ಬಿಬಿಎಂಪಿ ಆಯುಕ್ತ ಗುಪ್ತಾ ಅಫಿಡವಿಟ್‌ ಸಲ್ಲಿಕೆ ನಂತರ ಕರುಣೆ ತೋರಬೇಕೆ, ಬೇಡವೇ ಎಂದು ನಿರ್ಧಾರ: ಹೈಕೋರ್ಟ್‌ ಕೆಂಡಾಮಂಡಲ

“ನೂರು ತಪ್ಪುಗಳನ್ನು ಮಾಡಿದ್ದ ಶಿಶುಪಾಲನನ್ನು ಕೃಷ್ಣ ಕ್ಷಮಿಸಿದ್ದ. ನಾವು ನಿಮ್ಮನ್ನು ಕೃಷ್ಣ ಎಂದು ನಂಬಿ ಬಂದಿದ್ದೇವೆ. ನಿಮ್ಮ ರೂಪದಲ್ಲಿ ಮತ್ತೊಬ್ಬ ಕೃಷ್ಣ ಪೀಠದಲ್ಲಿದ್ದಾರೆ” ಎಂದು ಸಿಜೆ ಕುರಿತು ಹಿರಿಯ ವಕೀಲ ಹೊಳ್ಳ ಹೇಳಿದರು.
BBMP Commissioner Gauvrav Gupta and Karnataka HC

BBMP Commissioner Gauvrav Gupta and Karnataka HC

ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರ ನೆರವಿಗೆ ಯಾವುದೇ ನೀತಿ, ನಿಯಮ ಅಥವಾ ಕಾನೂನು ಈಗ ಬರುವುದಿಲ್ಲ. ತಮ್ಮ ನಡತೆಯ ಕುರಿತು ಹತ್ತು ದಿನಗಳ ಒಳಗೆ ಅವರು ಸಲ್ಲಿಸುವ ವೈಯಕ್ತಿಕ ಅಫಿಡವಿಟ್‌ ಪರಿಶೀಲಿಸಿದ ಬಳಿಕ ಅವರಿಗೆ ಕುರುಣೆ ತೋರಬೇಕೇ, ಬೇಡವೇ ಎಂಬುದುನ್ನು ನಿರ್ಧರಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಆಕ್ರೋಶದಿಂದ ಹೇಳಿದೆ.

ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಶನಿವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮೇಲಿನಂತೆ ಆದೇಶಿಸಿದೆ.

ಬೆಂಗಳೂರಿನ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದ ಘನತ್ಯಾಜ್ಯ ಸುರಿಯದಂತೆ ನ್ಯಾಯಾಲಯದ ಸ್ಪಷ್ಟ ನಿರ್ಬಂಧ ಆದೇಶ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ. ತ್ಯಾಜ್ಯ ಸುರಿಯುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬಿಬಿಎಂಪಿಗೆ ಅನುಮತಿಸಿರಲಿಲ್ಲ. ಅದಾಗ್ಯೂ, ತ್ಯಾಜ್ಯ ಸುರಿಯುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಗುಪ್ತಾ ಅವರ ವಿರುದ್ಧ ಏರುಧ್ವನಿಯಲ್ಲಿ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಬಿಬಿಎಂಪಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಹಿರಿಯ ವಕೀಲರಾದ ನೀವು ಇಂಥ ಜನರನ್ನು (ಆಯುಕ್ತ) ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ. ಹೀಗಾದಲ್ಲಿ ನಾವು ಹೇಳುವುದು ಏನೂ ಉಳಿದಿಲ್ಲ. ನ್ಯಾಯಾಲಯದ ಆದೇಶಕ್ಕೆ ಸಂಪೂರ್ಣವಾಗಿ ಆಯುಕ್ತರು ಅಗೌರವ ತೋರಿದ್ದಾರೆ. ಇದಕ್ಕಿಂತ ದೊಡ್ಡ ಅಗೌರವ ಇನ್ನೊಂದು ಇರಲಾಗದು. ನಿರ್ಬಂಧದ ಆದೇಶ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಈಗ ಅವರನ್ನು ಸಮರ್ಥಿಸಿಕೊಳ್ಳಲು ನಿಮ್ಮನ್ನು ನಿಯೋಜಿಸಲಾಗಿದೆ” ಎಂದು ಕಿಡಿಕಾರಿದರು.

