ಬಿಬಿಎಂಪಿ ಚುನಾವಣೆ: ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹುಳಿಮಾವು ವಾರ್ಡ್‌ ಹಂಚಿಕೆ, ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಬಿಬಿಎಂಪಿ ಕಾಯಿದೆ ಸೆಕ್ಷನ್ 7(1)(ಬಿ) ಪ್ರಕಾರ ಒಂದು ವಾರ್ಡ್‌ಗೆ ಸೇರಿದ ಪ್ರದೇಶಗಳನ್ನು ಒಂದೇ ವಿಧಾನಸಭಾ ಕ್ಷೇತ್ರವೊಂದರೊಳಗೆ ಸೇರಿಸಬೇಕು. ಯಾವುದೇ ವಾರ್ಡ್‌ನ ಪ್ರದೇಶಗಳನ್ನು ಎರಡು ಕ್ಷೇತ್ರಗಳಿಗೆ ಹಂಚಬಾರದು ಎಂದು ವಾದಿಸಿದ ಅರ್ಜಿದಾರರು.
BBMP and Karnataka HC
BBMP and Karnataka HC
Published on

ಮರುವಿಂಗಡಣೆಯಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಹುಳಿಮಾವು ವಾರ್ಡ್‌ನ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಸೇರಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಸತೀಶ್ ರೆಡ್ಡಿ ಮತ್ತಿತರರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರ, ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು.

ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಬಿಬಿಎಂಪಿ ಕಾಯಿದೆ ಸೆಕ್ಷನ್ 7(1)(ಬಿ) ಪ್ರಕಾರ ಒಂದು ವಾರ್ಡ್‌ಗೆ ಸೇರಿದ ಪ್ರದೇಶಗಳನ್ನು ಒಂದೇ ವಿಧಾನಸಭಾ ಚುನಾವಣಾ ಕ್ಷೇತ್ರದೊಳಗೆ ಸೇರಿಸಬೇಕು. ಯಾವುದೇ ವಾರ್ಡ್‌ನ ಪ್ರದೇಶಗಳನ್ನು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಬಾರದು. ಆದರೆ, ಹುಳಿಮಾವು ವಾರ್ಡ್‌ನ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸೇರಿಸಲಾಗಿದೆ. ಇದರಿಂದ ಮತದಾರರಿಗೆ ಗೊಂದಲ ಉಂಟಾಗಲಿದೆ. ಈ ಬಗ್ಗೆ ಆಕ್ಷೇಪಿಸಿದ ತಕರಾರು ಅರ್ಜಿಯನ್ನು ಏಕಸದಸ್ಯ ಪೀಠವು ಪುರಸ್ಕರಿಸಿಲ್ಲ” ಎಂದರು.

Also Read
ಬಿಬಿಎಂಪಿ ಚುನಾವಣೆ: ವಾರ್ಡ್‌ ಪುನರ್‌ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

“ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹುಳಿಮಾವು ಸೇರಿದಂತೆ ಹಿಂದೆಯಿದ್ದ 8 ವಾರ್ಡ್‌ಗಳ ಜತೆಗೆ ಹೆಚ್ಚುವರಿಯಾಗಿ 6 ವಾರ್ಡ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ, ಹುಳಿಮಾವು ವಾರ್ಡ್‌ಗೆ ಸೇರಿದ ಅಕ್ಷಯ ಗಾರ್ಡನ್, ಸತ್ಯಸಾಯಿ, ಶಿರಡಿ ಸಾಯಿ ನಗರ, ವಿಐಪಿ ಲೇಔಟ್ ಮತ್ತಿತರೆ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದೊಂದಿಗೆ ಹಂಚಿಕೆ ಮಾಡಲಾಗಿದೆ. ಇದು ಬಿಬಿಎಂಪಿ ಕಾಯಿದೆ ಸೆಕ್ಷನ್ 7(1) (ಬಿ), ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ-2020ರ ಸೆಕ್ಷನ್ 7 ಮತ್ತು ವಾರ್ಡ್ ಮರು ವಿಂಗಡಣೆಗೆ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ವಾರ್ಡ್ ಮರು ವಿಂಗಡಣೆ ಅಧಿಸೂಚನೆ ರದ್ದುಪಡಿಸಬೇಕು. ಹುಳಿಮಾವು ವಾರ್ಡ್ ಮರು ವಿಂಗಡಣೆಯನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಮೇಲ್ಮನವಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com