

ಪರಿಶಿಷ್ಟ ಪಂಗಡವಾದ ಬಂಜಾರ ಸಮುದಾಯ ಗಣನೀಯವಾಗಿ ಹಿಂದೂ ಪ್ರಭಾವಕ್ಕೊಳಗಾಗಿದ್ದು ಹಿಂದೂ ಆಚರಣೆಗಳೊಂದಿಗೆ ನಡೆಸುವ ಬಂಜಾರ ವಿವಾಹಗಳು ಹಿಂದೂ ವಿವಾಹ ಕಾಯಿದೆ ವ್ಯಾಪ್ತಿಗೆ ಬರುತ್ತವೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ದಂಪತಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುವುದರಿಂದ ಕಾಯಿದೆ ಅಡಿಯಲ್ಲಿ ವಿಚ್ಛೇದನ ಅರ್ಜಿ ನಿರ್ವಹಿಸುವಂತಿಲ್ಲ ಎಂದು ಮಹಿಳೆಯ ಪತಿ ಸಲ್ಲಿಸಿದ್ದ ಆಕ್ಷೇಪಣೆಯನ್ನು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿತು.
ಹೀಗಾಗಿ, ಹಿಂದೂ ವಿವಾಹ ಕಾಯಿದೆಯಡಿ ಬಂಜಾರ (ಲಂಬಾಣಿ) ಮಹಿಳೆ ಸಲ್ಲಿಸಿದ ವಿಚ್ಛೇದನ ಅರ್ಜಿ ವಿಚಾರಣಾಯೋಗ್ಯವಾಗಿದೆ ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಅದು ಎತ್ತಿಹಿಡಿದಿದೆ.
ಬಂಜಾರ ಸಮುದಾಯವು ಐತಿಹಾಸಿಕವಾಗಿ ಪರಿಶಿಷ್ಟ ಪಂಗಡವಾಗಿದ್ದರೂ, ಅದು ಕ್ರಮೇಣ ಹಿಂದೂ ಪ್ರಭಾವಿತ ಪ್ರಕ್ರಿಯೆಗೆ ಒಳಗಾಗಿದೆ ಎಂದು ಮಹಿಳೆ ಉಲ್ಲೇಖಿಸಿದ್ದರು. ಇದಕ್ಕಾಗಿ ತಜ್ಞ ಸಾಹಿತ್ಯ ಮತ್ತು ಜನಾಂಗೀಯ ಅಧ್ಯಯನಗಳನ್ನು ಅವರು ನ್ಯಾಯಾಲಯಕ್ಕೆ ಒದಗಿಸಿದ್ದರು. ಇದನ್ನು ಅವಲಂಬಿಸಿದ ನ್ಯಾಯಾಲಯ ಸಮುದಾಯದ ವಿವಾಹ ಸಮಾರಂಭಗಳು ಹಿಂದೂ ಆಚರಣೆಗಳ ಅಂಶಗಳನ್ನು ಒಳಗೊಂಡಿದ್ದು ಪ್ರಸ್ತುತ ವ್ಯವಸ್ಥೆ ಲಂಬಾಣಿ ಮತ್ತು ಹಿಂದೂ ವ್ಯವಸ್ಥೆಗಳ ಮಿಶ್ರಣವಾಗಿದೆ ಎಂದು ಸ್ಪಷ್ಟಪಡಿಸಬೇಕಿದೆ ಎಂಬುದಾಗಿ ಹೇಳಿತು.
