ಕೋರ್ಟ್‌ ಕಮಿಷನರ್ ವರದಿ ಪರಿಗಣನೆ: ಯರಗಂಬಳ್ಳಿಯಲ್ಲಿನ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್‌ ತಡೆ

ವಕೀಲರಾದ ಮಿಶಾ ಥಾಮಸ್ ಅವರನ್ನು ಕೋರ್ಟ್‌ ಕಮಿಷನರ್‌ ಆಗಿ ನೇಮಕ ಮಾಡಿ ಆಗಸ್ಟ್‌ 9ರಂದು ನ್ಯಾಯಾಲಯ ಆದೇಶಿಸಿತ್ತು. ಅಲ್ಲದೆ, ಕೋರ್ಟ್‌ ಕಮಿಷನರ್‌ ಸ್ಥಳ ಪರಿಶೀಲನೆ ನಡೆಸಿ 30 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.
High Court of Karnataka
High Court of Karnataka
Published on

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಎಂ. ಸಮೀವುಲ್ಲಾ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶ ಮಾಡಿದೆ.

ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಹೈಕೋರ್ಟ್‌ಗೆ ವರದಿ ಸಲ್ಲಿಸಿ, ಯರಗಂಬಳ್ಳಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ನೀರು ವಿತರಣಾ ಕಾಲುವೆ 60 ಮೀಟರ್ ದೂರಲ್ಲಿದೆ ಎಂದು ತಿಳಿಸಿದ್ದರು.

ಅದಕ್ಕೆ ಆಕ್ಷೇಪಿಸಿದ್ದ ಅರ್ಜಿದಾರ ಪರ ವಕೀಲರು, ನೀರು ವಿತರಣಾ ಕಾಲುವೆಯು ಗಣಿಗಾರಿಕೆಯ ಪ್ರದೇಶದಿಂದ ಕೇವಲ 20 ಮೀಟರ್ ದೂರದಲ್ಲಿದೆ. ಉಪ ನಿರ್ದೇಶಕರು ಸುಳ್ಳು ವರದಿ ಸಲ್ಲಿಸಿದ್ದಾರೆ. ಹಾಗಾಗಿ, ಸ್ಥಳ ಪರಿಶೀಲನೆ ನಡೆಸಲು ಕೋರ್ಟ್ ಕಮಿಷನರ್‌ ಅವರನ್ನು ನೇಮಕ ಮಾಡಬೇಕು ಎಂದು ಕೋರಿದರು.

ಅದನ್ನು ಪರಿಗಣಿಸಿದ ಹೈಕೋರ್ಟ್, ವಕೀಲರಾದ ಮಿಶಾ ಥಾಮಸ್ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ ನೇಮಕ ಮಾಡಿ ಆಗಸ್ಟ್‌ 9ರಂದು ಆದೇಶಿಸಿತ್ತು. ಅಲ್ಲದೆ, ನ್ಯಾಯಾಲಯದ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ 30 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

ಅದರಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದ ಮಿಶಾ ಥಾಮಸ್, ಸೋಮವಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದರು. ಪ್ರಕರಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ನೀರು ವಿತರಣಾ ಕಾಲುವೆಯು 20 ಮೀಟರ್ ಒಳಗಿದೆ ಎಂದು ವರದಿಯಲ್ಲಿ ತಿಳಿಸಿಲಾಗಿದೆ.

Also Read
ಬಳ್ಳಾರಿ, ಕಡಪ, ಅನಂತಪುರಕ್ಕೆ ಭೇಟಿ ನೀಡಲು ಅಕ್ರಮ ಗಣಿಗಾರಿಕೆ ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ಅನುಮತಿಸಿದ ಸುಪ್ರೀಂ

ಆ ವರದಿ ಪರಿಗಣಿಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಯರಗಂಬಳ್ಳಿ ಗ್ರಾಮದಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ತಡೆಯಾಜ್ಞೆ ಆದೇಶ ನೀಡಿ ವಿಚಾರಣೆ ಮುಂದೂಡಿತು. ಜತೆಗೆ, ನ್ಯಾಯಾಲಯದ ಆಯುಕ್ತರ ವರದಿಗೆ ಪ್ರತಿಕ್ರಿಯಿಸುವಂತೆ ಗಣಿಗಾರಿಕೆ ನಡೆಸುತ್ತಿರುವ ಕರಿಕಲ್ಲು ನಂಜಶೆಟ್ಟಿ ಅವರ ಪರ ವಕೀಲರಿಗೆ ನಿರ್ದೇಶಿಸಿತು.

ಯರಗಂಬಳ್ಳಿ ಗ್ರಾಮದ ಸರ್ವೇ ನಂಬರ್ 711/1, 711/2, 711/3ರ ಕೃಷಿ ಜಮೀನನ್ನು ನಂಜನಶೆಟ್ಟಿ ಅವರು ಖರೀದಿಸಿ, ಗ್ರಾನೈಟ್ಸ್ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೆ, ಆ ಪಕ್ಕದ ಸರ್ವೇ ನಂಬರ್ 710/1ರಲ್ಲಿನ ಸರ್ಕಾರಿ ಜಮೀನಿನಲ್ಲಿಯೂ ಅಕ್ರಮವಾಗಿ ಗಣಿಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ. ಅಲ್ಲಿಂದ ಕೇವಲ 20 ಮೀಟರ್ ದೂರದಲ್ಲಿ ನೀರು ವಿತರಣಾ ಕಾಲುವೆಯಿದೆ. ಕಲ್ಲು ಗಣಿಗಾರಿಕೆಗಾಗಿ ಸಮೀಪದ ಈದ್ಗಾ ಮೈದಾನದ ತಡೆಗೋಡೆಯನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆ. ಈ ಬಗ್ಗೆ 2016ರಿಂದಲೂ ಮನವಿ ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಅರ್ಜಿದಾರರ ಪರ ವಕೀಲ ರೆಹಮತ್‌ಉಲ್ಲಾ ಕೊತ್ವಾಲ್ ವಕಾಲತ್ತು ವಹಿಸಿದ್ದರು.

Kannada Bar & Bench
kannada.barandbench.com