ಬಿಬಿಎಂಪಿ ಚುನಾವಣೆ: ಮೀಸಲಾತಿ ನಿಗದಿ ಪುನರ್‌ ಪರಿಶೀಲನೆ ಸಂಬಂಧ ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಇದುವರೆಗೆ ಯಾವ ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿ ಒದಗಿಸಿಲ್ಲ. ಆದ್ದರಿಂದ, ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂಬುದು ಅರ್ಜಿದಾರರ ಕೋರಿಕೆ.
BBMP and Karnataka HC
BBMP and Karnataka HC

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡ್‌ಗಳಿಗೆ ಈಗ ಮೀಸಲಾತಿ ನಿಗದಿ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸುವ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಈಜಿಪುರದ ಕೆ ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರು, ಕೆಲವು ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್‌ಗಳನ್ನೂ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಆ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ಷೇಪಿಸಿದರು.

ಆಗ ಪೀಠವು ಮೀಸಲು ನಿಗದಿಯಲ್ಲಿ ಏನಾದರೂ ಲೋಪ ಕಂಡರೆ ಹೊಸದಾಗಿ ಮೀಸಲು ನಿಗದಿಪಡಿಸುವಂತೆ ಅದೇಶ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ಕುರಿತು ಹೊಸದಾಗಿ ವಾರ್ಡ್‌ವಾರು ಮೀಸಲು ನಿಗದಿ ಮಾಡುವ ಬಗ್ಗೆ ಸರ್ಕಾರದ ನಿಲುವು ಏನು ಎಂಬುದನ್ನು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ನಿರ್ದೇಶನ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್‌ 16ಕ್ಕೆ ಮುಂದೂಡಿತು.

ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಸೆಪ್ಟೆಂಬರ್‌ 22ಕ್ಕೆ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು. ಆನಂತರ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದು ಮಾಡುವಂತೆ ಅರ್ಜಿದಾರರು ಕೋರಿದ್ದಾರೆ. ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಡಾ. ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲು ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಕೃಷ್ಣಮೂರ್ತಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವ ಮೂರು ಹಂತದ ಪರಿಶೀಲನೆ (ಟ್ರಿಪಲ್ ಟೆಸ್ಟ್) ಅನ್ನು ಭಕ್ತವತ್ಸಲ ಸಮಿತಿಯೇ ಅನ್ವಯಿಸಿಕೊಂಡಿಲ್ಲ. ರಾಜ್ಯ ಸರ್ಕಾರ ಸಹ ಮೀಸಲು ಕಲ್ಪಿಸುವಾಗ ಮೂರು ಹಂತದ ಪರಿಶೀಲನೆ ಪರಿಗಣಿಸಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.

Also Read
ಬಿಬಿಎಂಪಿ ಚುನಾವಣೆ: ಮೀಸಲಾತಿ ರದ್ದು ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ, ಆಯೋಗಕ್ಕೆ ಹೈಕೋರ್ಟ್‌ ಆದೇಶ

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ರಾಜಕೀಯ ಮೀಸಲಾತಿಗೆ ಮಾನದಂಡವೇ ಬೇರೆ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡುವಂತೆ ರಾಜಕೀಯ ಮೀಸಲು ನೀಡಲು ಸಾಧ್ಯವಿಲ್ಲ. ಯಾವ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲವೋ ಅಂತಹ ಜಾತಿಗಳಿಗೆ ಮೀಸಲು ಕಲ್ಪಿಸಬೇಕಾಗುತ್ತದೆ. ಆದರೆ, ಬಿಬಿಎಂಪಿ ವಾರ್ಡ್ ಮೀಸಲು ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಭಕ್ತವತ್ಸಲ ಸಮಿತಿ ಸಹ ಸೂಕ್ತ ವಿಧಾನ ಅನುಸರಿಸಿಲ್ಲ. ಇದುವರೆಗೆ ಯಾವ ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿ ಒದಗಿಸಿಲ್ಲ. ಆದ್ದರಿಂದ, ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅವರು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com