ಘೋರ ಪ್ರಕರಣಗಳಲ್ಲಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳಿಗೆ ಜಾಮೀನು ಅನಿವಾರ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಸಂತ್ರಸ್ತರು ಮಕ್ಕಳಾಗಿದ್ದರೆ ಆಗ ಆರೋಪಿಯನ್ನು ಬಿಡುಗಡೆ ಮಾಡುವುದು ನ್ಯಾಯದ ಆಶಯವನ್ನು ಮಣಿಸುತ್ತದೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಬಹುದಾಗಿದೆ ಎಂದು ನ್ಯಾಯಾಲಯ ನುಡಿದಿದೆ.
Madhya Pradesh High Court, Jabalpur Bench
Madhya Pradesh High Court, Jabalpur Bench

ಘೋರ ಅಪರಾಧ ಪ್ರಕರಣಗಳಲ್ಲಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳಿಗೆ ಜಾಮೀನು ನೀಡುವುದಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಅರ್ಥೈಸುವಾಗ ಸಮಾಜದ ಆತಂಕವನ್ನು ನಿರ್ಲಕ್ಷಿಸಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಅಪ್ರಾಪ್ತ ಆರೋಪಿಗಳಿಗೆ ಉದಾರವಾಗಿ ಜಾಮೀನು ನೀಡುವ ನಿಬಂಧನೆ ಒಳಗೊಂಡ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯು ಕಾನೂನು ಸಂಘರ್ಷದಲ್ಲಿರುವ ಮಕ್ಕಳು ಮತ್ತು ಸಮಾಜ ಈ ಎರಡರ ಕಾಳಜಿಯನ್ನೂ ಜಾಮೀನು ಕೋರಿಕೆ ವೇಳೆ ಪರಿಗಣಿಸಿ ತೀರ್ಮಾನಿಸಬೇಕೆಂದು ಹೇಳುತ್ತದೆ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಪಲಿವಾಲ್ ತಿಳಿಸಿದರು.

ಅಪ್ರಾಪ್ತ ಬಾಲ ಆರೋಪಿಯ ಜಾಮೀನಿನ ಪ್ರಕರಣ ಪರಿಗಣಿಸುವಾಗ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು ಮಗುವಿನ ಹಿತದೃಷ್ಟಿ, ಸಂತ್ರಸ್ತರಿಗೆ ನ್ಯಾಯ ದೊರೆಯುವಿಕೆ ಜೊತೆಗೆ ಸಾಮಾಜಿಕ ಆತಂಕ ಸೇರಿದಂತೆ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಪೀಠ ನುಡಿದಿದೆ.

ಪ್ರಸಕ್ತ ಪ್ರಕರಣದಲ್ಲಿ ಅಪ್ರಾಪ್ತನಿಂದಲೇ ಹತ್ಯೆಗೀಡಾದ ಮತ್ತೊಂದು ಮಗುವಿನ ಕುಟುಂಬದ ದುಃಖದುಮ್ಮಾನ ನಿರ್ಲಕ್ಷಿಸಿ ಬಾಲ ಆರೋಪಿಯ ಪ್ರಯೋಜನಕ್ಕಾಗಿ ಮಾತ್ರ ಬಾಲಾಪರಾಧಿಗಳ ಜಾಮೀನು ನಿಬಂಧನೆಗಳು ಬಳಕೆಯಾಗಬೇಕು ಎಂದು ಅರ್ಥೈಸಲಾಗುವುದಿಲ್ಲ. ಯಾವುದೇ ಮಗುವೊಂದು ಅತ್ಯಾಚಾರ ಇಲ್ಲವೇ ಲೈಂಗಿಕ ದೌರ್ಜನ್ಯ ಕೊಲೆಯಂತಹ ಅಪರಾಧಗಳಿಗೆ ಬಲಿಯಾದಾಗಲೆಲ್ಲಾ ಸಮಾಜವು ನ್ಯಾಯಕ್ಕಾಗಿ ಅಂಗಲಾಚುತ್ತದೆ ಎಂದು ಪೀಠ ಹೇಳಿತು.

