ಬ್ಯಾಡ್ ಬಾಯ್ ಬಿಲಿಯನೇರ್ಸ್: ತಡೆಯಾಜ್ಞೆ ತೆರವುಗೊಂಡ ನಂತರ ಸತ್ಯಂ ಸಂಚಿಕೆ ಬಿಡುಗಡೆ ಮಾಡಿದ ನೆಟ್‌ಫ್ಲಿಕ್ಸ್
ಹಗರಣದ ಕಾರಣಕ್ಕೆ ಸುದ್ದಿಯಾದ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಸಂಸ್ಥಾಪಕ ಬೈರ್ರಾಜು ರಾಮಲಿಂಗ ರಾಜು ಕುರಿತ ಸಂಚಿಕೆಯನ್ನು ನೆಟ್‌ಫ್ಲಿಕ್ಸ್ ಪ್ರಸಾರ ಮಾಡದಂತೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈದರಾಬಾದ್‌ನ ನ್ಯಾಯಾಲಯ ಮಂಗಳವಾರ ರದ್ದುಗೊಳಿಸಿದೆ [ಬೈರ್ರಾಜು ರಾಮಲಿಂಗ ರಾಜು ಮತ್ತು ನೆಟ್‌ಫ್ಲಿಕ್ಸ್ಸ್ ನಡುವಣ ಪ್ರಕರಣ]
ಆದೇಶದ ಬೆನ್ನಿಗೇ, ತನಿಖಾ ಸಾಕ್ಷ್ಯಸರಣಿ ಬ್ಯಾಡ್ ಬಾಯ್ ಬಿಲಿಯನೇರ್ಸ್: ಇಂಡಿಯಾದ ಭಾಗವಾಗಿ ʼಸತ್ಯಂʼ ಕುರಿತ ಸಂಚಿಕೆಯನ್ನು ನೆಟ್‌ಫ್ಲಿಕ್ಸ್ ಪ್ರಸಾರ ಮಾಡಿದೆ. ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಸುಬ್ರತ ರಾಯ್ ಅವರಂತಹ ಉದ್ಯಮಿಗಳನ್ನೂ ಕೇಂದ್ರೀಕರಿಸಿರುವ ಸಾಕ್ಷ್ಯಚಿತ್ರ ಸರಣಿಯು 2020ರಲ್ಲಿ ಬಿಡುಗಡೆಯಾಗಿತ್ತು.
ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನ ಉದಯ ಮತ್ತು ಪತನದ ಕಥೆಯನ್ನು ವೆಬ್ ಸರಣಿ ವಿವರಿಸುತ್ತದೆ. ಜೊತೆಗೆ 2009ರಲ್ಲಿ ಬೆಳಕಿಗೆ ಬಂದ ಕಂಪನಿಯ ಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಬೈರ್ರಾಜು ರಾಮಲಿಂಗ ರಾಜು ಅವರ ವಿರುದ್ಧದ ಲೆಕ್ಕಪತ್ರ ವಂಚನೆ ಆರೋಪಗಳ ಕುರಿತಂತೆಯೂ ಚಿತ್ರಿಸಲಾಗಿದೆ. ಇದರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ನಡೆಸಿದ ತನಿಖೆಗಳೂ ಸೇರಿವೆ.
2020ರ ಸೆಪ್ಟೆಂಬರ್ 1ರಂದು ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್‌ನ XXV ಹೆಚ್ಚುವರಿ ಮುಖ್ಯ ನ್ಯಾಯಾಧೀಶರು ಎಪಿಸೋಡ್ ಬಿಡುಗಡೆ ಮಾಡದಂತೆ ನೆಟ್‌ಫ್ಲಿಕ್ಸ್‌ಗೆ ತಡೆ ನೀಡಿದ್ದರು.
ನಂತರ ಸ್ಟ್ರೀಮಿಂಗ್ ಸೇವಾ ಕಂಪನಿಯಾದ ನೆಟ್‌ಫ್ಲಿಕ್ಸ್ ಈ ಆದೇಶವನ್ನು ತೆಲಂಗಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. 2022ರಲ್ಲಿ ಹೈಕೋರ್ಟ್, ರಾಜು ಸಲ್ಲಿಸಿದ್ದ ತಾತ್ಕಾಲಿಕ ಅರ್ಜಿಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು.
ಆದೇಶದಲ್ಲಿ, ಸಿವಿಲ್ ಪ್ರೊಸೀಜರ್ ಕೋಡ್ (ಸಿಪಿಸಿ) ನ ಆದೇಶ XXXIX ನಿಯಮಗಳು 1 ಮತ್ತು 2ರ ಅಡಿಯಲ್ಲಿ ಸಲ್ಲಿಸಲಾದ ತಾತ್ಕಾಲಿಕ ಅರ್ಜಿಯ ಅಂತಿಮ ನಿರ್ಧಾರ ಕೈಗೊಳ್ಳದೆ, ಏಕಪಕ್ಷೀಯವಾಗಿ ತಡೆ ಆದೇಶವನ್ನು ಮತ್ತೆ ಮತ್ತೆ ನೀಡಲಾಗಿದೆ ಎಂಬ ವಿಚಾರವನ್ನು ಹೈಕೋರ್ಟ್ ಗಮನಿಸಿತ್ತು. ವಿಷಯದ ತಾತ್ವಿಕ ಪರಿಶೀಲನೆ ಇಲ್ಲದೆ ಇಂತಹ ತಡೆ ಮುಂದುವರೆದಿದ್ದಕ್ಕೆ ಹೈಕೋರ್ಟ್ ಅಸಮ್ಮತಿ ವ್ಯಕ್ತಪಡಿಸಿತ್ತು.
ಹೈಕೋರ್ಟ್ ನಿರ್ದೇಶನದಂತೆ, ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿ, ರಾಮಲಿಂಗ ರಾಜು ಕುರಿತ ಸಂಚಿಕೆಗೆ ವಿಧಿಸಲಾಗಿದ್ದ ತಡೆಯನ್ನು ತೆರವುಗೊಳಿಸಿದರು. ಆದರೆ, ಸಂಚಿಕೆ ವಿರುದ್ಧ ರಾಜು ಸಲ್ಲಿಸಿರುವ ದಾವೆ ಇನ್ನೂ ಸಿವಿಲ್ ಕೋರ್ಟ್‌ನಲ್ಲಿ ಅಂತಿಮ ತೀರ್ಪನ್ನು ಎದುರು ನೋಡುತ್ತಿದೆ.


