ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ ವರದಿ ಆಧರಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ರಾಜಕೀಯ ಮೀಸಲಾತಿ ನಿಗದಿಪಡಿಸಲು 2023ರ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಬೇಕು ಎಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಗುರುವಾರ ಸುಪ್ರೀಂ ಕೋರ್ಟ್ ಮನ್ನಿಸಿರುವುದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸ್ಥಿತಿಗತಿ ವರದಿಗಳನ್ನು ಪರಿಶೀಲಿಸಿತು.
ತದನಂತರ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನಿಗದಿಪಡಿಸಲು 2023ರ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಿರುವುದಾಗಿ ಆದೇಶಿಸಿತು.
ಇದಕ್ಕೂ ಮುನ್ನ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಪ್ರಕರಣವೊಂದರಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಮಗೆ ಅರಿವಿದೆ. ಮೂರು ಹಂತದ ಪರಿಶೀಲನೆ ನಡೆಸಬೇಕಿದೆ. ನ್ಯಾಯಾಲಯದ ಆದೇಶಗಳನ್ನು ನಾವು ಜಾರಿ ಮಾಡುತ್ತೇವೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನಿಗದಿಪಡಿಸಲು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅವರ ವರದಿ ಇದೆ. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿಲಾಗಿತ್ತು. ಹೈಕೋರ್ಟ್ ಇದನ್ನು ಬದಿಗೆ ಸರಿಸಿದೆ. ಅಲ್ಲದೇ, ಹೊಸದಾಗಿ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠವು ಆದೇಶ ಮಾಡಿದೆ. ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ” ಎಂದರು.
ನ್ಯಾ. ನಜೀರ್ ಅವರು “ಅಂತಿಮವಾಗಿ ನಿಮಗೆ ಏನಾಗಬೇಕಿದೆ ತುಷಾರ್ ಮೆಹ್ತಾ? ನಾವು ನಿಮ್ಮ ಅರ್ಜಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದೇವೆ” ಎಂದರು.
ಇದಕ್ಕೆ ಮೆಹ್ತಾ ಅವರು “ನ್ಯಾಯಾಲಯದ ನಿರ್ದೇಶನದಂತೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಆರಂಭಿಸಿದ್ದು, ನಾವು 2023ರ ಮಾರ್ಚ್ 31ರ ಒಳಗೆ ರಾಜಕೀಯ ಮೀಸಲಾತಿಯನ್ನು ನಿಗದಿಪಡಿಸುತ್ತೇವೆ. ಹೀಗಾಗಿ, ಮೀಸಲಾತಿ ನಿಗದಿಪಡಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಆಗ ನ್ಯಾ. ನಜೀರ್ ಅವರು “ಚುನಾವಣೆ ನಡೆಸಲು ನಿಮಗೆ ಎಷ್ಟು ಕಾಲಾವಕಾಶ ಬೇಕು? ಯಾವ ವಿವರಣೆಯನ್ನು ನೀಡುತ್ತೀರಿ. ಅದನ್ನು ಅರ್ಜಿಯಲ್ಲಿ ಹೇಳಿದ್ದೀರಾ?” ಎಂದರು.
ಇದಕ್ಕೆ ಮೆಹ್ತಾ ಅವರು “ಮೀಸಲಾತಿ ನಿಗದಿಪಡಿಸಲು ಕಾಲಾವಕಾಶ ಕೇಳುತ್ತಿದ್ದೇವೆ. ಚುನಾವಣಾ ಆಯೋಗ ಚುನಾವಣೆ ನಡೆಸಲಿದೆ. ನಾವು ಮೀಸಲಾತಿ ವಿವರ ನೀಡುತ್ತೇವೆ. ವಾಸ್ತವಿಕ ದತ್ತಾಂಶ ಮತ್ತು ಆಯೋಗ ನಡೆಸಿರುವ ವಿಶ್ಲೇಷಣೆ ನೀಡುತ್ತೇವೆ” ಎಂದು ವಿವರಿಸಿದರು.
ಆಗ ನ್ಯಾ. ನಜೀರ್ ಅವರು “(ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ) ಫಣೀಂದ್ರ ಅವರಿಗೆ (ಸರ್ಕಾರಕ್ಕೆ) ಸ್ವಲ್ಪ ಕಾಲಾವಕಾಶ ನೀಡಿ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಇದೊಂದು ಅವಕಾಶ. ಸಾಕಷ್ಟು ತಡವಾಗಿದೆ ಎಂದು ನೀವು ಹೇಳಲು ಬಯಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ಒಬಿಸಿಗೆ ಮೀಸಲಾತಿ ಸಿಗಲಿದೆ. ಇತ್ತೀಚೆಗಿನ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಸಾಂವಿಧಾನಿಕ ತಿದ್ದುಪಡಿಯ ಪ್ರಕರಣದಲ್ಲಿ ವಾದವೇನಾಗಿತ್ತು? ಇದೇ ವಾದವಿತ್ತು. ಹೀಗಾಗಿ, ಅವರಿಗೂ ಪ್ರಾತಿನಿಧ್ಯ ಸಿಗಲಿ” ಎಂದರು.