“ನ್ಯಾಯಾಲಯದ ಆದೇಶಕ್ಕಿಂತ ಯಾವುದೂ ಮೇಲಿರಲು ಸಾಧ್ಯವಿಲ್ಲ. ಎಷ್ಟೇ ಅಗತ್ಯವಿದ್ದರೂ ನೀವು ನ್ಯಾಯಾಲಯದ ಮುಂದೆ ಬಂದು ಸಮಯ ವಿಸ್ತರಣೆ ಕೇಳಬೇಕಿತ್ತು. ನ್ಯಾಯಾಲಯದ ಅನುಮತಿ ಪಡೆಯದೇ ನೀವು ಏನನ್ನೂ ಮಾಡಲಾಗದು. ಇಲ್ಲಿ ಪ್ರಮಾದವಾಗಿದೆ. ಹೀಗಾಗಿ, ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕು. ಗುಪ್ತಾ ಐಎಎಸ್‌ ಅಧಿಕಾರಿಯಾಗಿದ್ದಾರೆ. ನ್ಯಾಯಾಲಯ ಮತ್ತು ನ್ಯಾಯಾಲಯದ ಆದೇಶ ಎಂದರೇನು ಅವರಿಗೆ ಅರ್ಥ ಮಾಡಿಸಬೇಕಿದೆ” ಎಂದು ಕಟುವಾಗಿ ನುಡಿದರು.

“ನಾವೆಲ್ಲರೂ ನ್ಯಾಯಾಲಯದ ಘನತೆ ಎತ್ತಿ ಹಿಡಿಯಬೇಕು. ಇದಕ್ಕೆ ನೀವು ಜವಾಬ್ದಾರರಾಗಿದ್ದೀರಿ (ಹೊಳ್ಳ ಅವರನ್ನು ಉಲ್ಲೇಖಿಸಿ). ನೀವು ಹೇಗೆ ಅವರನ್ನು ಸಮರ್ಥಿಸುತ್ತೀರಿ? ಪಾರ್ಟಿ ಇನ್‌ ಪರ್ಸನ್‌ ಆಗಿ ಅವರು ವಾದಿಸಲಿ. ಆಮೇಲೆ ಏನಾಗುತ್ತದೆ ಎಂದು ಅವರಿಗೆ ತಿಳಿಯಲಿದೆ. ಪ್ರತಿ ದಿನ ಬಿಬಿಎಂಪಿ ಸಮಸ್ಯೆಯನ್ನು ಕಾಣುತ್ತಿದ್ದೇವೆ. ಇದರಿಂದ ನಮಗೆ ಸಾಕಾಗಿದೆ (ನ್ಯಾಯಾಲಯದ ಆದೇಶ ಪಾಲಿಸದ ಕುರಿತು). ಘನ ತ್ಯಾಜ್ಯ‌ ಸುರಿಯುವ ವಿಚಾರದಲ್ಲಿ ನ್ಯಾಯಾಲಯದ ಆದೇಶವು ಸಂದರ್ಭೋಚಿತವಾಗಿದೆ. ಅದನ್ನು ಉಲ್ಲಂಘಿಸುವ ಮೂಲಕ ಅಧಿಕಾರಿ ದುರ್ನಡತೆ ತೋರಿದ್ದಾರೆ” ಎಂದರು.

