ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿನ ದುರಂತಕ್ಕೆ ಜಿಲ್ಲಾಡಳಿತ, ಆಸ್ಪತ್ರೆ ಅಧಿಕಾರಿಗಳು ಹೊಣೆ ಎಂದ ತನಿಖಾ ಸಮಿತಿ

ಜಿಲ್ಲಾಡಳಿತದ ವೈಫಲ್ಯ ಹಾಗೂ ನಿರ್ದಿಷ್ಟವಾಗಿ ಡೀನ್‌ ಸೇರಿದಂತೆ ಆಸ್ಪತ್ರೆ ಅಧಿಕಾರಿಗಳ ವೈಫಲ್ಯ ಇದರಲ್ಲಿ ಗೋಚರಿಸುತ್ತದೆ. ವಿಸ್ತೃತ ತನಿಖೆಯಿಂದ ಸಂಬಂಧಪಟ್ಟ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿಸಲು ಸಾಧ್ಯ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿನ ದುರಂತಕ್ಕೆ ಜಿಲ್ಲಾಡಳಿತ, ಆಸ್ಪತ್ರೆ ಅಧಿಕಾರಿಗಳು ಹೊಣೆ ಎಂದ ತನಿಖಾ ಸಮಿತಿ

ಚಾಮರಾಜನಗರ ಕೋವಿಡ್‌ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾಧಿಕಾರಿಯವರು ಜಿಲ್ಲಾ ಮುಖ್ಯಸ್ಥರಾಗಿ ಗಂಭೀರ ಸನ್ನಿವೇಶದಲ್ಲಿ ತೋರಬೇಕಾದ ಕ್ರಿಯಾಶೀಲತೆ ಮತ್ತು ನಾಯಕತ್ವವನ್ನು ತೋರುವಲ್ಲಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಮೇಲ್ವಿಚಾರಣಾ ಸಮಿತಿಯ ತನಿಖಾ ವರದಿಯು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ನಿವೃತ್ತ ನ್ಯಾ.ಎ.ಎನ್‌. ವೇಣುಗೋಪಾಲಗೌಡ ಅವರ ಅಧ್ಯಕ್ಷತೆಯ ಸಮಿತಿಯು ವರದಿ ಸಲ್ಲಿಸಿದ್ದು, ನಿವೃತ್ತ ನ್ಯಾ. ಕೆ ಎನ್‌ ಕೇಶವನಾರಾಯಣ, ನಿವೃತ್ತ ಪೊಲೀಸ್ ಅಧಿಕಾರಿ ಎಸ್‌ ಟಿ ರಮೇಶ್‌ ಅವರನ್ನು ಸಮಿತಿಯು ಒಳಗೊಂಡಿತ್ತು.

ತನಿಖಾ ವರದಿಯಲ್ಲಿ ಘಟನೆಗೆ ಕಾರಣವಾಗಿರುವ, ಹಲವು ವಿಚಾರಗಳತ್ತ ಬೆರಳು ಮಾಡಿದ್ದು ದುರಂತಕ್ಕೆ ಪ್ರಮುಖವಾಗಿ ಜಿಲ್ಲಾಡಳಿತ ಹಾಗೂ ಆಸ್ಪತ್ರೆ ಅಧಿಕಾರಿಗಳ ವೈಫಲ್ಯದತ್ತ ಬೆರಳು ಮಾಡಿದೆ. ಜಿಲ್ಲಾಧಿಕಾರಿಗಳು ಗಂಭೀರವಾಗಿ ಎಡವಿರುವ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ.

ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಯವರು ಆಮ್ಲಜನಕ ಕೊರತೆಯ ಗಂಭೀರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ, ಮಾರ್ಗದರ್ಶನ ಮಾಡುವಲ್ಲಿ ಶೋಚನೀಯವಾಗಿ ಸೋತಿದ್ದಾರೆ. ಬದಲಿಗೆ, ಮೈಸೂರು ಜಿಲ್ಲಾಧಿಕಾರಿಯವರ ಮೇಲೆ ಆಪಾದನೆ ಮಾಡುವುದರಲ್ಲಿ ಅವರು ವ್ಯಸ್ತರಾದರು ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ, ಹೊಸದಾಗಿ ಅಳವಡಿಸಲಾದ ಆಮ್ಲಜನಕ ಟ್ಯಾಂಕರ್‌ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ, ತರಬೇತಿ ಹೊಂದುವಲ್ಲಿ ಆಸ್ಪತ್ರೆಯ ಅಧಿಕಾರಿಗಳು ವಿಫಲರಾಗಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟಾಗಿ, ಜಿಲ್ಲಾಡಳಿತದ ವೈಫಲ್ಯ ಹಾಗೂ ನಿರ್ದಿಷ್ಟವಾಗಿ ಡೀನ್‌ ಸೇರಿದಂತೆ ಆಸ್ಪತ್ರೆ ಅಧಿಕಾರಿಗಳ ವೈಫಲ್ಯ ದುರಂತದ ಹಿಂದೆ ಪ್ರಮುಖವಾಗಿ ಗೋಚರಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿಸ್ತೃತ ತನಿಖೆಯಿಂದ ಸಂಬಂಧಪಟ್ಟ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿಸುವುದು ಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.