ಇದಕ್ಕೆ ಫಣೀಂದ್ರ ಅವರು “ಭಕ್ತವತ್ಸಲ ಆಯೋಗವು ವರದಿ ನೀಡಿದ್ದು, ಒಬಿಸಿ ಮತ್ತು ಅಲ್ಪಸಂಖ್ಯಾತರ ಅಂಕಿ ಸಂಖ್ಯೆ ನೀಡಲಾಗಿದೆ. ಅಲ್ಪಸಂಖ್ಯಾತರು ಮತ್ತು ಒಬಿಸಿ ಅಂಕಿಸಂಖ್ಯೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ನೀಡಿಲ್ಲ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಹೇಳಿದೆ. ಹೀಗಿರುವಾಗ, ಭಕ್ತವತ್ಸಲ ಸಮಿತಿಗೆ ರಾಜ್ಯ ಸರ್ಕಾರವು ಪತ್ರ ಬರೆದಿದೆ. ಆದರೆ, ಆಯೋಗವು ನಮ್ಮ ವರದಿ ಸರಿಯಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ. ನಾವು ಆಯೋಗದ ವರದಿಗೆ ವಿರುದ್ಧವಾಗಿ ಹೋಗಿ ಎಂದು ಹೇಳುತ್ತಿಲ್ಲ. ಆದರೆ, ರಾಜ್ಯ ಸರ್ಕಾರವು ಪುನಾ ಆಯೋಗಕ್ಕೆ ವಾಸ್ತವಿಕ ದತ್ತಾಂಶ ನೀಡುವಂತೆ ಕೋರುತ್ತಿದೆ. ಹಿಂದುಳಿದ ವರ್ಗಗಳ ಆಯೋಗವು ಒಬಿಸಿಗೆ ಶೇ. 33ರಷ್ಟು ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿದೆ” ಎಂದು ವಿವರಿಸಿದರು.
ಈ ನಡುವೆ ಮಧ್ಯಪ್ರವೇಶಿದ ಮೆಹ್ತಾ ಅವರು “ಚುನಾವಣಾ ಆಯೋಗಕ್ಕೆ ಇದೆಲ್ಲವೂ ಸಂಬಂಧಿಸಿಲ್ಲ” ಎಂದರು. ಇದಕ್ಕೆ ಒಪ್ಪದ ಪೀಠವು ಫಣೀಂದ್ರ ಅವರು ನ್ಯಾಯಾಲಯಕ್ಕೆ ವಿವರ ನೀಡಬಹುದು ಎಂದಿತು.
ವಾದ ಮುಂದುವರಿಸಿದ ಫಣೀಂದ್ರ ಅವರು “ನಮ್ಮ ಸೀಮಿತ ಅನುಭವದಲ್ಲಿ ಹೇಳುವುದಾದರೆ ಹಿಂದುಳಿದ ವರ್ಗ ಪತ್ತೆ ಮಾಡಲು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ಪ್ರಕ್ರಿಯೆಗೆ ಒಂದೆರಡು ವರ್ಷಬೇಕು. ಮೂರು ತಿಂಗಳಲ್ಲಿ ಇದು ಸಾಧ್ಯವಿಲ್ಲ” ಎಂದು ರಾಜ್ಯ ಸರ್ಕಾರದ ಸಮಯಾವಕಾಶ ವಿಸ್ತರಣೆಗೆ ಆಕ್ಷೇಪಿಸಿದರು.
ಆಗ ನ್ಯಾ. ನಜೀರ್ ಅವರು “ಈಗಿನ ಸ್ಥಿತಿಯಲ್ಲಿ ಚುನಾವಣೆ ನಡೆದರೆ ಒಬಿಸಿ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವುದಿಲ್ಲ” ಎಂದರು.
ಇದಕ್ಕೆ ಫಣೀಂದ್ರ ಅವರು “ಮಾರ್ಚ್ 31ರಂದು ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿಬೇಕು. ಮತ್ತೆ ಅವರು ಕಾಲಾವಕಾಶ ಕೋರುತ್ತಾರೆ. ಈ ಆದೇಶವು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಭಾದಿಸದಂತೆ ಆದೇಶಿಸಬೇಕು. ರಾಜ್ಯ ಸರ್ಕಾರವು ಒಂದನ್ನೊಂದು ತೋರಿಸಿ ಸಬೂಬು ಹೇಳುತ್ತಿದೆ” ಎಂದರು.
ಆಗ ನ್ಯಾ. ನಜೀರ್ ಅವರು “ಕುದುರೆಯುಂಟು, ಮೈದಾನವುಂಟು” ಎಂದರು ನಕ್ಕರು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಮುಂದೂಡಿತು.