ರಾಜಕಾಲುವೆ ಒತ್ತುವರಿ: ಸಿಎಜಿ ವರದಿಯಲ್ಲಿನ ವಿವರ ತಿಳಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

"ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತವಾಗಿದೆಯೇ ಎಂಬುದ ನಮಗೆ ತಿಳಿಯಬೇಕಿದೆ. ಬೇರೆ ಯಾವುದಾದರೂ ಪ್ರಾಧಿಕಾರವು ಪರ್ಯಾಯವಾಗಿ ತನಿಖೆ ನಡೆಸುತ್ತಿದೆಯೇ ಎಂಬುದೂ ನಮಗೆ ಗೊತ್ತಾಗಬೇಕಿದೆ" ಎಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು.
BBMP
BBMP

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿನ ಉಲ್ಲೇಖದ ಕುರಿತು ತಿಳಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ಕಳೆದ ವಿಚಾರಣೆಗೆ ಸಂಬಂಧಿಸಿದಂತೆ ಸ್ಥಿತಿಗತಿ ಏನಾಗಿದೆ ಎಂದು ಬಿಬಿಎಂಪಿ ವಕೀಲರನ್ನು ಪ್ರಶ್ನಿಸಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ದೂರು ಪರಿಹಾರ ಕೇಂದ್ರಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆಗಳಾಗಿವೆ ಎಂಬುದನ್ನು ವಿವರಿಸಿದರು. ಅಲ್ಲದೇ, ಮಳೆ ನೀರು ಹರಿದು ಹೋಗಲು ಎಲ್ಲಾ ಪ್ರಯತ್ನವನ್ನು ಬಿಬಿಎಂಪಿ ಮಾಡುತ್ತಿದೆ. ರಾಜಕಾಲುವೆ ಒತ್ತುವರಿ ಪತ್ತೆ ಮತ್ತು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದರು.

ಇದಕ್ಕೆ ಪೀಠವು “ರಾಜಕಾಲುವೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆಯೇ? ಎಷ್ಟು ಒತ್ತುವರಿಯಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ನೀವು ಹಳೆಯ ಅಂಕಿ-ಸಂಖ್ಯೆ ನೀಡಬೇಡಿ. ಈಗ ಎಷ್ಟು ಒತ್ತುವರಿಗಳನ್ನು ಪತ್ತೆ ಮಾಡಿದ್ದೀರಿ? ನಿರ್ದಿಷ್ಟವಾಗಿ ಎಷ್ಟು ಒತ್ತುವರಿಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಬೇಕು. ಇಲ್ಲವಾದರೆ ಅದರ ಮೇಲೆ ನಾವು ನಿಗಾ ಇಡುವುದು ಹೇಗೆ?” ಎಂದಿತು.

ಆಗ ಶ್ರೀನಿಧಿ ಅವರು “ಒತ್ತುವರಿ ಪತ್ತೆ ಮಾಡುವ ಕೆಲಸ ದಿನನಿತ್ಯ ನಡೆಯುತ್ತಿದೆ. ಅಲ್ಲದೇ, ಒತ್ತುವರಿಗಳನ್ನು ತೆರವು ಮಾಡಲಾಗುತ್ತಿದೆ. ಎಷ್ಟು ಒತ್ತುವರಿಯಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರು “ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಏನೆಂದು ಹೇಳಲಾಗಿದೆ” ಎಂದು ಪ್ರಶ್ನಿಸಿದರು. ಇದಕ್ಕೆ ಮಾಹಿತಿ ಇಲ್ಲ ಎಂದ ಶ್ರೀನಿಧಿ ಅವರು, ಸರ್ಕಾರದಿಂದ ಸೂಚನೆ ಪಡೆದು ತಿಳಿಸಲಾಗುವುದು ಎಂದರು.

ಇದನ್ನು ಆಲಿಸಿದ ಪೀಠವು “ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಕುರಿತು ಸಿಎಜಿ ವರದಿಗೆ ಸಂಬಂಧಿಸಿದಂತೆ ಸೂಚನೆ ಪಡೆಯಲು ಬಿಬಿಎಂಪಿ ವಕೀಲರು ಸಮಯ ಕೇಳಿದ್ದಾರೆ. ಹೀಗಾಗಿ, ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ” ಎಂದು ಆದೇಶಿಸಿತು.

ಬೇರೆ ಪ್ರಾಧಿಕಾರ ಪರ್ಯಾಯ ತನಿಖೆ ನಡೆಸುತ್ತಿದೆಯೇ?

ಮುಂದುವರಿದು ಮೌಖಿಕವಾಗಿ “ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತವಾಗಿದೆಯೇ ಎಂಬುದ ನಮಗೆ ತಿಳಿಯಬೇಕಿದೆ. ಬೇರೆ ಯಾವುದಾದರೂ ಪ್ರಾಧಿಕಾರವು ಪರ್ಯಾಯವಾಗಿ ತನಿಖೆ ನಡೆಸುತ್ತಿದೆಯೇ ಎಂಬುದೂ ನಮಗೆ ಗೊತ್ತಾಗಬೇಕಿದೆ” ಎಂದು ಪೀಠವು ಹೇಳಿತು.

Also Read
ಲೋಕಾಯುಕ್ತ ನಿರ್ದೇಶನ: ಬಾಗ್ಮನೆ ಟೆಕ್‌ಪಾರ್ಕ್‌ ಬಳಿ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಿಬಿಎಂಪಿ

ನ್ಯಾ. ವಿಶ್ವಜಿತ್‌ ಶೆಟ್ಟಿ ಅವರು “ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಇಟ್ಟಿಗೆ ಚೂರು, ನುಚ್ಚುಗಲ್ಲುಗಳಿಂದ, ಸಿಮೆಂಟ್‌ ಬ್ಲಾಕ್‌ ಚೂರುಗಳಿಂದ ಮುಚ್ಚಲಾಗುತ್ತಿದೆ. ಈ ರೀತಿಯಾಗಿ ನೀವು ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದೀರಿ. ಇದು ದುರದೃಷ್ಟಕರ” ಎಂದು ಬೇಸರ ವ್ಯಕ್ತಪಡಿಸಿದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರು “ಗುತ್ತಿಗೆದಾರರು ಹಣ ಮಾಡಲು ಇದ್ದಾರೆ. ಅವರು ಸಾರ್ವಜನಿಕ ಸೇವೆ ಮಾಡುತ್ತಿಲ್ಲ. ನೀವು ಅವರನ್ನು ನಿಯಂತ್ರಿಸಬೇಕು” ಎಂದು ಬಿಬಿಎಂಪಿಗೆ ಸೂಚಿಸಿ, ವಿಚಾರಣೆ ಮುಂದೂಡಿದರು.

Kannada Bar & Bench
kannada.barandbench.com