಅದಲು ಬದಲಾಗಿಲ್ಲ. ದಾಖಲೆಯಲ್ಲಿ ನಮೂದಿಸುವಾಗ ತಪ್ಪಾಗಿದೆ. ಆದರೆ ಜನಿಸಿದ್ದು ಗಂಡು ಮಗು. ಅದೇ ಮಗುವನ್ನು ಪೋಷಕರಿಗೆ ನೀಡಲಾಗಿದೆ ಎಂದಿದ್ದರು.

Related Stories

No stories found.