ತೃತೀಯಲಿಂಗಿ, ಸಲಿಂಗಿಗಳಲ್ಲಿ ಎಚ್ಐವಿ, ಹೆಪಟೈಟಿಸ್ ಹೆಚ್ಚು ಇರುವುದರಿಂದ ರಕ್ತದಾನಕ್ಕೆ ನಿರ್ಬಂಧ: ಸುಪ್ರೀಂಗೆ ಕೇಂದ್ರ

ವಿಷಯ ತಜ್ಞರು ಈ ಎರಡು ವರ್ಗಗಳನ್ನು ರಕ್ತದಾನದಿಂದ ಹೊರಗಿಡಲು ಶಿಫಾರಸು ಮಾಡಿದ್ದು ಅನೇಕ ಐರೋಪ್ಯ ದೇಶಗಳಲ್ಲಿ, ಲೈಂಗಿಕವಾಗಿ ಸಕ್ರಿಯವಾಗಿರುವ ಬಹುತೇಕ ಪುರುಷ ಸಲಿಂಗಕಾಮಿ ವ್ಯಕ್ತಿಗಳನ್ನು ಇದೇ ರೀತಿ ಹೊರಗಿಡಲಾಗಿದೆ ಎಂದು ಸರ್ಕಾರ ಹೇಳಿದೆ.
Transgender persons
Transgender persons
Published on

ತೃತೀಯ ಲಿಂಗಿ ವ್ಯಕ್ತಿಗಳು ಮತ್ತು ಸಲಿಂಗ ಕಾಮಿ ಪುರುಷರನ್ನು (ಗೇ) ರಕ್ತದಾನದಿಂದ ಹೊರಗಿಟ್ಟಿರುವುದಕ್ಕೆ ಸಾಕಷ್ಟು ವೈಜ್ಞಾನಿಕ ಆಧಾರಗಳಿದ್ದು, ಅಧ್ಯಯನದ ಪ್ರಕಾರ ಅಂತಹವರಲ್ಲಿ ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ಅಥವಾ ಸಿ ಸೋಂಕು ಹರಡುವಿಕೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ತಂಗ್ಜಮ್ ಸಾಂತಾ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ವಿಷಯ ತಜ್ಞರು ಈ ಎರಡು ವರ್ಗಗಳನ್ನು ರಕ್ತದಾನದಿಂದ ಹೊರಗಿಡಲು ಶಿಫಾರಸು ಮಾಡಿದ್ದು ಅನೇಕ ಐರೋಪ್ಯ ದೇಶಗಳಲ್ಲಿ, ಲೈಂಗಿಕವಾಗಿ ಸಕ್ರಿಯವಾಗಿರುವ ಬಹುತೇಕ ಪುರುಷ ಸಲಿಂಗಕಾಮಿ ವ್ಯಕ್ತಿಗಳನ್ನು ಇದೇ ರೀತಿ ಹೊರಗಿಡಲಾಗಿದೆ ಎಂದು ಸರ್ಕಾರ ಹೇಳಿದೆ.

ತೃತೀಯಲಿಂಗಿ ವ್ಯಕ್ತಿಗಳು ಮತ್ತು ಸಲಿಂಗಕಾಮಿಗಳು ರಕ್ತದಾನ ಮಾಡುವುದನ್ನು ನಿಷೇಧಿಸಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ್ದ ರಕ್ತದಾನಿಗಳ ಮಾರ್ಗಸೂಚಿಯ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.

Also Read
ತೃತೀಯ ಲಿಂಗಿಗಳನ್ನು ಗೌರವಾನ್ವಿತವಾಗಿ ಸಂಬೋಧಿಸಲು ಪದ, ಅಭಿವ್ಯಕ್ತಿ ಪಟ್ಟಿ ಸಿದ್ಧಪಡಿಸಲು ಮದ್ರಾಸ್‌ ಹೈಕೋರ್ಟ್‌ ಆದೇಶ

ಕೇಂದ್ರ ಪ್ರತಿಪಾದಿಸಿರುವ ಅಂಶಗಳು

  • ಈ ವರ್ಗದ ಜನ ಎಚ್‌ಐವಿ ಹೆಪಟೈಟಿಸ್‌ ಬಿ ಸೋಂಕಿಗೆ ಹೆಚ್ಚು ತುತ್ತಾಗುವ ಅಪಾಯದಲ್ಲಿರುತ್ತಾರೆ ಎಂದು ಸಾಬೀತುಪಡಿಸುವಂತಹ ಗಣನೀಯ ಸಾಕ್ಷಿಗಳಿವೆ.

  •  ಇಂತಹ ಸಮಸ್ಯೆಗಳು ಕಾರ್ಯಾಂಗ ವ್ಯಾಪ್ತಿಗೆ ಬರಲಿದ್ದು ಇವುಗಳನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನೋಡಬೇಕೇ ವಿನಾ ಕೇವಲ ವೈಯಕ್ತಿಕ ಹಕ್ಕುಗಳ ದೃಷ್ಟಿಯಿಂದಲ್ಲ.  

  • ಪರಿಣಾಮಕಾರಿ ಮತ್ತು ಗುಣಮಟ್ಟದ ರಕ್ತ ಒದಗಿಸುವುದು ಸಾರ್ವಜನಿಕ ಆರೋಗ್ಯದ ಪ್ರಮುಖ ಜವಾಬ್ದಾರಿ.

  • ರಕ್ತದಾನ ಮಾಡುವ ವೈಯಕ್ತಿಕ ಹಕ್ಕಿಗಿಂತ ಸುರಕ್ಷಿತ ರಕ್ತ ಪಡೆಯುವ ಹಕ್ಕು ಮುಖ್ಯವಾದುದು.  

  • ದೇಶದ ರಕ್ತ ವರ್ಗಾವಣೆ ವ್ಯವಸ್ಥೆ ಕ್ರಿಯಾತ್ಮಕವಾಗಿರಲು, ದಾನಿ ಮತ್ತು ಸ್ವೀಕರಿಸುವವರಿಬ್ಬರೂ ವ್ಯವಸ್ಥೆಯ ಸುರಕ್ಷತೆಯಲ್ಲಿ ಸಂಪೂರ್ಣ ನಂಬಿಕೆ ಇಟ್ಟಿರಬೇಕು.

  • ಮಾರ್ಗಸೂಚಿಗಳನ್ನು ನಿರ್ಣಯಿಸುವಾಗ ಪ್ರಾಯೋಗಿಕ ವಾಸ್ತವಗಳ ಬಗ್ಗೆ ಗಮನ ಹರಿಸುವುದು ಅವಶ್ಯಕ.

Kannada Bar & Bench
kannada.barandbench.com