ಉಚಿತ ಗ್ಯಾರಂಟಿಗಳಿಗೆ ನಿರ್ಬಂಧ ವಿಧಿಸಲು ಕೋರಿಕೆ: ಅರ್ಜಿ ವಿಚಾರಣೆ 3 ತಿಂಗಳು ಮುಂದೂಡಿದ ಹೈಕೋರ್ಟ್‌

ಪ್ರಕರಣವು ಸುಪ್ರೀಂ ಕೋರ್ಟ್‌ ಮುಂದಿದೆ. ನಾವು ಈಗ ಪ್ರತಿವಾದಿಗಳಿಗೆ ನೋಟಿಸ್‌ ಸಹ ಜಾರಿ ಮಾಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಏನಾಗುತ್ತದೋ ನೋಡೋಣ ಎಂದು ವಿಚಾರಣೆ ಮುಂದೂಡಿದ ನ್ಯಾಯಾಲಯ.
High Court of Karnataka
High Court of Karnataka

ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದ್ದು ಅದನ್ನು ನಿರ್ಬಂಧಿಸಲು ಚುನಾವಣಾ ಆಯೋಗಕ್ಕೆ ಸೂಕ್ತ ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮೂರು ತಿಂಗಳ ಕಾಲ ಮುಂದೂಡಿದೆ.

ಚುನಾವಣೆಯ ವೇಳೆ ರಾಜಕೀಯ ಪಕ್ಷಗಳ ಮತದಾರರಿಗೆ ನೀಡುತ್ತಿರುವ ಉಚಿತ ಉಡುಗೊರೆಗಳ ಪ್ರಕರಣವು (ಫ್ರೀಬೀಸ್‌) ಸುಪ್ರೀಂ ಕೋರ್ಟ್‌ ಪರಿಗಣನೆಯಲ್ಲಿದೆ ಎಂದಿರುವ ಕರ್ನಾಟಕ ಹೈಕೋರ್ಟ್‌, ಅರ್ಜಿಯ ವಿಚಾರಣೆಯನ್ನು ಹನ್ನೆರಡು ವಾರಗಳ ಕಾಲ ಮುಂದೂಡಿತು.

ಬೆಂಗಳೂರಿನ ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಮತ್ತಿತರರು ಚುನಾವಣೆಯ ವೇಳೆ ರಾಜಕೀಯ ಪಕ್ಷಗಳ ಮತದಾರರಿಗೆ ನೀಡುತ್ತಿರುವ ಉಚಿತ ಗ್ಯಾರಂಟಿ ಆಮಿಷಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಜೆ ವರಾಳೆ ಅವರು “ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮದೇ ಆದ ಅಭಿಪ್ರಾಯ ಮತ್ತು ಮಿತಿ ಇರಬಹುದು. ಆದರೆ, ಪ್ರಕರಣವು ಸುಪ್ರೀಂ ಕೋರ್ಟ್‌ ಮುಂದಿದೆ. ನಾವು ಈಗ ಪ್ರತಿವಾದಿಗಳಿಗೆ ನೋಟಿಸ್‌ ಸಹ ಜಾರಿ ಮಾಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಏನಾಗುತ್ತದೋ ನೋಡೋಣ. ವಿಚಾರಣೆಯನ್ನು 12 ವಾರಗಳ ಕಾಲ ಮುಂದೂಡಲಾಗುವುದು” ಎಂದರು.

Also Read
ರಾಜಕೀಯ ಪಕ್ಷಗಳಿಂದ ಉಚಿತ ಗ್ಯಾರಂಟಿಗಳಿಗೆ ನಿರ್ಬಂಧ: ನಿವೃತ್ತ ಯೋಧರಿಂದ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಜನರ ತೆರಿಗೆ ಹಣದಲ್ಲಿ ಅಧಿಕಾರ ಲಾಲಸೆಗೆ ಮತದಾರರಿಗೆ ಆಮಿಷವೊಡ್ಡಿ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೇಶದ ಅಭಿವೃದ್ಧಿಗೆ ಬೊಕ್ಕಸದ ಹಣ ಬಳಸುವ ಬದಲು ಆಮಿಷಕ್ಕೆ ಬಳಕೆ ಮಾಡಲಾಗುತ್ತಿದೆ. ಮತದಾರರಿಗೆ ಪ್ರಲೋಭನೆ ಒಡ್ಡಿ ಮತ ಕೇಳುವುದು ಸಂವಿಧಾನಬಾಹಿರ ಹಾಗೂ ಜನಪ್ರತಿನಿಧಿಗಳ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗಸೂಚಿ ರೂಪಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com