[ಬಿಬಿಎಂಪಿ] ಸರ್ಕಾರದ ಬಳಿ ಒಬಿಸಿ ಖಚಿತ ದತ್ತಾಂಶವಿಲ್ಲ; ಮೀಸಲಾತಿ ನಿಗದಿ ಸುಪ್ರೀಂ ತೀರ್ಪಿಗೆ ವಿರುದ್ಧ: ವಕೀಲ ಪಾಟೀಲ್‌

ಕುರುಬ, ಗಾಣಿಗ ಸಮುದಾಯಗಳು ಹಿಂದುಳಿದ ಜಾತಿಗಳಾದರೂ ಅವರನ್ನು ಬೆಂಬಲಿಸಲು ಅವರಿಗೆ ಸಂಖ್ಯೆ ಇದೆ. ಯಾವುದೇ ಸಂಖ್ಯಾ ಬಲವಿಲ್ಲದ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಹೇಗೆ ಕಲ್ಪಿಸಲಾಗುತ್ತದೆ ಎಂದು ಪ್ರಶ್ನಿಸಿದ ಜಯಕುಮಾರ್‌ ಪಾಟೀಲ್‌.
BBMP and Karnataka HC
BBMP and Karnataka HC

“ಹಿಂದುಳಿದ ವರ್ಗಗಳ ಅಡಿ ಬರುವ ಎಲ್ಲಾ ಜಾತಿ-ಜನಾಂಗಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಬಳಿ ಇಲ್ಲಿಯವರೆಗೆ ಯಾವುದೇ ತೆರನಾದ ಖಚಿತವಾದ ದತ್ತಾಂಶವಿಲ್ಲ. ನಿವೃತ್ತ ನ್ಯಾಯಮೂರ್ತಿ ಡಾ. ಭಕ್ತವತ್ಸಲ ಸಮಿತಿಯ ವರದಿಯ ಪ್ರಕಾರವೂ ಹಾಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಉಪ ವಿಭಾಗೀಕರಿಸಬೇಕಿದೆ. ಇದನ್ನೂ ರಾಜ್ಯ ಸರ್ಕಾರ ಮಾಡಿಲ್ಲ” ಎಂದು ಹಿರಿಯ ವಕೀಲ ಜಯಕುಮಾರ್‌ ಎಸ್‌ ಪಾಟೀಲ್‌ ಅವರು ಆಕ್ಷೇಪಿಸಿದ್ದಾರೆ.

ಬಿಬಿಎಂಪಿ ಚುನಾವಣೆಗೆ ಸಿದ್ಧಪಡಿಸಲಾಗಿರುವ 243 ವಾರ್ಡ್‌ಗಳ ಮೀಸಲು ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ಕಲ್ಪಿಸಲಾಗಿಲ್ಲ ಎಂದು ಬೆಂಗಳೂರಿನ ಈಜಿಪುರದ ಕೆ ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್‌, ದೊಡ್ಡಬಾಣಸವಾಡಿಯ ವಿ ಶ್ರೀನಿವಾಸ್‌ ಮತ್ತು ನಾಗನಾಥಪುರದ ಕೆ ಚಂದ್ರಶೇಖರ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ನಡೆಸಿತು.

“ನಿವೃತ್ತ ನ್ಯಾಯಮೂರ್ತಿ ಡಾ. ಭಕ್ತವತ್ಸಲ ಸಮಿತಿಯ ವರದಿಯನ್ನು ಒಪ್ಪಿಕೊಂಡರೂ ಸಹ ರಾಜ್ಯ ಸರ್ಕಾರ ಮಾಡಿರುವ ಮೀಸಲಾತಿ ನಿಗದಿಯು ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರದ ಬಳಿ ಎಲ್ಲಾ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ದತ್ತಾಂಶವಿಲ್ಲ. ಉದಾಹರಣೆಗೆ ಕುರುಬ, ಗಾಣಿಗ ಸಮುದಾಯಗಳು ಹಿಂದುಳಿದ ಜಾತಿಗಳಾದರೂ ಅವರನ್ನು ಬೆಂಬಲಿಸಲು ಅವರಿಗೆ ಸಂಖ್ಯೆ ಇದೆ. ಯಾವುದೇ ಸಂಖ್ಯಾ ಬಲವಿಲ್ಲದ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಹೇಗೆ ಕಲ್ಪಿಸಲಾಗುತ್ತದೆ” ಎಂದು ಅವರು ಪ್ರಶ್ನಿಸಿದರು.