Also Read
ಚಾಮರಾಜನಗರ ದುರಂತ: ಘಟನೆಯ ಸತ್ಯಶೋಧನೆಗೆ ನ್ಯಾ. ಎ ಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ರಚಿಸಿದ ಹೈಕೋರ್ಟ್‌

ವರದಿಯ ಪ್ರಮುಖ ಶಿಫಾರಸ್ಸುಗಳು ಇಂತಿವೆ:‌

  • ಜಿಲ್ಲಾಸ್ಪತ್ರೆಗಳಿಗೆ ಆಮ್ಲಜನಕದ ಹಂಚಿಕೆ ಮತ್ತು ವಿತರಣೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳಿಗಿಂತ ಮೇಲ್ದರ್ಜೆಯ ಅಧಿಕಾರಿಯೊಬ್ಬರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಬೇಕು.

  • ಹೆಚ್ಚುವರಿಯಾಗಿ ಕನಿಷ್ಠ 24 ಗಂಟೆಗಳಿಗಾಗುವಷ್ಟು ಆಮ್ಲಜನಕವನ್ನು ಸಂಗ್ರಹ ಮಾಡಿಕೊಳ್ಳಬೇಕು. ಆಮ್ಲಜನಕ ಕೊರತೆಯಿಂದ ಉಂಟಾಗುವ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು.

  • ಆಮ್ಲಜನಕದ ಪ್ರಮಾಣ, ಬಳಕೆ ಮತ್ತು ಬಾಕಿ ವಿವರಗಳನ್ನು ತಿಳಿಸುವ ದಾಖಲೆಯನ್ನು ರಾಜ್ಯಾದ್ಯಂತ ಏಕರೂಪವಾಗಿ ಇರಿಸಬೇಕು. ಆಮ್ಲಜನಕದ ಸಂಗ್ರಹದ ವಿವರಗಳನ್ನು ತತ್ಕಾಲದಲ್ಲಿ (ರಿಯಲ್‌ಟೈಮ್) ಪ್ರದರ್ಶಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಡಿಜಿಟಲ್‌ ಪರದೆಯ ಮೂಲಕ ಎಲ್ಲ ಆಸ್ಪತ್ರೆಗಳಲ್ಲಿ ಈ ವಿವರ ಪ್ರದರ್ಶಿಸಬೇಕು.

  • ಆಮ್ಲಜನಕ ತುಂಬಿದ ಸಿಲಿಂಡರ್‌ಗಳನ್ನು ಒತ್ತೊಯ್ಯುವ ವಾಹನಕ್ಕೆ ಜಿಪಿಎಸ್‌ ಅಳವಡಿಸಬೇಕು.

  • ಘಟನೆಯಲ್ಲಿ ಸಾವನ್ನಪ್ಪಿದವರ ಸಂಬಂಧಿಗಳಿಗೆ ನ್ಯಾಯಾಲಯವು ನಿರ್ಧರಿಸುವ ಪರಿಹಾರದ ಮೊತ್ತವನ್ನು ಪಾವತಿಸಬೇಕು.

  • ಮುಂದಿನ ದಿನಗಳಲ್ಲಿ ಅಗತ್ಯ ತನಿಖೆ ನಡೆಸಲು ಅನುವಾಗುವಂತೆ ಘಟನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಸಿಸಿಟಿವಿ/ಡಿವಿಆರ್‌ ಹಾರ್ಡ್‌ಡಿಸ್ಕ್‌ಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಸುರಕ್ಷಿತ ವಶಕ್ಕೆ ನೀಡಬೇಕು.

Related Stories

No stories found.
Kannada Bar & Bench
kannada.barandbench.com