ದೇಶದ ವಾಣಿಜ್ಯ ರಾಜಧಾನಿ ಮುಂಬೈ ಸಮೀಪದಲ್ಲಿರುವ ಥಾಣೆಯ ಬದಲಾಪೂರ್‌ನ ಶಿಶುವಿಹಾರಕ್ಕೆ ತೆರಳಿದ್ದ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಗುತ್ತಿಗೆ ಕಾರ್ಮಿಕನೊಬ್ಬ (ಈಚೆಗೆ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ) ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಲಾಪೂರ್ ಶಾಲೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಕಲ್ಯಾಣ್‌ನ ಸೆಷನ್ಸ್ ನ್ಯಾಯಾಧೀಶರು ಸೆಪ್ಟೆಂಬರ್ 10ರಂದು ನೀಡಿದ್ದ ಆದೇಶ ಪ್ರಶ್ನಿಸಿ ಈ ಇಬ್ಬರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಆರ್ ಎನ್ ಲಡ್ಡಾ ಅವರು ಇದೀಗ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದಾರೆ.
ಸಂತ್ರಸ್ತರ ಎಳೆಯ ವಯಸ್ಸು, ಅವರು ಅನುಭವಿಸಿದ ಆಘಾತವನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳು ಸಾಕ್ಷ್ಯ ಹಾಳುಮಾಡಬಹುದು ಇಲ್ಲವೇ ಸಾಕ್ಷಿಗಳ ಮೇಲೆ ಒತ್ತಡ ಹೇರಬಹುದು ಎಂದಿತು.
"ಸಂತ್ರಸ್ತರು ಅಪ್ರಾಪ್ತ ವಯಸ್ಕರು ಎಂದು ಪರಿಗಣಿಸಿ, ಅವರು ಅನುಭವಿಸಿದ ಆಘಾತ ಅವರ ಎಳೆಯ ವಯಸ್ಸಿನಲ್ಲಿ ಆಳವಾದ ಪರಿಣಾಮ ಉಂಟಾಗುತ್ತದೆ. ಜೊತೆಗೆ ದೀರ್ಘಕಾಲೀನ ಮತ್ತು ಸರಿಪಡಿಸಲಾಗದ ಮಾನಸಿಕ ಘಾಸಿಯನ್ನುಂಟು ಮಾಡುತ್ತದೆ. ದುರದೃಷ್ಟಕರ ಘಟನೆ ನಡೆದ ಶಾಲೆಯಲ್ಲಿ ಅರ್ಜಿದಾರರು ಪ್ರಮುಖ ಸ್ಥಾನದಲ್ಲಿದ್ದರು, ಹೀಗಾಗಿ ಅವರು ಸಾಕ್ಷ್ಯಗಳನ್ನು ಹಾಳು ಮಾಡುವ ಶಾಲೆಯ ಉದ್ಯೋಗಿಗಳಾಗಿರುವ ಸಾಕ್ಷಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ. ನ್ಯಾಯಾಲಯದ ವ್ಯಾಜ್ಯಗಳು ಮತ್ತು ತೀರ್ಪಿನ ಮೂಸೆಯಲ್ಲಿ ಜಾಮೀನಿಗೆ ಇದು ಸೂಕ್ತ ಪ್ರಕರಣವಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸೂಕ್ತ ರೀತಿಯಲ್ಲಿ ವಾದಿಸಿದ್ದಾರೆ ”ಎಂಬುದಾಗಿ ತಿಳಿಸಿದ ನ್ಯಾಯಾಲಯ ಮನವಿ ತಿರಸ್ಕರಿಸಿತು.
ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಬಂಧಿತ ಅಕ್ಷಯ್ ಶಿಂಧೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ.
ಎನ್‌ಕೌಂಟರ್ ವಿರೋಧಿಸಿ ಶಿಂಧೆಯ ತಂದೆ ಸಲ್ಲಿಸಿದ್ದ ಅರ್ಜಿಯನ್ನುಇದೇ ಹೈಕೋರ್ಟ್ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ. ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ "ಇದನ್ನು ಎನ್‌ಕೌಂಟರ್ ಎಂದು ಕರೆಯಲಾಗುವುದಿಲ್ಲ. ಇದು ಎನ್‌ಕೌಂಟರ್ ಅಲ್ಲ," ಎಂದು ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿತ್ತು. ಶಾಲಾಧಿಕಾರಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.