ಅಧಿಕಾರಿಗಳು ದಪ್ಪ ಚರ್ಮದವರು

“ಬಿಬಿಎಂಪಿ ಆಯುಕ್ತರು ತಮ್ಮ ನಡತೆಯ ಕುರಿತು ವೈಯಕ್ತಿಕ ಅಫಿಡವಿಟ್‌ ಸಲ್ಲಿಸಲಿ. ಇದಕ್ಕಾಗಿ ಅವರಿಗೆ ಸಾಕಷ್ಟು ಸಮಯ ನೀಡುತ್ತೇವೆ. ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದಾರೆ ಎಂದು ನಮಗೆ ಅನ್ನಿಸಿದೆ. ನಿಮಗೆ ಹಾಗೆ ಅನ್ನಿಸದಿರಬಹುದು. ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸಮಯ ಬಂದಿದೆ. ಅವರಿಗೆ ತಪ್ಪು-ಸರಿಯ ಅನುಭವವಾಗುವಂತೆ ಮಾಡಬೇಕಿದೆ. ಇಲ್ಲಿಗೆ ಬಂದ ಕೆಲವು ತಿಂಗಳಿಂದ ನಾನು ನೋಡುತ್ತಿದ್ದೇನೆ. ಇಲ್ಲಿ ಎಲ್ಲವೂ ಸರಿಯಾಗಿಲ್ಲ. ಅಧಿಕಾರಿಗಳು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದ್ದಾರೆ. ಕಾನೂನು ಎಂದರೆ ಏನು ಎಂಬುದನ್ನು ಅಧಿಕಾರಿಗಳಿಗೆ ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿ” ಎಂದು ಗುಡುಗಿದರು.

“ಆಯುಕ್ತರನ್ನು ಯಾವುದೇ ನೀತಿ, ನಿಯಮ ಅಥವಾ ಕಾನೂನು ರಕ್ಷಿಸುವುದಿಲ್ಲ. ನೀವು ಯಾವುದಾದರೂ ಕಾನೂನಿನ ಮೂಲಕ ಅವರನ್ನು ರಕ್ಷಿಸಬಹುದು ಎಂದು ತೋರಿಸಿದರೆ ನಿಮಗೆ ಸ್ವಾಗತ” ಎಂದು ಹೊಳ್ಳ ಅವರಿಗೆ ಸಿಜೆ ಹೇಳಿದರು.

ಈ ಮಧ್ಯೆ, ಪೀಠದ ಆಕ್ರೋಶಕ್ಕೆ ತುತ್ತಾಗುತ್ತಲೇ ಸಿಜೆ ಅವರ ಮನವೊಲಿಸುವ ಪ್ರಯತ್ನವನ್ನು ಉದಯ್‌ ಹೊಳ್ಳ ಮಾಡಿದರು. ಹಿಂದಿನ ಆದೇಶಗಳನ್ನು ಒಮ್ಮೆ ನೋಡುವಂತೆ ಪರಿಪರಿಯಾಗಿ ಬೇಡಿಕೊಂಡರು.

“2020ರ ಮಾರ್ಚ್‌ 6 ಮತ್ತು ಅಕ್ಟೋಬರ್‌ 14 ಮತ್ತು 23ರಂದು ಕೆಎಸ್‌ಪಿಸಿಬಿಗೆ ಅನುಮತಿ ಕೋರಿದ್ದೇವೆ. ನ್ಯಾಯಾಲಯದ ಆದೇಶ ಮಾರ್ಪಡಿಸಲು ಪೀಠದ ಮುಂದೆಯೂ ಮನವಿ ಸಲ್ಲಿಸಿದ್ದೇವೆ. ಸೂಕ್ತ ಮನವಿ ಸಲ್ಲಿಸಬೇಕು ಎಂದು ಪೀಠವು ವಿಚಾರಣೆ ಮುಂದೂಡಿತ್ತು” ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆಗ ನ್ಯಾಯಾಲಯವು “ಯಾರ ಆದೇಶದ ಹಿನ್ನೆಲೆಯಲ್ಲಿ ಮಿಟ್ಟಗಾನಹಳ್ಳಿಯಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಯಾವುದೇ ಪ್ರಾಧಿಕಾರ ಅಥವಾ ನ್ಯಾಯಾಲಯ ಆದೇಶ ಮಾಡಿಲ್ಲ” ಎಂದು ಸ್ಪಷ್ಟವಾಗಿ ಹೇಳಿತು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಳ್ಳ ಅವರು “ಎರಡು ವರ್ಷಗಳ ಕೋವಿಡ್‌ ಸಂದರ್ಭದಲ್ಲಿ ಬಿಬಿಎಂಪಿ ಅತ್ಯುತ್ತಮ ಕೆಲಸ ಮಾಡಿದೆ ಎಂಬುದನ್ನು ನನ್ನ ವೈಯಕ್ತಿಕ ಅನುಭವದ ಮೇಲೆ ಹೇಳುತ್ತಿದ್ದೇನೆ. ಬೇರೆ ವಿಚಾರಗಳಲ್ಲಿ ಇದೇ ಮಾತು ಹೇಳಲಾಗದು. ನ್ಯಾಯಾಲಯದ ಕಟ್ಟು ನಿಟ್ಟಿನ ಸಂದೇಶವು ಸರಿಯಾಗಿದೆ” ಎಂದರು.

