ಎಲ್ಲಾ ಧರ್ಮಗಳ ಧಾರ್ಮಿಕ ಆಚರಣೆಗಳ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ನ್ಯಾ. ರೋಹಿಂಟನ್ ನಾರಿಮನ್ ಕರೆ

ಧ್ವನಿವರ್ಧಕಗಳು ಮತ್ತು ಗಂಟೆ ಬಾರಿಸುವ ಧಾರ್ಮಿಕ ಆಚರಣೆಗಳು ನಾಗರಿಕರ ಆರೋಗ್ಯ ಮತ್ತು ಶಾಂತಿಯುತವಾದ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತಿದ್ದು, ಎಲ್ಲಾ ಧರ್ಮಗಳಲ್ಲೂ ಇವುಗಳ ಬಳಕೆ ತಡೆಯಬೇಕೆಂದು ಅವರು ಹೇಳಿದರು.
Justice Rohinton Nariman
Justice Rohinton Nariman
Published on

ಧಾರ್ಮಿಕ ಉದ್ದೇಶಗಳಿಗಾಗಿ ಧ್ವನಿವರ್ಧಕಗಳನ್ನು ಬಳಸುವುದನ್ನು ದೇಶಾದ್ಯಂತ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಇತ್ತೀಚೆಗೆ ಕರೆ ನೀಡಿದ್ದು ಅಂತಹ ಆಚರಣೆಗಳು ಸಾರ್ವಜನಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದ್ದಾರೆ.

ಧ್ವನಿವರ್ಧಕಗಳು ಮತ್ತು ಗಂಟೆ ಬಾರಿಸುವ ಧಾರ್ಮಿಕ ಆಚರಣೆಗಳು ನಾಗರಿಕರ ಆರೋಗ್ಯ ಮತ್ತು ಶಾಂತಿಯುತವಾಗಿ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತಿದ್ದು, ಪಕ್ಷಪಾತದ ಆರೋಪ ಇಲ್ಲದಂತಾಗಲು ಎಲ್ಲಾ ಧರ್ಮಗಳಲ್ಲೂ ಇವುಗಳ ಬಳಕೆ ತಡೆಯಬೇಕು ಎಂದು ಅವರು ಹೇಳಿದರು.

Also Read
ಗೌರಿ ಗಣೇಶ, ಈದ್‌ ಮಿಲಾದ್‌ ಮೆರವಣಿಗೆ ವೇಳೆ ಡಿಜೆ, ಧ್ವನಿವರ್ಧಕ ನಿಷೇಧ: ಪೊಲೀಸ್‌ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್‌

ವಕ್ಕಂ ಮೌಲವಿ ಪ್ರತಿಷ್ಠಾನ ಟ್ರಸ್ಟ್‌ನ ಸಂಸ್ಥಾಪಕರಾದ ಕೆ ಎಂ ಬಶೀರ್ ಅವರ ಸ್ಮರಣಾರ್ಥ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಸೆಪ್ಟೆಂಬರ್ 1ರಂದು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, "ಜಾತ್ಯತೀತ ದೇಶದಲ್ಲಿ ಭ್ರಾತೃತ್ವ: ಸಾಂಸ್ಕೃತಿಕ ಹಕ್ಕುಗಳು ಮತ್ತು ಕರ್ತವ್ಯಗಳ ರಕ್ಷಣೆ" ಎಂಬ ವಿಷಯವಾಗಿ ಅವರು ಮಾತನಾಡಿದರು.

ನ್ಯಾ. ರೋಹಿಂಟನ್ ಭಾಷಣದ ಪ್ರಮುಖಾಂಶಗಳು

  • ಧ್ವನಿವರ್ಧಕಗಳು ಮತ್ತು ಗಂಟೆ ಬಾರಿಸುವ ಧಾರ್ಮಿಕ ಆಚರಣೆಗಳು ನಾಗರಿಕರ ಆರೋಗ್ಯ ಮತ್ತು ಶಾಂತಿಯುತವಾಗಿ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತಿವೆ.

  • ಪ್ರತಿಯೊಂದು ಧರ್ಮವೂ ಶಬ್ದವನ್ನು ಅತಿ ಹೆಚ್ಚು ಬಳಸುತ್ತಿದ್ದು ದೇವರೇ ಕಿವುಡಾಗುವಂತೆ ಮಾಡುತ್ತಿವೆ.

  • ಮಂದಿರವೇ ಇರಲಿ ಮಸೀದಿಯೇ ಇರಲಿ ಧ್ವನಿವರ್ಧಕಗಳ ಸಂಪೂರ್ಣ ನಿಷೇಧವನ್ನು ಸರ್ಕಾರ ಸಮಾನಾಗಿ ಜಾರಿಗೆ ತರಬೇಕು.

  • ಸಭಾಂಗಣಗಳಲ್ಲಿ ಒಳಗೆ ಧ್ವನಿವರ್ಧಕಗಳ ಬಳಕೆ ಇರಲಿ, ಆದರೆ ಹೊರಗೆ ಬೇಡ. ಅದು ತೊಂದರೆ ಉಂಟು ಮಾಡುತ್ತದೆ.

  • ಸಂವಿಧಾನದ 25ನೇ ವಿಧಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮ ಪ್ರಚಾರ ಮಾಡುವ, ಪಾಲಿಸುವ ಆಚರಿಸುವ ಹಕ್ಕನ್ನು ನೀಡಿದೆಯಾದರೂ ಆ ಹಕ್ಕು ಸಾರ್ವಜನಿಕ ಶಾಂತಿ, ನೈತಿಕತೆ ಮತ್ತು ಆರೋಗ್ಯದ ವ್ಯಾಪ್ತಿಯೊಳಗೆ ಬರುತ್ತದೆ.

  • ಆರೋಗ್ಯಕ್ಕೆ ಹಾನಿ, ಸಾಮಾಜಿಕ ಅಶಾಂತಿ ಉಂಟಾದರೆ ಅಂತಹ ಧಾರ್ಮಿಕ ಆಚರಣೆಯನ್ನು ಪ್ರಭುತ್ವ ನಿಯಂತ್ರಿಸಬಹುದು ಇಲ್ಲವೇ ನಿಷೇಧಿಸಬಹುದು.

  • ಸಂವಿಧಾನದ ಪ್ರಸ್ತಾವನೆ ಭಾರತದ ಜನರಾದ ನಾವು ಎಂದು ಹೇಳುತ್ತದೆ. ಅಂದರೆ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂಬ ಭೇದವಿಲ್ಲದೆ ನಾವೆಲ್ಲರೂ ಭಾರತೀಯರು ಎಂಬುದನ್ನು ಎಂದಿಗೂ ಮರೆಯಬಾರದು.

  • ಯಾವುದೇ ಪ್ರಭುತ್ವಕ್ಕೆ ಧರ್ಮ ಇರುವುದಿಲ್ಲ, ಅದು ಭೇದಭಾವ ಮಾಡುವುದಿಲ್ಲ ಪ್ರತಿಯೊಬ್ಬರಿಗೂ ಅದು ಸಮಾನ ಧಾರ್ಮಿಕ ಹಕ್ಕು ಕಲ್ಪಿಸುತ್ತದೆ.

Kannada Bar & Bench
kannada.barandbench.com