ಬ್ಯಾಂಕ್‌ ವಂಚನೆ ಪ್ರಕರಣ: ದೇಶ ತೊರೆಯದಂತೆ ಅನಿಲ್‌ ಅಂಬಾನಿಗೆ ಸುಪ್ರೀಂ ಆದೇಶ

ಬ್ಯಾಂಕ್‌ ವಂಚನೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಬ್ಯಾಂಕ್‌ ಅಧಿಕಾರಿಗಳು ಸಂಚು ರೂಪಿಸಿದ್ದಲ್ಲಿ ಅದನ್ನು ತನಿಖೆ ಮಾಡುವಂತೆ ಸಿಬಿಐಗೆ ಇಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿತು.
Anil Ambani and Supreme Court
Anil Ambani and Supreme Court
Published on

ರಿಲಯನ್ಸ್ ಕಮ್ಯುನಿಕೇಷನ್ಸ್‌ (ಆರ್‌ಕಾಂ), ಅದರ ಅಂಗಸಂಸ್ಥೆಗಳು ಹಾಗೂ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ಕೇಳಿ ಬಂದಿರುವ ಭಾರೀ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ  ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಸುಪ್ರೀಂ ಕೋರ್ಟ್‌ ಬುಧವಾರ ಆದೇಶಿಸಿದೆ [ಇಎಎಸ್‌ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

“ಇ ಡಿ, ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿ, ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವಂತೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರನ್ನು ಒಳಗೊಂಡ ಪೀಠ ತಿಳಿಸಿತು.

Also Read
ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವ ಸರ್ಕಾರದ ವಕೀಲರು ವಿಚಾರಣೆ ವೇಳೆ ಬಾಯಿ ಬಿಡಲ್ಲ: ಸಿಎಂ ಅಸಮಾಧಾನ

ಗಮನಾರ್ಹ ಅಂಶವೆಂದರೆ, ತನಿಖೆ ಪೂರ್ಣಗೊಳ್ಳುವ ಮೊದಲು ಅನಿಲ್ ಅಂಬಾನಿ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರು ದೇಶ ತೊರೆಯುವುದಿಲ್ಲ ಎಂಬುದಾಗಿ ಅವರ ವಕೀಲರು ನೀಡಿದ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ತನಿಖೆಗೆ ಯಾವುದೇ ಅಡ್ಡಿ ಉಂಟಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿತು.

“ಈ ನ್ಯಾಯಾಲಯದ ಅನುಮತಿಯಿಲ್ಲದೆ ಅವರು ದೇಶ ತೊರೆಯುವುದಿಲ್ಲ,” ಎಂದು ಅನಿಲ್ ಅಂಬಾನಿಯ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಇಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ “ರೋಹಟ್ಗಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಈ ಹಿಂದೆ ತಮ್ಮ ಕಕ್ಷಿದಾರರೊಬ್ಬರ ಪರವಾಗಿ ಇಂಥದ್ದೇ ಭರವಸೆ ನೀಡಿದ್ದರು. ಆದರೆ ಅವರ ಕಕ್ಷಿದಾರ ದೇಶ ತೊರದಿದ್ದರು” ಎಂದು ಆರೋಪಿಸಿದರು.

ಅದಕ್ಕೆ ಉತ್ತರಿಸಿದ ರೋಹಟ್ಗಿ, “ಆದರೆ ಅವರು ನಂತರ ಹಿಂದಿರುಗಿ ಸರ್ಕಾರಕ್ಕೆ ₹5000 ಕೋಟಿ ಪಾವತಿಸಿದ್ದಾರೆ,” ಎಂದು ಹೇಳಿದರು.

Also Read
ಎನ್‌ಕೌಂಟರ್‌ ಎಂದು ಬಿಂಬಿಸುವ ಪ್ರಕರಣಗಳ ಹೆಚ್ಚಳ: ಉ. ಪ್ರದೇಶ ಪೊಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಆಗ ಅರ್ಜಿದಾರ ಇಎಎಸ್‌ ಶರ್ಮಾ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌ ಅವರು “ಒಮ್ಮೆ ಅವರು ದೇಶದ ಹೊರಗೆ ಹೋದರೆ, ಇಂತಹ ಹೇಳಿಕೆಯ ಪ್ರಯೋಜನವೇನು?” ಎಂದು ಪ್ರಶ್ನಿಸಿದರು.

“ಹಾಗಾದರೆ ಯಾರ ಮೇಲೂ ನಂಬಿಕೆ ಇಡುವಂತೆಯೇ ಇಲ್ಲ. ಯಾವುದಕ್ಕೂ ಹೇಳಿಕೆ ದಾಖಲಿಸುವ ಅಗತ್ಯವೇ ಇರುವುದಿಲ್ಲ,” ಎಂದು ರೋಹಟ್ಗಿ ತಿರುಗೇಟು ನೀಡಿದರು.

ವಿಚಾರಣೆಯ ಕೊನೆಗೆ ನ್ಯಾಯಾಲಯ “ತನಿಖೆಗೆ ಅಡ್ಡಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಾಲಿಸಿಟರ್ ಜನರಲ್ ಭರವಸೆ ನೀಡಿದ್ದಾರೆ. ಹಾಗೆಯೇ, ನ್ಯಾಯಾಲಯದ ಅನುಮತಿಯಿಲ್ಲದೆ ತಮ್ಮ ಕಕ್ಷಿದಾರರು ದೇಶ ತೊರೆಯುವುದಿಲ್ಲ ಎಂದು ರೋಹಟ್ಗಿ ಭರವಸೆ ನೀಡಿದ್ದಾರೆ,” ಎಂಬ ವಿಚಾರವನ್ನು ದಾಖಲಿಸಿಕೊಂಡಿತು.

ಅನಿಲ್ ಧೀರೂಭಾಯಿ ಅಂಬಾನಿ ಕಂಪೆನಿ ಸಮೂಹವನ್ನು ಹಿರಿಯ ವಕೀಲ ಶ್ಯಾಮ್ ದಿವಾನ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com