[ಬೆಂಗಳೂರು ಗಲಭೆ ಪ್ರಕರಣ] ಎಸ್‌ಡಿಪಿಐ ಮುಖಂಡ ಮೊಹಮ್ಮದ್ ಶರೀಫ್‌ ಜಾಮೀನು ಮನವಿ ವಜಾ ಮಾಡಿದ ಹೈಕೋರ್ಟ್‌

ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಸ್ ರಾಚಯ್ಯ ಅವರಿದ್ದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ.
Bangalore Riots 2020
Bangalore Riots 2020
Published on

ಬೆಂಗಳೂರಿನ ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಗಲಭೆ ಪ್ರಕರಣದ ಆರೋಪಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ಬೆಂಗಳೂರು ಘಟಕದ ಮುಖ್ಯಸ್ಥ ಮೊಹಮ್ಮದ್ ಶರೀಫ್‌ ಸಲ್ಲಿಸಿದ್ದ ಜಾಮೀನು ಮನವಿಯನ್ನು ಕರ್ನಾಟಕ ಹೈಕೋಟ್ ಈಚೆಗೆ ವಜಾ ಮಾಡಿದೆ.

ಜಾಮೀನು ತಿರಸ್ಕರಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ 25ನೇ ಆರೋಪಿಯಾಗಿರುವ ಮೊಹಮ್ಮದ್ ಶರೀಫ್‌ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಸ್ ರಾಚಯ್ಯ ಅವರಿದ್ದ ಪೀಠ, ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಆರೋಪಿ ಮೊಹಮ್ಮದ್ ಶರೀಫ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿ ಭಯೋತ್ಪಾದನಾ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು, ಗಲಭೆ ಪ್ರಕರಣದ ಇತರ ಆರೋಪಿಗಳ ಜತೆಗೂಡಿ ಅಪರಾಧಿಕ ಕೃತ್ಯಗಳಿಗೆ ಪಿತೂರಿ ನಡೆಸಿದ್ದಾನೆ. ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‌ಡಿಪಿಐ ಸೇರಿ ಇತರ ಆರೋಪಿಗಳಿಗೆ ಗಲಭೆ ಸೃಷ್ಟಿಸಲು ಸಹಕಾರ ನೀಡಿದ್ದಾನೆ. ಪೊಲೀಸ್ ಠಾಣೆಗಳ ಮೇಲೆ ನಡೆದ ದಾಳಿ ಹಾಗೂ ವಾಹನ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಎಸ್‌ಡಿಪಿಐ ಸದಸ್ಯರನ್ನು ಕರೆತಂದಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಆರೋಪಪಟ್ಟಿ ಸೇರಿ ಪ್ರಕರಣದ ಎಲ್ಲ ದಾಖಲೆಗಳನ್ನು ಗಮನಿಸಿದರೆ ಆರೋಪಿಯು ಮೇಲ್ನೋಟಕ್ಕೆ ಜಾಮೀನು ಪಡೆಯಲು ಅರ್ಹನಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಮನವಿ ವಜಾ ಮಾಡಿದೆ.

Also Read
[ಬೆಂಗಳೂರು ಗಲಭೆ] ಕೆ ಜಿ ಹಳ್ಳಿ ವಾರ್ಡ್‌ ಎಸ್‌ಡಿಪಿಐ ಅಧ್ಯಕ್ಷ ಇಮ್ರಾನ್‌ ಅಹ್ಮದ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್‌ ಶಾಸಕ ಅಖಂಡ ಶ್ರಿನಿವಾಸ್ ಸಂಬಂಧಿ ಪಿ ನವೀನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಒಂದು ಕೋಮಿಗೆ ಸೇರಿದ ಕೆಲವರು 2020ರ ಆಗಸ್ಟ್‌ 11ರ ರಾತ್ರಿ 11ರ ವೇಳೆ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಹಿಂಸಾಚಾರಕ್ಕೆ ಕಾರಣರಾಗಿದ್ದರು. ಈ ಪ್ರಕರಣದಲ್ಲಿ 25ನೇ ಆರೋಪಿಯಾಗಿರುವ ಮೊಹಮ್ಮದ್ ಶರೀಫ್‌ನನ್ನು ಎನ್‌ಐಎ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2021ರ ಆಗಸ್ಟ್‌ 27ರಂದು ಎನ್‌ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಶರೀಫ್‌ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು ವಕೀಲ ಮೊಹಮ್ಮದ್‌ ತಾಹೀರ್‌ ವಾದಿಸಿದ್ದರು. ಎನ್‌ಐ ಪರವಾಗಿ ವಕೀಲ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

Attachment
PDF
Mohamed Shariff Versus NIA.pdf
Preview
Kannada Bar & Bench
kannada.barandbench.com