ಬಿಬಿಎಂಪಿ ಚುನಾವಣೆ: ಮಹಿಳಾ ಮೀಸಲಾತಿ, ಒಬಿಸಿ ಆಯೋಗದ ವರದಿ ಕುರಿತು ಸರ್ಕಾರದಿಂದ ವಿವರಣೆ ಬಯಸಿದ ಹೈಕೋರ್ಟ್‌

ಖಚಿತ ದತ್ತಾಂಶ ಇಲ್ಲದೇ ಒಬಿಸಿ ಮೀಸಲು ನಿಗದಿ ಮಾಡಲಾಗಿದೆ. ಸಮೀಕ್ಷೆಯನ್ನೇ ನಡೆಸದೆ ಒಬಿಸಿ ಆಯೋಗವು ಮೀಸಲಾತಿ ನಿರ್ಧರಿಸಿದೆ. ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಯಾವುದೇ ಸಮೀಕ್ಷೆ ನಡೆಸಿಲ್ಲ ಎಂದು ಆಕ್ಷೇಪ.
BBMP and Karnataka HC
BBMP and Karnataka HC
Published on

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ವಾರು ಮಹಿಳಾ ಮೀಸಲಾತಿಯನ್ನು ಮರು ರೂಪಿಸಲಾಗುತ್ತದೆಯೇ ಎಂದು ತಿಳಿಸುವಂತೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಆಯೋಗದ ವರದಿಗೆ ಯಾವ ದಾಖಲೆ ಆಧರಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿ ಪ್ರಶ್ನಿಸಿ ಈಜಿಪುರದ ಕೆ ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಜಯಕುಮಾರ್‌ ಪಾಟೀಲ್‌, ಎ ಎಸ್‌ ಪೊನ್ನಣ್ಣ, ವಕೀಲರಾದ ಸಂದೀಪ್‌ ಪಾಟೀಲ್‌, ಎಂ ಜಯ ಮೋವಿಲ್‌ ಅವರು “ಮೀಸಲು ನಿಗದಿ ಮಾಡುವ ನಿಯಮ ಪಾಲನೆಯಾಗಿಲ್ಲ. ಖಚಿತ ದತ್ತಾಂಶ ಇಲ್ಲದೇ ಒಬಿಸಿ ಮೀಸಲು ನಿಗದಿ ಮಾಡಲಾಗಿದೆ. ಸಮೀಕ್ಷೆಯನ್ನೇ ನಡೆಸದೆ ಒಬಿಸಿ ಆಯೋಗವು ಮೀಸಲಾತಿ ನಿರ್ಧರಿಸಿದೆ. ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಮೂರು ಹಂತದ ಪರೀಕ್ಷೆಯ ಮಾನದಂಡ ಅನುಸರಿಸಿಲ್ಲ. ಹೀಗಾಗಿ, ಒಬಿಸಿ ಆಯೋಗದ ವರದಿಯಂತೆ ಮೀಸಲು ಪರಿಗಣಿಸಬಾರದು. ಹೊಸದಾಗಿ ಒಬಿಸಿ ಸಮುದಾಯಗಳ ಸಮೀಕ್ಷೆ ನಡೆಸಲು ನಿರ್ದೇಶನ ನೀಡಬೇಕು. ಕೆಲವು ವಿಧಾನಸಭಾ ಕ್ಷೇತ್ರಗಳ ಎಲ್ಲಾ ವಾರ್ಡ್ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಈ ನಿಟ್ಟಿನಲ್ಲಿಯೂ ಇದು ದೋಷಪೂರಿತ” ಎಂದು ವಾದಿಸಿದರು.

Also Read
[ಬಿಬಿಎಂಪಿ] ಸರ್ಕಾರದ ಬಳಿ ಒಬಿಸಿ ಖಚಿತ ದತ್ತಾಂಶವಿಲ್ಲ; ಮೀಸಲಾತಿ ನಿಗದಿ ಸುಪ್ರೀಂ ತೀರ್ಪಿಗೆ ವಿರುದ್ಧ: ವಕೀಲ ಪಾಟೀಲ್‌

ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಒಬಿಸಿ ಮೀಸಲು ಪರಿಗಣಿಸದೇ ಚುನಾವಣೆ ನಡೆಸಬಹುದು. ಸುರೇಶ್‌ ಮಹಾಜನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಇಲ್ಲೂ ಅನ್ವಯಿಸುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚುನಾವಣೆ ನಡೆಸಲು ಆದೇಶಿಸುವಂತೆ ಮನವಿ ಮಾಡಿದರು. ಅಲ್ಲದೆ, ಹೊಸದಾಗಿ ಒಬಿಸಿ ಕುರಿತು ವರದಿ ಪಡೆಯುವುದು ವಿಳಂಬವಾಗುತ್ತದೆ. ಮೂರು ಹಂತದ ಪರಿಶೀಲನೆಯ ಆಧಾರದಲ್ಲಿ ಮೀಸಲಾತಿ ರೂಪಿಸಲು ಸಮಯಬೇಕಾಗುತ್ತದೆ. ಒಂದು ವೇಳೆ ಮೀಸಲು ಮರು ರೂಪಿಸಲು ನಿರ್ದೇಶನ ನೀಡಿದರೆ ಒಂದು ವಾರ ಮಾತ್ರ ಸಮಯ ನೀಡಬೇಕು. ಕೇಂದ್ರ ಚುನಾವಣಾ ಆಯೋಗಕ್ಕೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮರಳಿಸಬೇಕಿದೆ. ಹೀಗಾಗಿ, ಮೀಸಲು ಮರುರೂಪಿಸಲು ಹೆಚ್ಚಿನ ಸಮಯ ನೀಡಬಾರದು” ಎಂದು ಮನವಿ ಮಾಡಿದರು.

ಸುದೀರ್ಘ ಎರಡು ತಾಸಿಗೂ ಹೆಚ್ಚು ಸಮಯ ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com