Also Read
[ಬಿಬಿಎಂಪಿ ತ್ಯಾಜ್ಯ ವಿಲೇವಾರಿ] ಅಧಿಕಾರಿಗಳಿಗೆ ಗಂಟುಮೂಟೆ ಸಮೇತ ಬರಲು ಹೇಳಿ, ಜೈಲಿಗೆ ಅಟ್ಟುತ್ತೇವೆ: ಹೈಕೋರ್ಟ್‌

ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೂ ಮುನ್ನ ಅವರಿಗೆ ವೈಯಕ್ತಿಕ ಅಫಿಡವಿಟ್‌ ಸಲ್ಲಿಸಲು ಹತ್ತು ದಿನ ಕಾಲಾವಕಾಶ ನೀಡಲಾಗಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಅವರು ಖುದ್ದು ಹಾಜರಾಗಬೇಕು ಎಂದು ಹೇಳಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಿತು.

ಹೊಳ್ಳ ಹೇಳಿದ ಶಿಶುಪಾಲ-ಕೃಷ್ಣನ ಕತೆ

ಕೋಪೋದ್ರಿಕ್ತರಾಗಿದ್ದ ಸಿಜೆ ಅವರ ಮನಗೆಲ್ಲಲು ಹಿರಿಯ ವಕೀಲ ಹೊಳ್ಳ ಅವರು ಮಹಾಭಾರತದ ಘಟನೆಯೊಂದನ್ನು ಉಲ್ಲೇಖಿಸಿದರು. ಇಲ್ಲಿ ಸಿಜೆ ಅವರನ್ನು ಕೃಷ್ಣನಿಗೂ, ಪ್ರಮಾದಗಳ ಸರದಾರ ಶಿಶುಪಾಲನ ಸ್ಥಾನದಲ್ಲಿ ಬಿಬಿಎಂಪಿಯನ್ನಿಟ್ಟಿದ್ದರು. “ಶಿಶುಪಾಲ ನೂರು ತಪ್ಪುಗಳನ್ನು ಮಾಡಿದರೂ ಶಿಶುಪಾಲನನ್ನು ಕೃಷ್ಣ ಕ್ಷಮಿಸಿದ್ದ. ನಾವು ನಿಮ್ಮನ್ನು ಕೃಷ್ಣ ಎಂದು ನಂಬಿ ಬಂದಿದ್ದೇವೆ. ನಿಮ್ಮ ರೂಪದಲ್ಲಿ ಮತ್ತೊಬ್ಬ ಕೃಷ್ಣ ಪೀಠದಲ್ಲಿದ್ದಾರೆ” ಎಂದು ಲಘು ದಾಟಿಯಲ್ಲಿ ಹೇಳಿದರು.

Related Stories

No stories found.
Kannada Bar & Bench
kannada.barandbench.com