ಪವಿತ್ರ ಅಗ್ನಿಸಾಕ್ಷಿಯಾಗಿ ನಡೆಯುವ ವಿಧಿ ವಿಧಾನ, ಮಂಗಳಸೂತ್ರ ಧಾರಣೆ, ಬಿಚ್ಚಿ (ಕಾಲುಂಗುರ) ಧಾರಣೆ, ಸಪ್ತಪದಿ ತುಳಿಯುವಂತಹ ಹಿಂದೂ ಆಚರಣೆಗಳು ಬಂಜಾರ ಆಚರಣೆಗಳಲ್ಲಿಯೂ ಕಂಡು ಬಂದಿರುವುದರಿಂದ ಬಂಜಾರ ಸಮುದಾಯದ ಮದುವೆ ಹಿಂದೂ ಸಂಸ್ಕಾರದ ಲಕ್ಷಣಗಳನ್ನು ಒಳಗೊಂಡಿದೆ. ಹೀಗಾಗಿ ಪಕ್ಷಕಾರರು ಹಿಂದೂಗಳಲ್ಲ ಹಿಂದೂ ಪ್ರಭಾವ ಇಲ್ಲ ಎಂಬ ಪತಿಯ ವಾದ ಒಪ್ಪುವಂಥದ್ದಲ್ಲ. ಲಂಬಾಡಾ ಸಮುದಾಯದ ಪದ್ಧತಿಗಳ ಪ್ರಕಾರ ವಿವಾಹ ನಡೆಸಲಾಗಿದೆ ಎಂದು ಮೇಲ್ಮನವಿದಾರರು ಅಫಿಡವಿಟ್‌ನಲ್ಲಿ ಅಥವಾ ಪಾಟಿ ಸವಾಲಿನಲ್ಲೆಲ್ಲೂ ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಕಾಯಿದೆಯ ಸೆಕ್ಷನ್ 7, ಮದುವೆಯ ಮಾನ್ಯತೆಗಾಗಿ ನಿರ್ದಿಷ್ಟ ವಿಧಿ ಇರಬೇಕೆಂದು ಹೇಳುವುದಿಲ್ಲ ಬದಲಿಗೆ ಹಿಂದೂ ಸಮುದಾಯಗಳ ವೈವಿಧ್ಯಮಯ ಸಂಪ್ರದಾಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸುತ್ತದೆ ಎಂದು ಅದು ತಿಳಿಸಿದೆ.
ಸೆಕ್ಷನ್ 7ರ ಪ್ರಕಾರ, ಹಿಂದೂ ವಿವಾಹದ ಅಗತ್ಯತೆಗಳೆಂದರೆ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಸಮಾರಂಭಗಳ ನಿರ್ವಹಣೆ, ವೈವಾಹಿಕ ಒಕ್ಕೂಟಕ್ಕೆ ಪ್ರವೇಶಿಸುವ ಉದ್ದೇಶ, ಅನ್ವಯವಾಗುವಲ್ಲಿ ಸಪ್ತಪದಿ, ಮತ್ತು ವಿವಾಹ ಸಮಾರಂಭದ ಪುರಾವೆಗಳಾಗಿವೆ. ಅಂತೆಯೇ ಬಂಜಾರ ಸಮುದಾಯವು ಹಿಂದೂ ವಿವಾಹ ಸಮಾರಂಭದ ಅಗತ್ಯ ಅಂಶಗಳನ್ನು ಸಂಯೋಜಿಸಿಕೊಂಡಿದೆ ಎಂದು ಅದು ಸ್ಪಷ್ಟಪಡಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಸಲ್ಲಿಸಲಾದ ಸಾಕ್ಷಿಗಳನ್ನು ಪರಿಶೀಲಿಸಿದಾಗ ಮದುವೆ ಹಿಂದೂ ವಿಧಿವಿಧಾನಗಳೊಂದಿಗೆ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಮದುವೆ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದ ನ್ಯಾಯಾಲಯ ಪತಿಯ ಮನವಿಯನ್ನು ತಿರಸ್ಕರಿಸಿದೆ. ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ. ಮದುವೆ ಹಿಂದೂ ಆಚರಣೆಗಳ ಪ್ರಕಾರ ನಡೆದಿದ್ದು ಮಾನ್ಯವಾಗಿದೆ. ಹಾಗಾಗಿ ಕಾಯಿದೆ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.