ಬೆಂಗಳೂರು ಟರ್ಫ್‌ ಕ್ಲಬ್‌ ನವೀಕರಣ ಮತ್ತು ಉನ್ನತೀಕರಣದ ಮೇಲೆ ನಿಗಾ ಇಡಲು ಇನ್‌ಸ್ಪೆಕ್ಟರ್‌ಗೆ ಅನುಮತಿ; ಮನವಿ ಇತ್ಯರ್ಥ

ಕುದುರೆ ಲಾಯ ನವೀಕರಣ ಮತ್ತು ಉನ್ನತೀಕರಣ ಕಾರ್ಯ ನಡೆದಿದ್ದು, ಅದು ಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕಿದೆ. ಕುದುರೆ ಶಸ್ತ್ರ ಚಿಕಿತ್ಸಾ ಕೇಂದ್ರದ ನಿರ್ಮಾಣ ಕೆಲಸ ನಡೆಯುತ್ತಿದ್ದು ಅದನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು ಎಂದ ಬಿಟಿಸಿ ವಕೀಲರು.
BTC and Karnataka HC
BTC and Karnataka HC
Published on

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕುದುರೆ ಲಾಯ, ಛಾವಣಿ, ಕುದುರೆಗಳಿಗೆ ಶಸ್ತ್ರಚಿಕಿತ್ಸೆ ಕೊಠಡಿ ಮತ್ತು ಮುಖ್ಯ ಪಶು ವೈದ್ಯರ ನೇಮಕಾತಿ ಸೇರಿದಂತೆ ಆಗಾಗ್ಗೆ ನ್ಯಾಯಾಲಯ ನೀಡಿದ ಸಲಹೆ-ಸೂಚನೆ ಹಾಗೂ ನಿರ್ದೇಶನಗಳನ್ನು ಗಣನೀಯ ಪ್ರಮಾಣದಲ್ಲಿ ಪಾಲಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಹೇಳಿದ್ದು, ಈ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ವಿಲೇವಾರಿ ಮಾಡಿತು.

ಸರ್ಕಾರೇತರ ಸಂಸ್ಥೆ ಕಾಂಪ್ಯಾಷನ್‌ ಅನ್‌ಲಿಮಿಟೆಡ್‌ ಪ್ಲಸ್‌ ಆಕ್ಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲುಬಿಐ) ನೇಮಿಸಿರುವ ಇನ್‌ಸ್ಪೆಕ್ಟರ್‌ ಅಗತ್ಯಬಿದ್ದಾಗ ಬೆಂಗಳೂರು ಟರ್ಫ್‌ ಕ್ಲಬ್‌ಗೆ ಭೇಟಿ ನೀಡಿ ಅಲ್ಲಿ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬುದು ಕಂಡುಬಂದರೆ ಅರ್ಜಿದಾರರು ಪೀಠವನ್ನು ಸಂಪರ್ಕಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಸಕ್ತ ವರ್ಷದ ಜನವರಿ 3ರ ಸೂಚನೆಯಂತೆ ಎಡಬ್ಲುಬಿಐ ನೇಮಿಸಿದ್ದ ಇನ್‌ಸ್ಪೆಕ್ಟರ್‌ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕಲ್ಪಿಸಲಾಗಿರುವ ಸೌಲಭ್ಯ ಮತ್ತು ಅಭಿವೃದ್ಧಿಗಳನ್ನು ಪರಿಶೀಲಿಸಿ ಜನವರಿ 19ರಂದು ವರದಿ ಸಲ್ಲಿಸಿದ್ದಾರೆ. ಇಲ್ಲಿ ಅರ್ಜಿದಾರರು ಎತ್ತಿದ್ದ ಹಲವು ಆಕ್ಷೇಪಗಳನ್ನು ಪರಿಹರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಸದರಿ ಮನವಿಯನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ.

Also Read
ಟರ್ಫ್ ಕ್ಲಬ್‌ ಸುಧಾರಣೆ: 800 ಕುದುರೆ ಲಾಯ ನಿರ್ಮಾಣಕ್ಕೆ ಒಂದೂವರೆ ವರ್ಷ ಬೇಕೆಂದು ಹೈಕೋರ್ಟ್‌ಗೆ ತಿಳಿಸಿದ ಬಿಟಿಸಿ

ಪ್ರತಿವಾದಿ ಬೆಂಗಳೂರು ಟರ್ಫ್‌ ಕ್ಲಬ್‌ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು ಕುದುರೆ ಲಾಯ ನವೀಕರಣ ಮತ್ತು ಉನ್ನತೀಕರಣ ಕಾರ್ಯ ನಡೆದಿದ್ದು, ಅದು ಪೂರ್ಣಗೊಳ್ಳಲು ಒಂದೂವರೆ ವರ್ಷ ಕಾಲಾವಕಾಶಬೇಕಿದೆ. ಕುದುರೆ ಶಸ್ತ್ರ ಚಿಕಿತ್ಸಾ ಕೇಂದ್ರದ ನಿರ್ಮಾಣ ಕೆಲಸ ನಡೆಯುತ್ತಿದ್ದು ಅದನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು. ಬಿಟಿಸಿಯ ದೃಷ್ಟಿಯಿಂದ ಹಲವಾರು ಉನ್ನತೀಕರಣ ಕೆಲಸಗಳು ನಡೆಯುತ್ತಿದ್ದು, ಎಲ್ಲವನ್ನೂ ತಡ ಮಾಡದೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದ್ದು, ಮನವಿ ಇತ್ಯರ್ಥಪಡಿಸಿದೆ.

Kannada Bar & Bench
kannada.barandbench.com