

ಸದ್ಯ ಬೆಂಗಳೂರು ಟರ್ಫ್ ಕ್ಲಬ್ ಇರುವ ಸ್ಥಳವನ್ನು ಹೊಸದಾಗಿ ಹೈಕೋರ್ಟ್ ಕಟ್ಟಡ ನಿರ್ಮಿಸಲು ಹಂಚಿಕೆ ಮಾಡುವ ಸಂಬಂಧ ಶೀಘ್ರದಲ್ಲೇ ನಿರ್ಣಯ ಹೊರಡಿಸಲಾಗುವುದು ಎಂದು ಸೋಮವಾರ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಆಧುನಿಕ ಹೈಕೋರ್ಟ್ ಕಟ್ಟಡ ನಿರ್ಮಿಸಲು 30 ಎಕರೆ ಜಮೀನು ಹಂಚಿಕೆ ಮಾಡಬೇಕು ಎಂದು ಶರಣ್ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ನಡೆಸಿತು.
ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಟರ್ಫ್ ಕ್ಲಬ್ ಜಾಗವನ್ನು ಹಂಚಿಕೆ ಮಾಡುವ ಸಂಬಂಧ ನಿರ್ಣಯ ಹೊಡಿಸಲಾಗುವುದು ಎಂದರು. ಇದನ್ನು ಆಲಿಸಿದ ಪೀಠವು ಸಂಬಂಧಿತ ದಾಖಲೆಗಳನ್ನು ಪೀಠದ ಮುಂದೆ ಇಡಲು ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು. ಅಲ್ಲದೇ, ಆಗಸ್ಟ್ 28ಕ್ಕೆ ವಿಚಾರಣೆ ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ಪೀಠವು ಮುಂದಿನ 30 ರಿಂದ 50 ವರ್ಷಗಳ ನ್ಯಾಯಾಂಗ ಅಗತ್ಯತೆಗಳನ್ನು ಪೂರೈಸುವಂತೆ ಆಧುನಿಕ ಹೈಕೋರ್ಟ್ ಕಟ್ಟಡ ಇರಬೇಕು ಎಂದಿತ್ತು.
ಕಳೆದ ಫೆಬ್ರವರಿಯಲ್ಲಿ ರಾಜ್ಯ ಸಚಿವ ಸಂಪುಟವು ತುಮಕೂರಿನ ಸಮೀಪ 110 ಎಕರೆ 20 ಗುಂಟೆ ಹಂಚಿಕೆ ಮಾಡುವ ಸಂಬಂಧ ನಿರ್ಧಾರ ಮಾಡಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಸರ್ಕಾರ ಪ್ರತಿಕ್ರಿಯೆಯನ್ನು ಹೈಕೋರ್ಟ್ ಬಯಸಿದೆ.
ಕಳೆದ ವರ್ಷದ ಅಕ್ಟೋಬರ್ 26ರಂದು ಅಂದಿನ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೈಕೋರ್ಟ್ ಅನ್ನು ಮತ್ತಷ್ಟು ವಿಶಾಲ ಜಾಗಕ್ಕೆ ಸ್ಥಳಾಂತರಿಸುವ ವಿಚಾರ ಪ್ರಸ್ತಾಪಿಸಿದ್ದರು.