ಬಿಬಿಎಂಪಿ ಚುನಾವಣೆ: ಹೊಸದಾಗಿ ಮೀಸಲು ನಿಗದಿ ಕುರಿತು ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಒಬಿಸಿಗೆ ಸೂಕ್ತ ಮೀಸಲು ಕಲ್ಪಿಸಲು ಸರ್ಕಾರ ಸಿದ್ದವಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎರಡು ತಿಂಗಳಲ್ಲಿ ಮೂರು ಹಂತದ ಪರಿಶೀಲನೆ (ಟ್ರಿಪಲ್ ಟೆಸ್ಟ್) ಪ್ರಕಾರವೇ ಒಬಿಸಿಗೆ ವಾರ್ಡ್‌ವಾರು ಮೀಸಲು ಒದಗಿಸುತ್ತೇವೆ ಎಂದ ಎಎಜಿ ಧ್ಯಾನ್‌ ಚಿನ್ನಪ್ಪ.
BBMP and Karnataka HC
BBMP and Karnataka HC

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡ್‌ಗಳಿಗೆ ಈಗ ನಿಗದಿಪಡಿಸಿರುವ ವಾರ್ಡ್‌ವಾರು ಮೀಸಲನ್ನು ಹೊಸದಾಗಿ ನಿಗದಿ ಮಾಡಲು ಸಾಧ್ಯವೇ ಎಂಬ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೇ, ಅಲ್ಲಿಯವರೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದೆ.

ಬೆಂಗಳೂರಿನ ಈಜಿಪುರದ ಕೆ ಮಹದೇವ ಮತ್ತಿತರರು ಮೀಸಲಾತಿಗೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಂಕಿ-ಅಂಶ ಸಂಗ್ರಹಿಸಿ ಹೊಸದಾಗಿ ಮೀಸಲು ನಿಗದಿ ಮಾಡಲು ಸಾಧ್ಯವೇ? ಹೊಸದಾಗಿ ಮೀಸಲು ನಿಗದಿಪಡಿಸಲು ಎಷ್ಟು ಕಾಲಾವಕಾಶ ಬೇಕು ಎನ್ನುವ ಬಗ್ಗೆ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಅಲ್ಲಿಯವರೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸದಂತೆ ಆಯೋಗಕ್ಕೆ ನಿರ್ದೇಶಿಸಿತು.

ಮುಂದುವರಿದು, “ಚುನಾವಣೆ ವಿಳಂಬವಾಗಬಾರದು, ಸುಪ್ರೀಂ ಕೋರ್ಟ್‌ನ ಆದೇಶದಂತೆ ನಡೆಯಬೇಕು. ಆದಷ್ಟೂ ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಲೇಬೇಕು” ಎಂದು ಪೀಠ ಅಭಿಪ್ರಾಯಪಟ್ಟಿತು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ‘‘ಒಬಿಸಿಗೆ ಸೂಕ್ತ ಮೀಸಲು ಕಲ್ಪಿಸಲು ಸರ್ಕಾರ ಸಿದ್ದವಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎರಡು ತಿಂಗಳಲ್ಲಿ ಮೂರು ಹಂತದ ಪರಿಶೀಲನೆ (ಟ್ರಿಪಲ್ ಟೆಸ್ಟ್) ಪ್ರಕಾರವೇ ಒಬಿಸಿಗೆ ವಾರ್ಡ್‌ವಾರು ಮೀಸಲು ಒದಗಿಸುತ್ತೇವೆ’’ ಎಂದರು.  

ಇದಕ್ಕೆ ಆಕ್ಷೇಪಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಬಿಬಿಎಂಪಿ ಅಧಿಕಾರ ಮುಗಿದು ಎರಡು ವರ್ಷಗಳಾಗಿವೆ. ಸದ್ಯ ಬಿಬಿಎಂಪಿಯಲಿ ಆಡಳಿತಾಧಿಕಾರಿ ಅಧಿಕಾರ ನಡೆಸುತ್ತಿದ್ದಾರೆ. ಅದಕ್ಕೆ ಸಂವಿಧಾನದ ಆಶಯದಂತೆ ಚುನಾವಣೆ ನಡೆಯಬೇಕು. ಒಬಿಸಿ ಮೀಸಲಾತಿ ಕಾರಣಕ್ಕೆ ಚುನಾವಣೆ ನಡೆಸುವುದರಿಂದ ವಿಳಂಬ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್ ಕೂಡಲೇ ಚುನಾವಣೆ ನಡೆಸಲು ಸೂಚನೆ ನೀಡಿದೆ. ಹೀಗಾಗಿ, ಹಾಲಿ ನಿಗದಿ ಮಾಡಿರುವ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು” ಎಂದು ಕೋರಿದರು.

Also Read
ಬಿಬಿಎಂಪಿ ಚುನಾವಣೆ: ಮಹಿಳಾ ಮೀಸಲಾತಿ, ಒಬಿಸಿ ಆಯೋಗದ ವರದಿ ಕುರಿತು ಸರ್ಕಾರದಿಂದ ವಿವರಣೆ ಬಯಸಿದ ಹೈಕೋರ್ಟ್‌

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಜಯಕುಮಾರ್‌ ಪಾಟೀಲ್‌, ಎ ಎಸ್‌ ಪೊನ್ನಣ್ಣ, ವಕೀಲರಾದ ಸಂದೀಪ್‌ ಪಾಟೀಲ್‌, ಜಯ ಮೊವಿಲ್‌, ಪೊನ್ನಪ್ಪ, ರಾಕೇಶ್‌ ಭಟ್‌ ಅವರು ‘‘ಒಬಿಸಿ ಮೀಸಲು ನಿಗದಿಗೆ ಸಮೀಕ್ಷೆ ನಡೆಸಿಲ್ಲ. ಒಬಿಸಿ ಆಯೋಗ ಸಮೀಕ್ಷೆ ನಡೆಸದೇ ಮೀಸಲಾತಿ ನಿರ್ಧರಿಸಿದೆ. ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಚುನಾವಣಾ ಆಯೋಗ ಮೂರು ಹಂತದ ಪರಿಶೀಲನೆ ಮಾನದಂಡ ಅನುಸರಿಸಿಲ್ಲ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಾ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಹೀಗಾಗಿ, ಹೊಸದಾಗಿ ಒಬಿಸಿ ಸಮೀಕ್ಷೆ ನಡೆಸಲು ನಿರ್ದೇಶನ ನೀಡಬೇಕು,’’‘ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ (ಸೆ.30) ಮುಂದೂಡಿತು.

Related Stories

No stories found.
Kannada Bar & Bench
kannada.barandbench.com