ಕಿಶೋರ್ ಬಿಯಾನಿ ಪ್ರವರ್ತಕರಾಗಿರುವ ಫ್ಯೂಚರ್ ರಿಟೇಲ್ ಲಿಮಿಟೆಡ್ ವಿರುದ್ಧ ಕಾರ್ಪೊರೇಟ್ ದಿವಾಳಿ ಗೊತ್ತುವಳಿ ಪ್ರಕ್ರಿಯೆ (ಸಿಐಆರ್‌ಪಿ) ಕೋರಿ ಬ್ಯಾಂಕ್ ಆಫ್ ಇಂಡಿಯಾ, ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೊರೆ ಹೋಗಿದೆ.
ಅರ್ಜಿಯ ಕುರಿತು ಫ್ಯೂಚರ್ ರಿಟೇಲ್‌ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಪಿ ಎನ್ ದೇಶಮುಖ್ ಮತ್ತು ತಾಂತ್ರಿಕ ಸದಸ್ಯ ಎಸ್ ಬಿ ವೋಹ್ರಾ ಅವರನ್ನೊಳಗೊಂಡ ಪೀಠ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ಕಲ್ಪಿಸಿತು.
ಬ್ಯಾಂಕ್ ಮತ್ತು ಫ್ಯೂಚರ್ ನಡುವಿನ ಒಂದು ಬಾರಿಯ ಸಾಲ ಪುನರ್ರಚನಾ ಯೋಜನೆಯನ್ನು ಪಾಲಿಸಲು ಫ್ಯೂಚರ್ ವಿಫಲವಾಗಿದೆ. ಆ ಮೂಲಕ ಸಂಸ್ಥೆಯು ₹ 3,495 ಕೋಟಿಗಳಷ್ಟು ಸುಸ್ತಿದಾರನಾಗಿದೆ ಎಂದು ನಷ್ಡ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 7ರ ಅಡಿಯಲ್ಲಿ ವಕೀಲ ಪಲಾಶ್ ಅಗರ್ವಾಲ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
ರಜೆ ಸಮೀಪಿಸುತ್ತಿರುವ ಕಾರಣ ನ್ಯಾಯಮಂಡಳಿಗಳ ರಜೆಗೂ ಮುನ್ನ ಮತ್ತೊಂದು ವಿಚಾರಣೆಗೆ ಅವಕಾಶ ನೀಡಬೇಕು ಎಂದು ಬ್ಯಾಂಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿ ಕದಂ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಪೀಠ ವಿಚಾರಣೆಯನ್ನು ಮೇ 12ಕ್ಕೆ ನಿಗದಿಪಡಿಸಿತು.
ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು ಫ್ಯೂಚರ್ ರೀಟೇಲ್‌ನ 200 ಮಳಿಗೆಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಸಾಲದಾತರ ಒಕ್ಕೂಟವು ಬಾಕಿ ವಸೂಲಾತಿ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ತದನಂತರ ಬ್ಯಾಂಕ್ ಸಂಸ್ಥೆಯ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೆ ಮುಂದಾಗಿದೆ.
ರಿಲಯನ್ಸ್ ಸಮೂಹದ ಘಟಕಗಳೊಂದಿಗಿನ ಒಪ್ಪಂದದ ಸಂಯೋಜಿತ ಯೋಜನೆಗೆ ವಿರುದ್ಧವಾಗಿ 69% ಸಾಲಗಾರರು ಮತ ಚಲಾಯಿಸಿದ್ದು ಕೇವಲ 30% ಸಾಲದಾತರು ಈ ವ್ಯವಸ್ಥೆಯ ಪರವಾಗಿದ್ದಾರೆ ಎಂದು ಕಳೆದ ತಿಂಗಳು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ (ಬಿಎಸ್‌ಇ) ಸಲ್ಲಿಸಿದ ವರದಿಯಲ್ಲಿ ಫ್ಯೂಚರ್ ಗ್ರೂಪ್ ತಿಳಿಸಿದೆ.