Karnataka HC and Sr. Counsel Jayakumar S. Patil
Karnataka HC and Sr. Counsel Jayakumar S. Patil

“ವಾರ್ಡ್‌ವಾರು ಮೀಸಲಾತಿ ನಿಗದಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ವರದಿ ಆಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಭಕ್ತವತ್ಸಲ ಸಮಿತಿ ಶಿಫಾರಸ್ಸು ಮಾಡಿರುವ ಮೂರು ಹಂತದ ಪರಿಶೀಲನೆಯನ್ನು (ಟ್ರಿಪಲ್ ಟೆಸ್ಟ್) ಅನ್ವಯಿಸಿಕೊಂಡಿಲ್ಲ. ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿಯನ್ನೂ ಒದಗಿಸಿಲ್ಲ. ಒಬಿಸಿಯಲ್ಲಿ ಅಲ್ಪಸಂಖ್ಯಾತರೂ ಸೇರಿದ್ದು, ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಇದೆ. ಇನ್ನುಳಿದ ಅಲ್ಪಸಂಖ್ಯಾತರು ಕಡೆಗಣನೆಗೆ ಒಳಗಾಗಿದ್ದಾರೆ” ಎಂದು ಆಕ್ಷೇಪಿಸಿದರು.

ಅರ್ಜಿದಾರ ಕೆ ಮಹದೇವ ಅವರನ್ನು ಪ್ರತಿನಿಧಿಸಿದ್ದ ವಕೀಲ ಎಂ ಜಯ ಮೋವಿಲ್‌ ಅವರು “ಸುಪ್ರೀಂ ಕೋರ್ಟ್‌ ತೀರ್ಪನ್ನು ನಿರ್ಲಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಹೀಗಾಗಿ, ಮೀಸಲಾತಿ ಅಧಿಸೂಚನೆಯನ್ನು ಬದಿಗೆ ಸರಿಸಬೇಕು. ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಶೇ 12.8ರಷ್ಟು ಪರಿಶಿಷ್ಟ ಜಾತಿಯವರಿದ್ದರೂ 9 ವಾರ್ಡ್‌ಗಳ ಪೈಕಿ ಎಸ್‌ಸಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿಲ್ಲ. ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಈಜಿಪುರ ವಾರ್ಡ್‌ ಪರಿಶಿಷ್ಟ ಜಾತಿಗೆ ಸೇರಬೇಕಿದ್ದರೂ ಅದನ್ನು ಸಾಮಾನ್ಯ ಮಹಿಳೆಗೆ ನಿಗದಿಪಡಿಸುವ ಮೂಲಕ ಮೀಸಲಾತಿ ವಿರೋಧಿ ನೀತಿ ಅನುಸರಿಸಿದ್ದಾರೆ. 6,717 ಪರಿಶಿಷ್ಟ ಜಾತಿ ಮತದಾರರಿದ್ದರೂ ಅದನ್ನು ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದೆ ಎಂದು ವಾದಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ಸುಪ್ರೀಂ ಕೋರ್ಟ್‌ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುತ್ತಿದೆ” ಎಂದರು.

Also Read
ಬಿಬಿಎಂಪಿ ಚುನಾವಣೆ: ವಾರ್ಡ್‌ ಪುನರ್‌ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಇದಕ್ಕೆ ಪೀಠವು “ರಾಜ್ಯ ಸರ್ಕಾರ ಏನು (ನ್ಯಾ.ಭಕ್ತವತ್ಸಲ ಸಮಿತಿ ವರದಿ) ಒಪ್ಪಿಕೊಂಡಿದೆ ಮತ್ತು ಏನು ಮಾಡಿದೆ ಎಂಬುದನ್ನು ತಿಳಿಸಲಿ. ಇದನ್ನು ಆಕ್ಷೇಪಣೆಯಲ್ಲಿ ತಿಳಿಸಬೇಕು” ಎಂದಿತು. ಅಲ್ಲದೇ, ವಿಚಾರಣೆಯನ್ನು ಸೆಪ್ಟೆಂಬರ್‌ 21ಕ್ಕೆ ಮುಂದೂಡಿತು.

ಬಿಬಿಎಂಪಿಯ 243 ವಾರ್ಡ್‌ಗಳ ಪೈಕಿ 81 ವಾರ್ಡ್‌ಗಳನ್ನು ಇತರೆ ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿಗೆ 28, ಪರಿಶಿಷ್ಟ ವರ್ಗಕ್ಕೆ 4 ಅನ್ನು ಮೀಸಲಿರಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು 2022ರ ಮೇ 8ರಂದು ಡಾ. ಭಕ್ತವತ್ಸಲ ಸಮಿತಿಯನ್ನು ಸರ್ಕಾರ ನೇಮಿಸಿತ್ತು. ಒಬಿಸಿಗಳಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಿ ಸಮಿತಿಯು 2022ರ ಜುಲೈ 21ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

Related Stories

No stories found.
Kannada Bar & Bench
kannada.barandbench.com