ಅಪಹರಿಸಲಾಗಿದ್ದ 17 ವರ್ಷದ ಬಾಲಕನನ್ನು ₹ 20 ಲಕ್ಷ ನೀಡದ ಹಿನ್ನೆಲೆಯಲ್ಲಿ ಸಹ ಆರೋಪಿಯೊಂದಿಗೆ ಸೇರಿ ಕೊಂದ 16 ವರ್ಷದ ಅಪ್ರಾಪ್ತ ವಯಸ್ಕನ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸೂಕ್ತ ಕಾರಣಗಳಿದ್ದಾಗ ಜಾಮೀನು ನಿರಾಕರಿಸಬಹುದಾದ್ದರಿಂದ  ಎಲ್ಲಾ ಪ್ರಕರಣಗಳಲ್ಲಿ ಅಪ್ರಾಪ್ತ ಆರೋಪಿಗಳಿಗೆ ಜಾಮೀನು ನೀಡುವುದು "ಅವಶ್ಯಕವಲ್ಲ” ಎಂದು ನಿಬಂಧನೆಗಳು ಖುದ್ದು ಸ್ಪಷ್ಟಪಡಿಸುತ್ತವೆ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಬ್ಬ ಆರೋಪಿಯು ಅಪ್ರಾಪ್ತ ಎಂದು ಕಂಡುಬಂದಾಕ್ಷಣ, ವಿಷಯದ ಇತರ ಸಂದರ್ಭ ಸನ್ನಿವೇಶಗಳನ್ನು ಲೆಕ್ಕಿಸದೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕಾನೂನು ಹೇಳುವುದಿಲ್ಲ ಎಂಬುದಾಗಿ ಅದು ತರ್ಕಿಸಿದೆ.

ಮಗುವಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ಅವರ ಹಿತದೃಷ್ಟಿಯ ಪ್ರಾಥಮಿಕ ಪರಿಗಣನೆಯ ಮೇಲೆ ಆಧರಿತವಾಗಿದ್ದರೂ, ಇನ್ನೊಂದು ಬದಿಯ ನ್ಯಾಯದ ಬೇಡಿಕೆಗಳನ್ನು ಸರಳವಾಗಿ ತಳ್ಳಿಹಾಕಲಾಗದು ಎಂದು ಪೀಠ ಹೇಳಿದೆ.

ತಾವು ಬೇಡಿಕೆ ಇರಿಸಿದ ಹಣವನ್ನು ಮಗುವಿನ ತಂದೆಯು ನೀಡಲಿಲ್ಲ ಎನ್ನುವ ಕಾರಣಕ್ಕೆ ಅಸಹಾಯಕ ಮಗುವನ್ನು ಕೊಂದಿರುವುದು ಅಪ್ರಾಪ್ತ ಆರೋಪಿಯ ನೀತಿಗೆಟ್ಟ ಮಾನಸಿಕತೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ಬಾಲಕನೊಬ್ಬನನ್ನು ಅಪಹರಿಸಿ ಹಣ ದೊರೆಯದ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವಾಗ ಅದು ಎಳವೆಯಲ್ಲಿ ಇಲ್ಲವೇ ಹದಿಹರೆಯದ ವಯಸ್ಸಿನಲ್ಲಿ ಎಸಗಿದ ಕೃತ್ಯ ಎನ್ನಲಾಗದು. ಬದಲಿಗೆ ಇದು ಮೃತ ಮಗುವಿನ ತಂದೆ ಅಥವಾ ಕುಟುಂಬದ ಸದಸ್ಯರನ್ನು ಭಾರೀ ಸುಲಿಗೆ ಮಾಡುವ ನಿಟ್ಟಿನಲ್ಲಿ ಎಸಗಿದ ಕೃತ್ಯ ಎಂದಿದೆ.

ಬಾಲಾಪರಾಧಿ ನ್ಯಾಯ ಕಾಯಿದೆಯ ಉದ್ದೇಶವು ಕೇವಲ ಸುಧಾರಣಾಕಾರಿ ಮಾತ್ರವಲ್ಲ, ಅಪರಾಧಕ್ಕೆ ತಕ್ಕಂತೆ ದಂಡನೀಯವೂ ಆಗಿದ್ದು ಆರೋಪಿಗಳು ಮತ್ತು ಸಂತ್ರಸ್ತರ ನಡುವಿನ ಸಂಘರ್ಷಾತ್ಮಕ ಬೇಡಿಕೆಗಳ ನಡುವೆ ಸಮತೋಲನ ಇರಬೇಕು ಎಂದು ಪೀಠ ತಿಳಿಸಿದೆ.

ಈ ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಗೆ ಜಾಮೀನು ನೀಡುವುದು ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಗಳಿಗಷ್ಟೇ ಅವನನ್ನು ದೂಡದೆ ನ್ಯಾಯದ ಆಶಯವನ್ನು ಸೋಲಿಸುತ್ತದೆ ಎಂದು ಅದು ವಿವರಿಸಿದೆ.

ಅಪ್ರಾಪ್ತ ಆರೋಪಿಯು ಮದ್ಯ, ಧೂಮಪಾನ ಹಾಗೂ ಮಾದಕ ದ್ರವ್ಯ ಬಳಸುತ್ತಿದ್ದರು ಎಂಬುದನ್ನೂ ಗಮನಿಸಿದ ನ್ಯಾಯಾಲಯ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಇವರು ತಮ್ಮ ಅಪರಾಧಕ್ಕಾಗಿ ಜಾಮೀನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ತೀರ್ಪು ನೀಡಿದೆ.

Kannada Bar & Bench
kannada.barandbench.com